ನ್ಯೂಜಿಲೆಂಡ್ ವಿರುದ್ದದ ಎರಡನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಮೌಂಟ್ ಮೌಂಗಾನುಯಿಗೆ ಆಗಮಿಸಿದೆ. ಆದರೆ ಹೊಟೆಲ್‌ಗೆ ಆಗಮಿಸುತ್ತಿದ್ದಂತೆ ಟೀಂ ಇಂಡಿಯಾಗೆ ಅಚ್ಚರಿಯಾಗಿದೆ. ಕಾರಣ ನ್ಯೂಜಿಲೆಂಡ್ ಸಾಂಪ್ರದಾಯಿಕ ಪೌಹಿರಿ ಸ್ವಾಗತ ಕೋರಲಾಗಿದೆ. ಇತ್ತ ಪಾಂಡ್ಯ ಸೈನ್ಯ ಕೂಡ ಹಾಕಾ ಹೆಜ್ಜೆ ಹಾಕಿದೆ.

ತೌರಂಗ(ನ.19): ಭಾರತ ಹಾಗೂ ನ್ಯೂಜಿಲೆಡ್ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಇದೀಗ ಎರಡನೇ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಮೌಂಟ್ ಮೌಂಗಾನುಯಿಯಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾ ತೌರಂಗೆ ಆಗಮಿಸಿದೆ. ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಬಂದಿಳಿದ ಟೀಂ ಇಂಡಿಯಾಗೆ ಅಚ್ಚರಿ ಕಾದಿದೆ. ಕಾರಣ ಸಂಪೂರ್ಣ ಟೀಂ ಇಂಡಿಯಾವನ್ನು ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಪೌಹಿರಿ ಶೈಲಿಯಲ್ಲಿ ಸ್ವಾಗತ ಕೋರಲಾಗಿದೆ. ಪೌಹಿರಿ ಸ್ವಾಗತವನ್ನು ಆನಂದಿಸಿದ ಹಾರ್ದಿಕ್ ಪಾಂಡ್ಯ ಸೈನ್ಯ, ತಾವು ಕೂಡ ಅವರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. 

ಪೌಹಿರಿ ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಶೈಲಿಯ ಸ್ವಾಗತ. ಪೌಹಿರಿಗೆ ಮಾವೋರಿ ಸ್ವಾಗತ ಎಂದೂ ಕರೆಯುತ್ತಾರೆ. ನ್ಯೂಜಿಲೆಂಡ್‌ನಲ್ಲಿ ಅತಿಥಿಗಳ ಸ್ವಾಗತಿಸುವ ವಿಶೇಷ ಕಾರ್ಯಕ್ರಮವೇ ಪೌಹಿರಿ. ಈ ಪೌಹಿರಿಯಲ್ಲಿ ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಹಾಕಾ ನೃತ್ಯವೂ ಒಳಗೊಂಡಿರುತ್ತದೆ. ರಗ್ಬಿ ಕ್ರೀಡೆಯಲ್ಲಿ ಈ ಹಾಕಾ ನೃತ್ಯ ಅತ್ಯಂತ ಜನಪ್ರಿಯವಾಗಿದೆ. ನ್ಯೂಜಿಲೆಂಡ್‌ನಲ್ಲಿ ವಿಶೇಷ ಕಾರ್ಯಕ್ರಮಗಳು, ಪ್ರವಾಸಿಗಳು ಗುಂಪುಗಳ ಸ್ವಾಗತದಲ್ಲಿ ಪೌಹರಿ ಹಾಕಾ ಮೂಲಕ ಸ್ವಾಗತ ಕೋರುವುದು ವಿಶೇಷ ಹಾಗೂ ಗೌರವದ ಸಂಕೇತವಾಗಿದೆ. ಇದೀಗ ಇದೇ ರೀತಿಯಲ್ಲಿ ಟೀಂ ಇಂಡಿಯಾಗೂ ಸ್ವಾಗತ ನೀಡಲಾಗಿದೆ. 

ಟೀಂ ಇಂಡಿಯಾ ನೂತನ ಆಯ್ಕೆ ಸಮಿತಿಗೆ 8 ಜವಾಬ್ದಾರಿ, ಮೂರು ಮಾದರಿಗೆ 3 ತಂಡ!

ಅದ್ಧೂರಿ ಸ್ವಾಗತ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರನ್ನುದ್ದೇಶಿ ನೂತನ ಕೋಚ್ ವಿವಿಎಸ್ ಲಕ್ಷ್ಮಣ್ ಮಾತನಾಡಿದ್ದಾರೆ. ಅತ್ಯುತ್ತಮ ಕ್ರಿಕೆಟ್ ಆಡಲು ಸ್ಪೂರ್ತಿ ತುಂಬಿದ್ದಾರೆ. 

Scroll to load tweet…

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಗೆ ಬಲಿಯಾಯಿತು. ಟಾಸ್‌ ಕೂಡ ಕಾಣದೆ ಪಂದ್ಯ ರದ್ದಾಯಿತು. ಸ್ಥಳೀಯ ಕಾಲಮಾನ ರಾತ್ರಿ 9.46ಕ್ಕೆ ಪಂದ್ಯ ಆರಂಭಿಸಲು ಗಡುವು ನೀಡಲಾಗಿತ್ತು. ಆದರೆ ಮಳೆ ನಿಲ್ಲದ ಕಾರಣ ರಾತ್ರಿ 8.52ಕ್ಕೆ ಪಂದ್ಯ ರದ್ದುಗೊಳಿಸಲಾಯಿತು. ಸರಣಿಯ 2ನೇ ಪಂದ್ಯ ಭಾನುವಾರ ಮಾಂಟ್‌ ಮಾಂಗನುಯಿನಲ್ಲಿ ನಡೆಯಲಿದೆ. 

ಆಯ್ಕೆ ಸಮಿತಿ ವಜಾ ಬಳಿಕ ಟೀಂ ಇಂಡಿಯಾಗೆ ಸರ್ಜರಿ, ನಾಯಕತ್ವ ಬದಲಾವಣೆಗೆ ಬಿಸಿಸಿಐ ಪ್ಲಾನ್

ಮೊದಲ ಪಂದ್ಯ ರದ್ದಾಗಿರುವ ಕಾರಣ ಇದೀಗ ಎರಡು ಮತ್ತು ಮೂರನೇ ಪಂದ್ಯದ ಮೇಲಿನ ಕುತೂಹಲ ಹೆಚ್ಚಾಗಿದೆ. ಎರಡೂ ಪಂದ್ಯ ಗೆದ್ದು ಟಿ20 ವಿಶ್ವಕಪ್ ಹೀನಾಯ ಸೋಲಿನಿಂದ ಹೊರಬರಲು ಟೀಂ ಇಂಡಿಯಾ ಸಜ್ಜಾಗಿದೆ. ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ 0-5ರಲ್ಲಿ ಟಿ20 ಸರಣಿಯನ್ನು ಸೋತಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಒತ್ತಡವೂ ವಿಲಿಯಮ್ಸನ್‌ ಪಡೆ ಮೇಲಿದೆ. ಹಿರಿಯ ಆಟಗಾರರಾದ ರೋಹಿತ್‌, ಕೊಹ್ಲಿ, ಅಶ್ವಿನ್‌, ರಾಹುಲ್‌, ಕಾರ್ತಿಕ್‌ ವಿಶ್ರಾಂತಿ ಪಡೆದಿರುವ ಕಾರಣ ಯುವ ಆಟಗಾರರಿಗೆ ಆಯ್ಕೆ ಸಮಿತಿ ಗಮನ ಸೆಳೆಯಲು ಇದು ಉತ್ತಮ ಅವಕಾಶ. 

ಸಂಭವನೀಯ ಆಟಗಾರರ ಪಟ್ಟಿ
ಭಾರತ: ಕಿಶನ್‌, ಗಿಲ್‌, ಶ್ರೇಯಸ್‌/ಸಂಜು/ಹೂಡಾ, ಸೂರ್ಯ, ಪಂತ್‌, ಹಾರ್ದಿಕ್‌(ನಾಯಕ), ವಾಷಿಂಗ್ಟನ್‌, ಹರ್ಷಲ್‌/ಉಮ್ರಾನ್‌, ಭುವನೇಶ್ವರ್‌, ಅಶ್‌ರ್‍ದೀಪ್‌, ಚಹಲ್‌.

ನ್ಯೂಜಿಲೆಂಡ್‌: ಫಿನ್‌ ಆ್ಯಲೆನ್‌, ಕಾನ್‌ವೇ, ವಿಲಿಯಮ್ಸನ್‌(ನಾಯಕ), ಫಿಲಿಫ್ಸ್‌, ಮಿಚೆಲ್‌, ನೀಶಮ್‌, ಸ್ಯಾಂಟ್ನರ್‌, ಟಿಮ್‌ ಸೌಥಿ, ಇಶ್‌ ಸೋಧಿ, ಆ್ಯಡಂ ಮಿಲ್ನೆ, ಫಗ್ರ್ಯೂಸನ್‌.