ವೆಸ್ಟ್‌ ಇಂಡೀಸ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ನ್ಯೂಜಿಲೆಂಡ್ ತಂಡ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ವೆಲ್ಲಿಂಗ್ಟನ್(ಡಿ.14): ವೆಸ್ಟ್‌ ಇಂಡೀಸ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 12 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಆತಿಥೇಯ ನ್ಯೂಜಿಲೆಂಡ್ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್‌ ತಂಡ 116 ಅಂಕಗಳೊಂದಿಗೆ ಆಸ್ಟ್ರೇಲಿಯಾ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಇದಷ್ಟೇ ಅಲ್ಲದೇ ನ್ಯೂಜಿಲೆಂಡ್‌ ತಂಡ ತವರಿನಲ್ಲಿ ಸತತ 15 ಟೆಸ್ಟ್‌ ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿದೆ. ಇದರ ಜತೆಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಹಿಂದಿಕ್ಕಿ ನ್ಯೂಜಿಲೆಂಡ್ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಅಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

Scroll to load tweet…

ಕಿವೀಸ್ ಎದುರು ಮತ್ತೊಂದು ಹೀನಾಯ ಸೋಲಿನ ಭೀತಿಯಲ್ಲಿ ಕೆರಿಬಿಯನ್ನರು..!

ನ್ಯೂಜಿಲೆಂಡ್ ವಿರುದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 134 ರನ್‌ಗಳ ಹೀನಾಯ ಸೋಲು ಕಂಡಿದ್ದ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಾದರೂ ತಿರುಗೇಟು ನೀಡಬಹುದೇನೋ ಎಂದು ನಿರೀಕ್ಷಿಸಲಾಗಿತ್ತು. ಕೇನ್‌ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಹೆನ್ರಿ ನಿಕೋಲಸ್ ಆಕರ್ಷಕ ಶತಕ ಬಾರಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾದರು. ಇನ್ನು ಬೌಲಿಂಗ್‌ನಲ್ಲಿ ಟಿಮ್‌ ಸೌಥಿ, ಕೈಲ್ ಜ್ಯಾಮಿಸನ್, ನೀಲ್ ವ್ಯಾಗ್ನರ್ ಹಾಗೂ ಟ್ರೆಂಟ್ ಬೌಲ್ಟ್ ಮಾರಕ ದಾಳಿ ನಡೆಸುವ ಮೂಲಕ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎರಡನೇ ಟೆಸ್ಟ್ ಪಂದ್ಯ ಹೇಗಿತ್ತು?

Scroll to load tweet…

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಹೆನ್ರಿ ನಿಕೋಲಸ್ 174 ಆಕರ್ಷಕ ಶತಕ ಹಾಗೂ ನೀಲ್ ವ್ಯಾಗ್ನರ್ ಅಜೇಯ 66 ಅರ್ಧಶತಕದ ನೆರವಿನಿಂದ 460 ರನ್ ಬಾರಿಸಿ ಆಲೌಟ್ ಆಯಿತು. ಬಳಿಕ ಮೊದಲ ಇನಿಂಗ್ಸ್‌ ಆರಂಭಿಸಿ ಕೇವಲ 131 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಫಾಲೋ ಆನ್‌ಗೆ ಒಳಗಾಯಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಕೆರಿಬಿಯನ್ನರ ಪಡೆ 317 ರನ್ ಬಾರಿಸುವ ಮೂಲಕ ಪ್ರಬಲ ಪೈಪೋಟಿ ನೀಡಿತಾದರೂ ಇನಿಂಗ್ಸ್ ಸೋಲಿನಿಂದ ಪಾರಾಗಲು ಜೇಸನ್ ಹೋಲ್ಡರ್ ಪಡೆಗೆ ಸಾಧ್ಯವಾಗಲಿಲ್ಲ.