ಸಿಡ್ನಿ(ಜ.03): ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಓರ್ವ ಧೈರ್ಯಶಾಲಿ, ಚಾಣಾಕ್ಷ ನಾಯಕನಾಗಿದ್ದು, ಆತ ಹುಟ್ಟಿದ್ದೇ ತಂಡವನ್ನು ಮುನ್ನಡೆಸುವುದಕ್ಕಾಗಿ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಇಯಾನ್ ಚಾಪೆಲ್‌, ರಹಾನೆಯನ್ನು ಗುಣಗಾನ ಮಾಡಿದ್ದಾರೆ.

ಮೆಲ್ಬರ್ನ್‌ ಟೆಸ್ಟ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರಲ್ಲಿ ನನಗೇನು ಆಶ್ಚರ್ಯವಾಗುತ್ತಿಲ್ಲ. ಯಾಕೆಂದರೆ ರಹಾನೆಯಲ್ಲಿ ಉತ್ತಮ ನಾಯಕತ್ವ ಗುಣಗಳಿವೆ ಎಂದು ಚಾಪೆಲ್‌ ಕೊಂಡಾಡಿದ್ದಾರೆ.

ಅಡಿಲೇಡ್‌ನಲ್ಲಿ ನಡೆದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು. ಇದೆಲ್ಲದರ ಹೊರತಾಗಿಯೂ ರಹಾನೆ ನೇತೃತ್ವದ ಟೀಂ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

ರವಿಚಂದ್ರನ್‌ ಅಶ್ವಿನ್ ಭಾರತ ತಂಡದ ಬೌಲಿಂಗ್‌ ಕ್ಯಾಪ್ಟನ್‌ ಎಂದ ಟೀಂ ಇಂಡಿಯಾ ಮಾಜಿ ಸ್ಪಿನ್ನರ್..!

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ರಹಾನೆ ಟೀಂ ಇಂಡಿಯಾ ಮುನ್ನಡೆಸಿದ ರೀತಿ ನನಗೆ ಅಷ್ಟೇನು ಆಶ್ಚರ್ಯವೆನಿಸುತ್ತಿಲ್ಲ. 2017ರಲ್ಲಿ ರಹಾನೆ ಧರ್ಮಶಾಲಾದಲ್ಲಿ ತಂಡವನ್ನು ಮುನ್ನಡೆಸಿದ ರೀತಿ ಗಮನಿಸಿದವರಿಗೆ ಇದು ಅರ್ಥವಾಗುತ್ತದೆ. ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದು ತಂಡಕ್ಕೆ ವರದಾನವಾಗಿ ಪರಿಣಮಿಸಿತು. ರಹಾನೆ ಆಕ್ರಮಣಕಾರಿ ನೀತಿ ತಂಡಕ್ಕೆ ಅನುಕೂಲವಾಯಿತು ಎಂದು ಚಾಪೆಲ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

2017ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು. ಸ್ಮಿತ್ ಹಾಗೂ ವಾರ್ನರ್ ಶತಕದ ಜತೆಯಾಟವಾಡುತ್ತಿದ್ದಾಗ ಅದೇ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಕುಲ್ದೀಪ್‌ ಯಾದವ್‌ ಅವರನ್ನು ಬೌಲಿಂಗ್ ಇಳಿಸುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಇದರ ಜತೆಗೆ ಕುಲ್ದೀಪ್ ಆಸೀಸ್‌ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದರು. ಭಾರತ ಆ ಪಂದ್ಯವನ್ನು ಜಯಿಸಿತ್ತು