ಭಾರತ ಎದುರು 2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ ಭರ್ಜರಿ ಜಯಟೀಂ ಇಂಡಿಯಾ ಎದುರು 5 ವಿಕೆಟ್‌ಗಳ ಜಯ ಸಾಧಿಸಿದ ವಿಂಡೀಸ್5 ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಸಮಬಲ

ಬಾಸೆಟೆರೆ(ಆ.02): ವೇಗಿ ಒಬೆಡ್ ಮೆಕಾಯ್ ಮಾರಕ ದಾಳಿ ಹಾಗೂ ಬ್ರೆಂಡನ್ ಕಿಂಗ್ ಸ್ಪೋಟಕ ಅರ್ಧಶತಕದ ನೆರವಿನಿಂದ ಭಾರತ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿವೆ. 

ಇಲ್ಲಿನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 139 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ತಂಡವು ಮೊದಲ ವಿಕೆಟ್‌ಗೆ ಬ್ರೆಂಡನ್ ಕಿಂಗ್ ಹಾಗೂ ಕೈಲ್‌ ಮೇಯರ್ಸ್‌ 6.1 ಓವರ್‌ಗಳಲ್ಲಿ 46 ರನ್‌ಗಳ ಜತೆಯಾಟ ನಿಭಾಯಿಸಿದರು. ಕೈಲ್ ಮೇಯರ್ಸ್‌ 8 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ನಿಕೋಲಸ್ ಪೂರನ್‌ 14 ಹಾಗೂ ಶಿಮ್ರೊನ್ ಹೆಟ್ಮೇಯರ್ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಆದರೆ ವೆಸ್ಟ್‌ ಇಂಡೀಸ್‌ನ ಆರಂಭಿಕ ಬ್ಯಾಟರ್‌ ಬ್ರೆಂಡನ್ ಕಿಂಗ್ ಒಂದು ಮೂಲೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 52 ಎಸೆತಗಳನ್ನು ಎದುರಿಸಿದ ಬ್ರೆಂಡನ್ ಕಿಂಗ್‌ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 68 ರನ್‌ ಬಾರಿಸಿ ಆವೇಶ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಇದಾದ ಬಳಿಕ ವಿಕೆಟ್‌ ಕೀಪರ್ ಬ್ಯಾಟರ್ ಡೆವೊನ್ ಥಾಮಸ್‌ ಕೇವಲ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ತಂಡದ ಪರ ಆರ್ಶದೀಪ್ ಸಿಂಗ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯ ಹಾಗೂ ಆವೇಶ್ ಖಾನ್ ಒಂದು ವಿಕೆಟ್ ಪಡೆದರು. ಆದರೆ ಸ್ವಿಂಗ್ ಸ್ಪೆಷಲಿಸ್ಟ್‌ ಭುವನೇಶ್ವರ್ ಕುಮಾರ್‌ಗೆ ಯಾವುದೇ ವಿಕೆಟ್ ದಕ್ಕಲಿಲ್ಲ.

Breaking News: ದಯವಿಟ್ಟು ಗಮನಿಸಿ, ಇಂದಿನ ಇಂಡೋ-ವಿಂಡೀಸ್ T20I ಪಂದ್ಯ ಆರಂಭದ ಸಮಯ ಬದಲು..!

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ವಿಂಡೀಸ್ ವೇಗಿ ಒಬೆಡ್ ಮೆಕಾಯ್ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಒಬೆಡ್ ಮೆಕಾಯ್ ಮಾರಕ ದಾಳಿಗೆ ಟೀಂ ಇಂಡಿಯಾ ಅಕ್ಷರಶಃ ತತ್ತರಿಸಿ ಹೋಯಿತು. ಹಾರ್ದಿಕ್ ಪಾಂಡ್ಯ(31) ಹೊರತುಪಡಿಸಿ ಟೀಂ ಇಂಡಿಯಾದ ಯಾವೊಬ್ಬ ಬ್ಯಾಟರ್ ಸಹ ಭಾರತ ಪರ 30+ ರನ್ ಬಾರಿಸಲು ಸಫಲರಾಗಲಿಲ್ಲ. 

Scroll to load tweet…

ವಿಂಡೀಸ್ ವೇಗಿ ಒಬೆಡ್ ಮೆಕಾಯ್‌ 4 ಓವರ್‌ ಬೌಲಿಂಗ್ ಮಾಡಿ ಒಂದು ಮೇಡನ್ ಓವರ್ ಸಹಿತ ಕೇವಲ 17 ರನ್ ನೀಡಿ ಭಾರತದ ಪ್ರಮುಖ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಒಬೆಡ್ ಮೆಕಾಯ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು. ಮೆಕಾಯ್‌ಗೆ ಉತ್ತಮ ಸಾಥ್ ನೀಡಿದ ಜೇಸನ್ ಹೋಲ್ಡರ್ 2 ಹಾಗೂ ಅಕೆಲ್ ಹುಸೈನ್ ಮತ್ತು ಅಲ್ಜೆರಿ ಜೋಸೆಫ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.