WTC Final: ನಂ.1 ಟೆಸ್ಟ್ ಶ್ರೇಯಾಂಕಿತ ಬೌಲರ್ ಅಶ್ವಿನ್ ಕೈಬಿಟ್ಟಿದ್ದಕ್ಕೆ ಅಸಮಾಧಾನ ಹೊರಹಾಕಿದ ಸನ್ನಿ..!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ-ಅಸ್ಟ್ರೇಲಿಯಾ ಫೈಟ್
ಅಶ್ವಿನ್ ಕೈಬಿಟ್ಟ ಟೀಂ ಇಂಡಿಯಾ ನಡೆಗೆ ಸುನಿಲ್ ಗವಾಸ್ಕರ್ ಅಚ್ಚರಿ
ರವಿಚಂದ್ರನ್ ಅಶ್ವಿನ್, ಟೆಸ್ಟ್ ಶ್ರೇಯಾಂಕದ ನಂ.1 ಬೌಲರ್
ಲಂಡನ್(ಜೂ.08): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಅಶ್ವಿನ್ ಅವರಿಗೆ ಸ್ಥಾನ ನೀಡದ್ದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಮೊದಲ ದಿನವೇ ಆಸ್ಪ್ರೇಲಿಯಾ ಮೇಲುಗೈ ಸಾಧಿಸಿದ್ದು, ಟ್ರ್ಯಾವಿಸ್ ಹೆಡ್‌ರ ಶತಕ ಹಾಗೂ ಸ್ಟೀವ್ ಸ್ಮಿತ್‌ರ ಆಕರ್ಷಕ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್‌್ಸನಲ್ಲಿ ದೊಡ್ಡ ಮೊತ್ತ ಕಲೆಹಾಕುವತ್ತ ಹೆಜ್ಜೆ ಹಾಕಿದೆ.
ಬುಧವಾರ ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಅವಧಿಯಲ್ಲಿ ಎದುರಾಳಿಯ ಮೇಲೆ ಹಿಡಿತ ಸಾಧಿಸಿದರೂ, 4ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಸ್ಮಿತ್ ಹಾಗೂ ಹೆಡ್, ಅಜೇಯ 251 ರನ್ ಜೊತೆಯಾಟವಾಡಿ ಭಾರತೀಯರ ಬೆವರಿಳಿಸಿದರು. ಮೊದಲ ದಿನದಂತ್ಯಕ್ಕೆ ಆಸೀಸ್ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
ಅಶ್ವಿನ್‌ಗಿಲ್ಲ ಸ್ಥಾನ, ಸುನಿಲ್ ಗವಾಸ್ಕರ್ ಅಚ್ಚರಿ:
2021-23ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 61 ವಿಕೆಟ್ ಕಬಳಿಸುವ ಮೂಲಕ ಈ ಅವಧಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಹೀಗಿದ್ದೂ ಅಶ್ವಿನ್‌ಗೆ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಅವರಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಸುನಿಲ್ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಶ್ವಿನ್ 25 ವಿಕೆಟ್ ಕಬಳಿಸುವ ಮೂಲಕ ರವೀಂದ್ರ ಜಡೇಜಾ ಜತೆಗೂಡಿ ಜಂಟಿ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
WTC Final: ಆಸ್ಟ್ರೇಲಿಯಾ ಎದುರು ಮೊದಲ ದಿನ ಟೀಂ ಇಂಡಿಯಾ ಮಾಡಿದ 4 ಮಹಾ ಎಡವಟ್ಟುಗಳಿವು..!
ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕುರಿತಂತೆ ಮಾತನಾಡಿದ ಸುನಿಲ್ ಗವಾಸ್ಕರ್, "ಮೊಟ್ಟ ಮೊದಲಿಗೆ ಹೇಳಬೇಕೆಂದರೆ, ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದೊಳಗೆ ಸ್ಥಾನ ನೀಡಬೇಕಿತ್ತು. ಯಾವುದೇ ವಾತವರಣವೇ ಇರಲಿ, ಅಶ್ವಿನ್ ಅವರನ್ನು ಕೈಬಿಟ್ಟಿದ್ದು ನನಗಂತೂ ನಿಜಕ್ಕೂ ಅಚ್ಚರಿ ಮೂಡಿಸಿದೆ. ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಬೌಲರ್ ಆಗಿರುವ ಅಶ್ವಿನ್, ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯದೇ ಹೋದದ್ದು ನನ್ನನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಇನ್ನು ಕಳೆದ ಬಾರಿ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೂ ಅಶ್ವಿನ್ ಭಾರತ ತಂಡದಲ್ಲಿದ್ದರೇ ಹೊರತು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು" ಎಂದು ಗವಾಸ್ಕರ್ ಹೇಳಿದ್ದಾರೆ.
"ಆಸ್ಟ್ರೇಲಿಯಾ ತಂಡದಲ್ಲಿ ಸಾಕಷ್ಟು ಎಡಗೈ ಬ್ಯಾಟರ್‌ಗಳಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಆಫ್‌ಸ್ಪಿನ್ನರ್ ಇರಬೇಕಿತ್ತು. ಈ ವಿಚಾರದಲ್ಲಿ ಭಾರತ ತಪ್ಪು ಮಾಡಿದೆ ಎಂದೆನಿಸುತ್ತಿದೆ" ಎಂದು ಗವಾಸ್ಕರ್ ಹೇಳಿದ್ದಾರೆ
ಇನ್ನು ಭಾರತ ತಂಡದಲ್ಲಿ ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಅವರಿಗೆ ಸ್ಥಾನ ನೀಡಿದ್ದರ ಕುರಿತಂತೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಿಟ್ನೆಸ್ ಸಮಸ್ಯೆಯಿಂದಾಗಿ ಬೆಂಚ್ ಕಾಯಿಸಿದ್ದ ಉಮೇಶ್ ಯಾದವ್, ಟೆಸ್ಟ್ ವಿಶ್ವಕಪ್ ಫೈನಲ್‌ನ ಮೊದಲ ದಿನ ಆಸ್ಟ್ರೇಲಿಯಾ ಎದುರು ಕೇವಲ 14 ಓವರ್ ಬೌಲಿಂಗ್ ಮಾಡಿ 54 ರನ್ ಬಿಟ್ಟುಕೊಟ್ಟಿದ್ದರು. ಆದರೆ ಯಾವುದೇ ವಿಕೆಟ್ ಕಬಳಿಸಲು ವಿಫಲವಾಗಿದ್ದರು. ಇನ್ನು ಶಾರ್ದೂಲ್ ಠಾಕೂರ್ 18 ಓವರ್ ಬೌಲಿಂಗ್ ಮಾಡಿ 75 ರನ್ ನೀಡಿ ಕೇವಲ ಒಂದು ವಿಕೆಟ್ ಕಬಳಿಸಿದ್ದರು.
ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಿನ ಬೌಲಿಂಗ್ ಮಾಡದ ವೇಗಿಗಳಾದ ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಮೊದಲ ದಿನವೇ ಸಾಕಷ್ಟು ದಣಿದಂತೆ ಕಂಡು ಬಂದರು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.