ಮೌಂಟ್‌ ಮ್ಯಾಂಗ್ಯುಯಿನಿ(ಡಿ.30): ಪಾಕಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಫವಾದ್ ಆಲಂ ನ್ಯೂಜಿಲೆಂಡ್ ವಿರುದ್ದ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದಾರೆ. ಆದ್ರೆ ವಿಶೇಷ ಏನಪ್ಪಾ ಅಂದ್ರೆ ಬರೋಬ್ಬರಿ 11 ವರ್ಷಗಳ ಬಳಿಕ ಆಲಂ ವೃತ್ತಿ ಜೀವನದ ಎರಡನೇ ಶತಕ ಬಾರಿಸಿದ್ದಾರೆ. ಇದರ ಹೊರತಾಗಿಯೂ ಪಾಕಿಸ್ತಾನ ತಂಡ ರೋಚಕವಾಗಿ ಕಿವೀಸ್‌ಗೆ ಶರಣಾಗಿದೆ.

ನ್ಯೂಜಿಲೆಂಡ್‌ ನೀಡಿದ್ದ 373 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತಾದರೂ ಮಧ್ಯಮ ಕ್ರಮಾಂಕದಲ್ಲಿ 5ನೇ ವಿಕೆಟ್‌ಗೆ ಮೊಹಮ್ಮದ್ ರಿಜ್ವಾನ್‌ ಜತೆಗೆ ಫವಾದ್ ಆಲಂ 165 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ನೆಲಕಚ್ಚಿ ಆಡಿದ ಆಲಂ 149 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿದರು, ಕೊನೆಗೆ ಶತಕ ಬಾರಿಸಲು ಆಲಂ ತೆಗೆದುಕೊಂಡ ಎಸೆತಗಳ ಸಂಖ್ಯೆ ಬರೋಬ್ಬರಿ 236 ಎಸೆತಗಳು.

ಫವಾದ್ ಆಲಂ 2009ರಲ್ಲಿ ಟೆಸ್ಟ್‌ ಕ್ರಿಕೆಟ್‌ನ ಪಾದಾರ್ಪಣೆ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ್ದರು, ಅದಾಗಿ ಬರೋಬ್ಬರಿ 4188 ದಿನಗಳ ಬಳಿಕ ಆಲಂ ಎರಡನೇ ಶತಕ ಬಾರಿಸಿದ್ದಾರೆ. 2009ರ ಜುಲೈನಲ್ಲಿ ಶ್ರೀಲಂಕಾ ವಿರುದ್ದ ಕೊಲಂಬೊ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಲಂ ಮೊದಲ ಶತಕ ಬಾರಿಸಿದ್ದರು.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಬಿಜೆಪಿ ಸೇರ್ಪಡೆ; ಹೊಸ ಸಂಚಲನ!

ನ್ಯೂಜಿಲೆಂಡ್‌ ವಿರುದ್ದ ಪಾಕಿಸ್ತಾನ ಒಂದು  ಹಂತದಲ್ಲಿ ಗೆಲುವಿನತ್ತ ಮುಖ ಮಾಡಿತ್ತು. ಆದರೆ ಕೊನೆಯ ಕೆಲವು ಓವರ್‌ಗಳಲ್ಲಿ ಪಾಕಿಸ್ತಾನ ನಾಟಕೀಯ ಕುಸಿತ ಕಂಡಿತು. ಪಾಕಿಸ್ತಾನ ಕೊನೆಯಲ್ಲಿ ಕೇವಲ 31 ರನ್‌ ಸೇರಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ರೋಚಕ ಸೋಲು ಕಂಡಿತು.