ಸಿಡ್ನಿ(ಮಾ.14): ಕೊರೋನಾ ವೈರಸ್ ಭೀತಿ ಇಡೀ ಜಗತ್ತನೇ ತಲ್ಲಣಗೊಳಿಸಿದೆ. ಕೊರೋನಾ ಎನ್ನುವ ಹೆಮ್ಮಾರಿ ಕ್ರೀಡಾ ಕ್ಷೇತ್ರದ ಮೇಲೂ ಕೆಂಗಣ್ಣನ್ನು ಬೀರಿದೆ. ಕರೋನಾದಿಂದಾಗಿ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ. ಇದಕ್ಕೆ ಕ್ರಿಕೆಟ್ ಟೂರ್ನಿಗಳು ಹೊರತಾಗಿಲ್ಲ.

ಇದೀಗ ಕಿವೀಸ್ ವೇಗದ ಬೌಲರ್ ಲೂಕಿ ಫರ್ಗ್ಯೂಸನ್ ಕೊರೋನಾ ವೈರಸ್ ಭೀತಿ ಅನುಭವಿಸುತ್ತಿದ್ದು ತಪಾಸಣೆಗೆ ಒಳಗಾಗಿದ್ದಾರೆ. ಗಂಟಲು ಕೆರೆತ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಫರ್ಗ್ಯೂಸನ್ 60 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಫರ್ಗ್ಯೂಸನ್ ಅವರನ್ನು 24 ಗಂಟೆಗಳ ಕಾಲ ಪ್ರತ್ಯೇಕವಾಗಿರಿಸಿ ತಪಾಸಣೆಗೊಳಪಡಿಸಲಾಯಿತು. 

ಆಸೀಸ್ ಕ್ರಿಕೆಟಿಗ ರಿಚರ್ಡ್ಸನ್‌ಗೆ ಕೊರೋನಾ ಶಂಕೆ, ಕೊಠಡಿಯಲ್ಲಿ ಕೂಡಿಟ್ಟು ಪರೀಕ್ಷೆ!

ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಆಸೀಸ್ ವೇಗಿ ಕೇನ್ ರಿಚರ್ಡ್ಸನ್ ಅವರ ಮೇಲೂ ಕೊರೋನಾ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಅವರನ್ನು 24 ಗಂಟೆಗಳ ಕಾಲ ಪ್ರತ್ಯೇಕವಾಗಿರಿಸಿ ತಪಾಸಣೆಗೊಳಪಡಿಸಲಾಗಿತ್ತು. ಆ ಬಳಿಕ ಕೋವಿಡ್ 19 ಸೋಂಕು ಇಲ್ಲವೆಂದು ದೃಢಪಟ್ಟಿತು.

ಸರ್ಕಾರದ ನಿರ್ಧಾರಕ್ಕೆ ಬೆಚ್ಚಿ ಬಿದ್ದ ನ್ಯೂಜಿಲೆಂಡ್; ಸರಣಿ ಅರ್ಧಕ್ಕೆ ಬಿಟ್ಟು ತವರಿಗೆ ವಾಪಸ್!

ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕೊರೋನಾ ಭೀತಿ ಎದುರಾಗಿದ್ದರಿಂದ ಮುಚ್ಚಿದ ಸ್ಟೇಡಿಯಂ(ಪ್ರೇಕ್ಷಕರಿಲ್ಲದ)ನಲ್ಲಿ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯವನ್ನು ಆಸೀಸ್ 71 ರನ್‌ಗಳ ಜಯ ಸಾಧಿಸಿತ್ತು. ಇದೀಗ ಮುಂದಿನ ಎರಡು ಪಂದ್ಯಗಳನ್ನು ಮುಂದೂಡಲಾಗಿದೆ. ಇನ್ನು ಭಾರತ-ದಕ್ಷಿಣ ಆಫ್ರಿಕಾ ಸರಣಿ, ಐಪಿಎಲ್ ಟೂರ್ನಿಗಳನ್ನು ಮುಂದೂಡಲಾಗಿದೆ.