55 ಎಸೆತಗಳಲ್ಲಿ ಅಜೇಯ 137 ರನ್ ಚಚ್ಚಿದ ನಿಕೋಲಸ್ ಪೂರನ್; ಮುಂಬೈ ಮುಡಿಗೆ ಚೊಚ್ಚಲ MLC ಟ್ರೋಫಿ
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ ಚಾಂಪಿಯನ್
ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ ನಾಯಕ ನಿಕೋಲಸ್ ಪೂರನ್
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಖಾತೆಗೆ ಮತ್ತೊಂದು ಟ್ರೋಫಿ ಸೇರ್ಪಡೆ
ನ್ಯೂಯಾರ್ಕ್(ಜು.31): ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಾದ ಎಂಐ ನ್ಯೂಯಾರ್ಕ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ತಂಡದ ನಾಯಕ ನಿಕೋಲಸ್ ಪೂರನ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಸೇಟಲ್ ಒರಕಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಖಾತೆಗೆ ಮತ್ತೊಂದು ಟ್ರೋಫಿ ಸೇರ್ಪಡೆಯಾಗಿದೆ.
ದಲ್ಲಾಸ್‌ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಒರಕಸ್ ತಂಡವು ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಬಾರಿಸಿದ ಆಕರ್ಷಕ 87 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು. ಈ ಮೂಲಕ ಎಂಐ ನ್ಯೂಯಾರ್ಕ್ ತಂಡಕ್ಕೆ ಫೈನಲ್‌ನಲ್ಲಿ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿತ್ತು. ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡಕ್ಕೆ ನಾಯಕ ನಿಕೋಲಸ್ ಪೂರನ್ ಕೇವಲ 55 ಎಸೆತಗಳನ್ನು ಎದುರಿಸಿ ಅಜೇಯ 137 ರನ್ ಚಚ್ಚುವ ಮೂಲಕ ತಂಡ 7 ವಿಕೆಟ್ ಸುಲಭ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪತ್ನಿ ಆಥಿಯಾ ಶೆಟ್ಟಿ ರ‍್ಯಾಂಪ್ ವಾಕ್ ನೋಡಿದ ಕೆ ಎಲ್ ರಾಹುಲ್ ರಿಯಾಕ್ಷನ್ ಈಗ ವೈರಲ್..!
ಫೈನಲ್ ಪಂದ್ಯದಲ್ಲಿ ನಾಯಕನ ಆಟ ಪ್ರದರ್ಶಿಸಿದ ನಿಕೋಲಸ್ ಪೂರನ್, 13 ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಅದರಲ್ಲೂ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡದ ಪರ 16ನೇ ಓವರ್‌ನಲ್ಲಿ ವಿಂಡೀಸ್ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್, ಹರ್ಮೀತ್ ಸಿಂಗ್ ಬೌಲಿಂಗ್‌ನಲ್ಲಿ 24 ರನ್ ಸಿಡಿಸಿದರು. ಈ ಪೈಕಿ ಹ್ಯಾಟ್ರಿಕ್ ಸಿಕ್ಸರ್ ಕೂಡಾ ಇದೇ ಓವರ್‌ನಲ್ಲಿ ಮೂಡಿ ಬಂದಿತ್ತು.
ಇನ್ನು ಈ ಶತಕದ ನೆರವಿನಿಂದ 2023ನೇ ಸಾಲಿನ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 388 ರನ್ ಬಾರಿಸುವುದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಅಜೇಯ 137 ರನ್, ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಟೂರ್ನಿಯಲ್ಲಿ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ ಈ ಸಂದರ್ಭದಲ್ಲಿ ನಾಯಕನ ಆಟವಾಡಿದ ನಿಕೋಲಸ್ ಪೂರನ್, ನಿರ್ಭಯವಾಗಿ ಬೌಂಡರಿ-ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು.