ನವದೆಹಲಿ(ಜ.30): ಐಸಿಸಿ ಪ್ಯಾನಲ್‌ ಅಂಪೈರ್‌ಗಳಾದ ನಿತಿನ್‌ ಮೆನನ್‌, ಅನಿಲ್‌ ಚೌಧರಿ ಮತ್ತು ವೀರೇಂದರ್‌ ಶರ್ಮಾ ಫೆಬ್ರವರಿ 5 ರಿಂದ ಆರಂಭವಾಗಲಿರುವ ಭಾರತ, ಇಂಗ್ಲೆಂಡ್‌ ನಡುವಣ ಟೆಸ್ಟ್‌ ಸರಣಿಯ ಮೊದಲ 2 ಪಂದ್ಯಗಳಿಗೆ ಅಂಪೈರ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. 

ಅನಿಲ್‌ ಹಾಗೂ ವೀರೇಂದರ್‌, ಐಸಿಸಿ ಎಮಿರೇಟ್ಸ್‌ ಪ್ಯಾನಲ್‌ನಲ್ಲಿದ್ದಾರೆ. ನಿತಿನ್‌ ಐಸಿಸಿ ಎಲೈಟ್‌ ಪ್ಯಾನಲ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ನಿತಿನ್‌, ಈವರೆಗೂ 3 ಟೆಸ್ಟ್‌ಗಳಲ್ಲಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ನಿತಿನ್ ಮೆನನ್ ಐಸಿಸಿ ಎಲೈಟ್‌ ಪ್ಯಾನಲ್‌ನಲ್ಲಿ ಸ್ಥಾನ ಪಡೆದಿರುವ ಏಕೈಕ ಅಂಪೈರ್ ಎನಿಸಿದ್ಧಾರೆ. ಆದರೆ ಅನಿಲ್ ಚೌಧರಿ ಹಾಗೂ ವಿರೇಂದ್ರ ಶರ್ಮಾ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಂಪೈರಿಂಗ್‌ ಮಾಡಲು ರೆಡಿಯಾಗಿದ್ದಾರೆ.

ಇಂಡೋ-ಆಂಗ್ಲೋ ಸರಣಿಗೆ ಭಾರೀ ಡಿಮ್ಯಾಂಡ್‌; ಪ್ರತಿ 10 ಸೆಕೆಂಡ್‌ ಜಾಹಿರಾತಿಗೆ 7-8 ಲಕ್ಷ ರುಪಾಯಿ..!

ಅನಿಲ್‌ ಚೌಧರಿ ಇದುವರೆಗೂ 20 ಏಕದಿನ ಹಾಗೂ 28 ಟಿ20 ಪಂದ್ಯಗಳಲ್ಲಿ ಅಂಪೈರಿಂಗ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿರೇಂದ್ರ ಶರ್ಮಾ 2 ಏಕದಿನ ಹಾಗೂ ಒಂದು ಟಿ20 ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.  ಕೋವಿಡ್‌ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಹಲವು ನಿರ್ಬಂಧಗಳಿರುವ ಕಾರಣ ಸ್ಥಳೀಯ ಅಂಪೈರ್‌ಗಳಿಗೆ ಐಸಿಸಿ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಮೊದಲೆರಡು ಟೆಸ್ಟ್‌ ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ.