ಕೇಪ್‌ಟೌನ್‌(ಡಿ.07): ಇಂಗ್ಲೆಂಡ್‌ ತಂಡದ ಇಬ್ಬರು ಸದಸ್ಯರಿಗೆ ಹಾಗೂ ಆಟಗಾರರು ಉಳಿದುಕೊಂಡಿದ್ದ ಹೋಟೆಲ್‌ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಯಿತು. 

ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರಿಗೆ ಸೋಂಕು ತಗುಲಿದೆ ಎನ್ನುವ ಕಾರಣದಿಂದಾಗಿ ಶುಕ್ರವಾರ ನಡೆಯಬೇಕಿದ್ದ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು. ಬಳಿಕ ಶನಿವಾರ ಸಂಜೆ ಮತ್ತೊಮ್ಮೆ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಹೋಟೆಲ್‌ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. 

ಕೊರೋನಾ ಹಾವಳಿ: ದಕ್ಷಿಣ ಆಫ್ರಿಕಾ-ಇಂಗ್ಲೆಂಡ್‌ ಏಕದಿನ ಸರಣಿ ಮುಂದೂಡಿಕೆ..!

ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ವರದಿ ನೆಗೆಟಿವ್‌ ಬಂದಿತ್ತು. ಆದರೆ ಇಂಗ್ಲೆಂಡ್‌ ತಂಡದ ಸದಸ್ಯರ ವರದಿ ಪಾಸಿಟಿವ್‌ ಎಂದು ಬಂದ ಹಿನ್ನೆಲೆಯಲ್ಲಿ ಪಂದ್ಯ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಸೋಂಕಿಗೆ ತುತ್ತಾಗಿರುವುದು ಆಟಗಾರರೋ ಇಲ್ಲ ಸಹಾಯಕ ಸಿಬ್ಬಂದಿಯೋ ಎನ್ನುವುದನ್ನು ಬಹಿರಂಗಪಡಿಸಿಲ್ಲ.

ಇನ್ನು ಎರಡನೇ ಏಕದಿನ ಪಂದ್ಯ ಡಿಸೆಂಬರ್ 07ರಂದು ಆರಂಭವಾಗಬೇಕಿದ್ದು, ಅದರ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಎರಡನೇ ಏಕದಿನ ಪಂದ್ಯಕ್ಕೆ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಮೈದಾನ ಆತಿಥ್ಯವನ್ನು ವಹಿಸಿದೆ.