ಕ್ರೈಸ್ಟ್‌ಚರ್ಚ್‌(ಜ.04): 2021ರ ಹೊಸ ವರ್ಷದಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಮೊದಲ ಶತಕ ಬಾರಿಸಿದ್ದಾರೆ. ಪಾಕಿಸ್ತಾನ ವಿರುದ್ದ ಇಲ್ಲಿನ ಹಾಗ್ಲೇ ಓವರ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದಲ್ಲಿ ಈ ವರ್ಷದ ಮೊದಲ ಶತಕ ದಾಖಲಾಗಿದೆ. ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್‌ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 286 ರನ್ ಬಾರಿಸಿದ್ದು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

ಹೌದು, ಪಾಕಿಸ್ತಾನ ವಿರುದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಕರ್ಷಕ ದ್ವಿತಕ ಬಾರಿಸಿ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೇನ್ ವಿಲಿಯಮ್ಸನ್‌, ಎರಡನೇ ಟೆಸ್ಟ್‌ ಪಂದ್ಯದಲ್ಲೂ ತಮ್ಮ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಪಾಕಿಸ್ತಾನ ತಂಡ 297 ರನ್‌ಗಳಿಗೆ ಆಲೌಟ್‌ ಆಗಿತ್ತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ತಂಡಕ್ಕೆ ಟಾಮ್ ಲಾಥಮ್(33) ಹಾಗೂ ಟಾಮ್ ಬ್ಲಂಡೆಲ್‌(16) ಮೊದಲ ವಿಕೆಟ್‌ಗೆ 52 ರನ್‌ಗಳ ಜತೆಯಾಟವಾಡಿದರು. ಕೇವಲ ಎರಡು ಓವರ್‌ ಅಂತರದಲ್ಲಿ ಈ ಇಬ್ಬರು ಆಟಗಾರರು ಪೆವಿಲಿಯನ್‌ ಸೇರಿದರು. ಇನ್ನು ಅನುಭವಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಆಟ ಕೇವಲ 12 ರನ್‌ಗಳಿಗೆ ಸೀಮಿತವಾಯಿತು. ಈ ಮೂಲಕ ಕೇವಲ 71 ರನ್‌ಗಳಿಗೆ ನ್ಯೂಜಿಲೆಂಡ್ ತಂಡ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಜಿಂಕ್ಯ ರಹಾನೆ ಹುಟ್ಟಿದ್ದೇ ತಂಡಗಳನ್ನು ಮುನ್ನಡೆಸಲು: ಇಯಾನ್ ಚಾಪೆಲ್‌

ವಿಲಿಯಮ್ಸನ್‌-ನಿಕೋಲಸ್‌ ಜುಗಲ್ಬಂದಿ: ಕಿವೀಸ್‌ ಪಡೆ ಮೂರಂಕಿ ಮೊತ್ತ ದಾಖಲಿಸುವ ಮುನ್ನವೇ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರಿಂದ ತಂಡ ಕೆಲಕಾಲ ಆತಂಕಕ್ಕೆ ಒಳಗಾಗಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಜತೆಯಾದ ನಾಯಕ ವಿಲಿಯಮ್ಸನ್‌ ಹಾಗೂ ಹೆನ್ರಿ ನಿಕೋಲಸ್ ಜೋಡಿ ಮುರಿಯದ 215ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲಿಗೆ ಬರೋಬ್ಬರಿ 105 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದ ವಿಲಿಯಮ್ಸನ್‌, ಆ ಬಳಿಕ ಕೇವಲ 35 ಎಸೆತಗಳಲ್ಲೇ ಮಿಂಚಿನ ಶತಕ ಬಾರಿಸಿದರು. ಈ ಮೂಲಕ ವಿಲಿಯಮ್ಸನ್‌ ತಮ್ಮ ವೃತ್ತಿಜೀವನದ 24ನೇ ಶತಕ ಬಾರಿಸುವುದರ ಜತೆಗೆ ಹೊಸ ವರ್ಷದಲ್ಲಿ ಮೊದಲ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಭಾಜನರಾದರು. 

ಎರಡನೇ ದಿನದಾಟದಂತ್ಯದ ವೇಳೆಗೆ ವಿಲಿಯಮ್ಸನ್‌ 175 ಎಸೆತಗಳನ್ನು ಎದುರಿಸಿ 16 ಬೌಂಡರಿ ಸಹಿತ 112 ರನ್ ಬಾರಿಸಿ ಅಜೇಯರಾಗುಳಿದರೆ, ಮತ್ತೊಂದು ತುದಿಯಲ್ಲಿ ಹೆನ್ರಿ ನಿಕೋಲಸ್ 186 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 89 ರನ್‌ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.