ವೆಲ್ಲಿಂಗ್ಟನ್(ಡಿ.11): ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲಸ್(117) ಬಾರಿಸಿದ ಅಜೇಯ ಶತಕದ ನೆರವಿನಿಂದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ದ ನ್ಯೂಜಿಲೆಂಡ್ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 294 ರನ್ ಬಾರಿಸಿದ್ದು, ಮೊದಲ ದಿನವೇ ಕೆರಿಬಿಯನ್ನರ ವಿರುದ್ಧ ಹಿಡಿತ ಸಾಧಿಸಿದೆ.

ಹೌದು, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಲಿಳಿದ ಆತಿಥೇಯ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡದ ಮೊತ್ತ 78 ಆಗುವಷ್ಟರಲ್ಲೇ ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಟಾಮ್ ಲಾಥಮ್‌ 27 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್ ಟಾಮ್ ಬ್ಲಂಡೆಲ್ 14 ರನ್ ಬಾರಿಸಿ ಗೇಬ್ರಿಯಲ್‌ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. ಇನ್ನು ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಬ್ಯಾಟಿಂಗ್ ಕೇವಲ 9 ರನ್‌ಗಳಿಗೆ ಸೀಮಿತವಾಯಿತು. 

ಆಸರೆಯಾದ ಹೆನ್ರಿ-ಯಂಗ್ ಜೋಡಿ: ಒಂದು ಹಂತದಲ್ಲಿ ತಂಡ 100 ರನ್  ಕಲೆಹಾಕುವ ಮುನ್ನವೇ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ವಿಲ್ ಯಂಗ್ ಹಾಗೂ ಹೆನ್ರಿ ನಿಕೋಲಸ್ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 70 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. ಯಂಗ್ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಹೆನ್ರಿ ನಿಕೋಲಸ್ 207 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 117 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

2ನೇ ಟೆಸ್ಟ್: ವಿಂಡೀಸ್‌ ಎದುರು ಕಿವೀಸ್‌ ಬೃಹತ್ ಮೊತ್ತದತ್ತ ದಾಪುಗಾಲು..!

ಕೊನೆಯಲ್ಲಿ ಬಿ.ಜೆ. ವ್ಯಾಟ್ಲಿಂಗ್(30) ಹಾಗೂ ಡೈರೆಲ್ ಮಿಚೆಲ್(42) ಹೆನ್ರಿ ನಿಕೋಲಸ್ ಜತೆ ಉಪಯುಕ್ತ ಜತೆಯಾಟ ನೀಡುವ ಮೂಲಕ ತಂಡದ ಮೊತ್ತವನ್ನು 290 ಗಡಿ ದಾಟಿಸುವಲ್ಲಿ ನೆರವಾದರು.

ಇನ್ನು 50ನೇ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಶೆನಾನ್ ಗೇಬ್ರಿಯಲ್ 3 ವಿಕೆಟ್ ಪಡೆದರೆ, ಚೀಮಾರ್ ಹೋಲ್ಡರ್ 2 ವಿಕೆಟ್‌ ಪಡೆದರೆ ಅಲ್ಜೆರಿ ಜೋಸೆಫ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 294/6
ಹೆನ್ರಿ ನಿಕೋಲಸ್: 117
ಶೆನಾನ್ ಗೇಬ್ರಿಯಲ್: 57/3

(*ಮೊದಲ ದಿನದಾಟದಂತ್ಯಕ್ಕೆ)