Asianet Suvarna News Asianet Suvarna News

Cricketer Rachin Ravindra ಪೋಷಕರ ವಿಶೇಷ ಸಂದರ್ಶನ!

- ನ್ಯೂಜಿಲೆಂಡಲ್ಲೇ ಹುಟ್ಟಿಬೆಳೆದು ಕ್ರಿಕೆಟ್‌ ಮೈದಾನದಲ್ಲಿ ಯಶ ಕಾಣುತ್ತಿರುವ ಕನ್ನಡಿಗ

- ಬೆಂಗಳೂರು ಮೂಲದ ರವೀಂದ್ರ-ದೀಪಾ ದಂಪತಿಯ ಪುತ್ರ ರಚಿನ್‌ ಸಾಧನೆಯ ಹಾದಿ

Exclusive interview with Bengaluru origin New Zealand Cricketer Rachin Ravindra parents vcs
Author
Bangalore, First Published Dec 12, 2021, 1:40 PM IST

ರವಿಶಂಕರ್‌ ಭಟ್‌

ಹೆಸರು ರಚಿನ್‌ ರವೀಂದ್ರ. ಊರು ನ್ಯೂಜಿಲೆಂಡ್‌ ರಾಜಧಾನಿ ವೆಲ್ಲಿಂಗ್ಟನ್‌. ಬೆಂಗಳೂರಿನಲ್ಲಿ ಹುಟ್ಟಿಬೆಳೆದು ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ರವೀಂದ್ರ ಕೃಷ್ಣಮೂರ್ತಿ-ದೀಪಾ ದಂಪತಿಯ ಹಿರಿಯ ಪುತ್ರ. ಈಗಿನ್ನೂ 22 ವರ್ಷದ ಯುವಕ. ಹಾಲಿ ನ್ಯೂಜಿಲೆಂಡ್‌ ಟೆಸ್ಟ್‌ ಕ್ರಿಕೆಟ್‌ ತಂಡದ ಸದಸ್ಯ. ದೇಶೀ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 2000+ ರನ್‌ ಹಾಗೂ 50+ ವಿಕೆಟ್‌ ಗಳಿಸಿರುವ ರಚಿನ್‌, ಮೊನ್ನೆ ಮೊನ್ನೆ ಭಾರತದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆಡಿರುವ ಎರಡೇ ಟೆಸ್ಟ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಮೊದಲ ಟೆಸ್ಟ್‌ನಲ್ಲಂತೂ ಸೋಲಿನ ದವಡೆಗೆ ಸಿಲುಕಿದ್ದ ನ್ಯೂಜಿಲೆಂಡ್‌ ತಂಡವನ್ನು ಕಡೇಕ್ಷಣದಲ್ಲಿ ಪಾರು ಮಾಡಿ ತಮ್ಮ ಸಾಮರ್ಥ್ಯದ ಇಣುಕುನೋಟ ನೀಡಿದ್ದಾರೆ.

ಸಾಧನೆಯ ಮೆಟ್ಟಿಲು ಹತ್ತುತ್ತಿರುವ ರಚಿನ್‌ಗೆ ಬೆನ್ನೆಲುಬಾಗಿ ಅವರ ತಂದೆ ರವೀಂದ್ರ ನಿಂತಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಅನುಭವ ಒದಗಿಸುವ ‘ಹಟ್‌ ಹಾಕ್ಸ್‌’ ಎಂಬ ಕ್ರಿಕೆಟ್‌ ಕ್ಲಬ್‌ನ ನೇತೃತ್ವ ವಹಿಸಿರುವ ರವೀಂದ್ರ, ಸ್ವತಃ ಕ್ರಿಕೆಟ್‌ ಆಟಗಾರರೂ ಹೌದು. ಹೀಗೆ ಕ್ರಿಕೆಟ್‌ ಭಕ್ತ ದೇಶದಲ್ಲಿ ಹುಟ್ಟಿತಾವು ನೆಲೆಸಿರುವ ನ್ಯೂಜಿಲೆಂಡ್‌ನಲ್ಲೂ ಕ್ರೀಡೆಯನ್ನು ಪ್ರೀತಿಸಿ, ಪೋಷಿಸುತ್ತಿರುವ ರವೀಂದ್ರ, ತಮ್ಮ ಪುತ್ರನ ಕ್ರಿಕೆಟ್‌ ಬದುಕಿನ ಕುರಿತು ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ಅದರ ಪೂರ್ಣಪಾಠ ಇಂತಿದೆ...

ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಶತಕ ಸಿಡಿಸಿದ ಬೆಂಗಳೂರು ಮೂಲದ ಕಿವೀಸ್‌ ಆಲ್ರೌಂಡರ್‌ ರಚಿನ್‌ ರವೀಂದ್ರ!

Exclusive interview with Bengaluru origin New Zealand Cricketer Rachin Ravindra parents vcs

ನೀವು ಮೂಲತಃ ಬೆಂಗಳೂರಿನವರಂತೆ?
ನಾನು ಮತ್ತು ಪತ್ನಿ ದೀಪಾ ಇಬ್ಬರೂ ಬೆಂಗಳೂರಲ್ಲೇ ಹುಟ್ಟಿಬೆಳೆದವರು. ನಮ್ಮಿಬ್ಬರ ತಂದೆ-ತಾಯಿ ಕೂಡ ಬೆಂಗಳೂರಿನವರೇ. ನಮ್ಮ ಕುಟುಂಬದ ಆಪ್ತ ವಲಯ ಈಗಲೂ ಬೆಂಗಳೂರಿನ ಜಯನಗರದ ಆಸುಪಾಸಿನಲ್ಲಿದೆ. ಹಾಗಾಗಿ, ನಾವು ಅಚ್ಚ ಬೆಂಗಳೂರಿಗರು. ಆದರೆ, ಹೃದಯದಲ್ಲಿ ನಾವು ಕಿವೀಸ್‌!

ನ್ಯೂಜಿಲೆಂಡ್‌ಗೆ ಯಾಕೆ ಹೋದಿರಿ?
ನನಗೆ ಮಾಹಿತಿ ತಂತ್ರಜ್ಞಾನ ಕಂಪನಿ ಡಾಟಾಕಾಮ್‌ ಸಿಸ್ಟಮ್ಸ್‌ನಲ್ಲಿ ಉದ್ಯೋಗ ದೊರೆತಿತ್ತು. ಆ ನಿಮಿತ್ತ ನ್ಯೂಜಿಲೆಂಡ್‌ಗೆ ಬಂದು ನೆಲೆಸಿದೆ. ನಾವು ನೆಲೆಸಿರುವುದು ನ್ಯೂಜಿಲೆಂಡ್‌ ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ. ಈ ನಗರ 80ರ ದಶಕದ ಬೆಂಗಳೂರಿನಂತಿದೆ. ತಂಪಾದ ಹವೆ, ಹೆಚ್ಚು ಗಿಜಿಗುಡದ ನಗರ, ಅಕ್ಕರೆಯಿಂದ ಮಾತಾಡಿಸುವ ಜನ... ಒಮ್ಮೆ ಇಲ್ಲಿಗೆ ಬಂದವರು ಮತ್ತೆ ಬೇರೆಡೆಗೆ ಹೋಗದಂಥ ವಾತಾವರಣ. ಸಹಜವಾಗಿಯೇ, ನಾನು-ದೀಪಾ ಇಲ್ಲಿ ನೆಲೆಸಿದೆವು. ನಮ್ಮಿಬ್ಬರು ಮಕ್ಕಳೂ ಇಲ್ಲಿಯೇ ಜನಿಸಿದರು. ಇಲ್ಲಿಯೇ ಬೆಳೆದರು. ರಚಿನ್‌ ಕ್ರಿಕೆಟ್‌ನತ್ತ ಆಕರ್ಷಿತನಾದ.

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ನಿಮ್ಮ ಮತ್ತು ಕ್ರಿಕೆಟ್‌ ನಂಟಿನ ಬಗ್ಗೆ ಹೇಳಿ...
90ರ ದಶಕದ ಬಹುತೇಕ ಭಾರತೀಯರಂತೆ ನನಗೂ ಕ್ರಿಕೆಟ್‌ ಅಂದರೆ ಪ್ರಾಣ. ಖುಷಿಯ ಸಂಗತಿ ಎಂದರೆ ನನ್ನಾಕೆಗೂ ಕ್ರಿಕೆಟ್‌ ಅಂದರೆ ಇಷ್ಟ. ನಾನು ಸ್ವತಃ ಬೆಂಗಳೂರಲ್ಲಿ ಅಲ್ಪ ಪ್ರಮಾಣದ ಕ್ರಿಕೆಟ್‌ ಆಡಿದ್ದೇನೆ. ಇಲ್ಲಿ ನ್ಯೂಜಿಲೆಂಡ್‌ಗೆ ಬಂದ ಮೇಲೂ ಆಡಿದ್ದೇನೆ. ಟೀವಿಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ನೋಡುತ್ತಲೇ ಇರುತ್ತೇವೆ. ಇದರ ಪ್ರಭಾವ ರಚಿನ್‌ ಮೇಲೂ ಆಗಿದೆ. ಆತ ನಮ್ಮೊಂದಿಗೆ ಕ್ರಿಕೆಟ್‌ ನೋಡುತ್ತ, ಆಡುತ್ತ ಬೆಳೆದ. ಆದರೆ, ಮಗಳು ಐಸಿರಿಗೆ ಕ್ರಿಕೆಟ್‌ ಅಂದರೆ ಅಷ್ಟಕ್ಕಷ್ಟೆ.

Exclusive interview with Bengaluru origin New Zealand Cricketer Rachin Ravindra parents vcs

ರಚಿನ್‌ ಕ್ರಿಕೆಟ್‌ ಬದುಕಿನ ಆರಂಭ ಹೇಗಿತ್ತು?
ನಿಜ ಹೇಳಬೇಕೆಂದರೆ, ರಚಿನ್‌ ಬಾಲ್ಯದಲ್ಲಿ ಒಂದು ಸಣ್ಣ ಸಮಸ್ಯೆ ಎದುರಾಗಿತ್ತು. ಅವನ ಹೃದಯದಲ್ಲಿ ರಕ್ತದ ಚಲನೆ ಸಾಮಾನ್ಯವಾಗಿರಲಿಲ್ಲ. ವೈದ್ಯರಿಗೆ ತೋರಿಸಿದಾಗ ಹೃದಯದಲ್ಲಿ ಸಣ್ಣ ರಂಧ್ರ ಇರುವುದಾಗಿ ತಿಳಿಸಿದರು. ಆಗ ಅವನಿಗೆ 1 ವರ್ಷ. ಕೆಲಕಾಲ ನಮಗೆ ಆತಂಕ ಆಗಿದ್ದು ಹೌದು. ಆದರೆ, ನಿರಂತರವಾಗಿ ವೈದ್ಯಕೀಯ ತಪಾಸಣೆ ಹಾಗೂ ತಜ್ಞರ ಸಲಹೆಗಳಿಂದಾಗಿ ಆ ಸಮಸ್ಯೆ ನೀಗಿತು. ಅವನಿಗೆ 4 ವರ್ಷ ಆಗುವಷ್ಟರಲ್ಲಿ ರಂಧ್ರ ಸಂಪೂರ್ಣವಾಗಿ ಮುಚ್ಚಿಹೋಗಿ ರಚಿನ್‌ ಸಾಮಾನ್ಯರಂತಾದ. ಆಗ ಅವನು, ‘ನಾನಿನ್ನು ಇಡೀ ದಿನ ಕ್ರಿಕೆಟ್‌ ಆಡಬಹುದೇ?’ ಎಂದು ವೈದ್ಯರನ್ನು ಕೇಳಿದ್ದ. ನಮಗೆ ಅದೊಂದು ಭಾವುಕ ಕ್ಷಣವಾಗಿತ್ತು. ನಮ್ಮದು ಕ್ರಿಕೆಟ್‌ ಭಕ್ತ ಕುಟುಂಬವೇ ಆಗಿದ್ದರಿಂದ ಅವನಿಗೆ ಬಾಲ್ಯದಿಂದಲೂ ಕ್ರಿಕೆಟ್‌ ಅಂದರೆ ಅಚ್ಚುಮೆಚ್ಚು. ಟೀವಿಯಲ್ಲಿ ಕ್ರಿಕೆಟ್‌ ಬಂದಾಗಲೆಲ್ಲ ತಲ್ಲೀನನಾಗಿ ನೋಡುತ್ತಿದ್ದ. ನನಗೆ ಬಿಡುವಿದ್ದಾಗ ಮನೆಯ ಹಿತ್ತಿಲಿನಲ್ಲಿ ಕ್ರಿಕೆಟ್‌ ಆಡುತ್ತಿದ್ದೆವು. ನಾನು ಚೆಂಡು ಎಸೆಯುತ್ತಲೇ ಇರಬೇಕೆಂದು ಬಯಸುತ್ತಿದ್ದ. ಅವನು ಬ್ಯಾಟ್‌ ಬೀಸುತ್ತಲೇ ಇರುತ್ತಿದ್ದ. ಗಂಟೆಗಟ್ಟಲೆ ಹೀಗೇ ಆಡುತ್ತಿದ್ದುದುಂಟು.

ರಚಿನ್‌ ಇಲ್ಲಿಯವರೆಗೆ ಬರಲು ನೀವು ಏನೆಲ್ಲ ಮಾಡಿದಿರಿ?
ಪ್ರತಿಯೊಬ್ಬ ಕ್ರೀಡಾಪಟುವಿನ ಯಶಸ್ಸಿನಲ್ಲಿ ಆತನ ಕುಟುಂಬದ ಸಹಕಾರ ಇದ್ದೇ ಇರುತ್ತದೆ. ನಮ್ಮದೂ ಹಾಗೇ. ಅದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಆದರೂ, ರಚಿನ್‌ ಸಾಧನೆಯ ಶ್ರೇಯ ಸ್ವಲ್ಪ ಮಟ್ಟಿಗೆ ಅವನ ಅಮ್ಮನಿಗೆ ಸಲ್ಲಬೇಕು. ನನ್ನ ಪತ್ನಿ ದೀಪಾ ನಿತ್ಯ ಬೆಳಗ್ಗೆ 5 ಗಂಟೆಗೇ ಏಳುತ್ತಿದ್ದಳು. ಚುರುಗುಟ್ಟುವ ಚಳಿಯಲ್ಲಿ ಎದ್ದು ರಚಿನ್‌ನನ್ನು ಕ್ರಿಕೆಟ್‌ ತರಬೇತಿಗೆ, ಶಾಲೆಗೆ ಸಜ್ಜುಗೊಳಿಸುತ್ತಿದ್ದಳು. 5.30ಕ್ಕೆ ತರಬೇತಿ ಕೇಂದ್ರಕ್ಕೆ ಕರೆದೊಯ್ದು, 2-3 ತಾಸಿನ ಅಭ್ಯಾಸದ ಬಳಿಕ ಶಾಲೆಗೆ ಹೋಗಲು ರೈಲು ನಿಲ್ದಾಣಕ್ಕೆ ಬಿಡುವ ಕೆಲಸವನ್ನು ನಾನು ಮಾಡುತ್ತಿದ್ದೆ. ಸಂಜೆ 4 ಗಂಟೆಗೆ ಆತ ಶಾಲೆಯಿಂದ ಬಂದ ಬಳಿಕ ಹೋಂ ವರ್ಕ್ ಮುಗಿಸಲು ಆಕೆ ಸಹಾಯ ಮಾಡುತ್ತಿದ್ದರೆ, 6ರಿಂದ 10ರವರೆಗಿನ ಕ್ರಿಕೆಟ್‌ ತರಬೇತಿಗೆ ನಾನು ನೆರವಾಗುತ್ತಿದ್ದೆ. ಬಿಡುವಾದಾಗಲೆಲ್ಲ ನಾನೂ ಅವನ ಜೊತೆ ಹೋಗಿ ಆಟ ಆಡಿ, ಅಭ್ಯಾಸ ಮಾಡಿಸಿದ್ದುಂಟು. ರಚಿನ್‌ಗೆ 5 ವರ್ಷ ಇದ್ದಾಗಿನಿಂದ ಈ ಪರಿಪಾಠ ಬೆಳೆದು ಬಂದಿದೆ. ರಚಿನ್‌ ಬೆಳವಣಿಗೆಯಲ್ಲಿ ಅವನ ಕೋಚ್‌ಗಳ ಪಾತ್ರ ಬಲು ದೊಡ್ಡದು. ನ್ಯೂಜಿಲೆಂಡ್‌ನ ಖ್ಯಾತ ಸ್ಥಳೀಯ ತರಬೇತುದಾರರಲ್ಲದೆ ಕರ್ನಾಟಕದ ಜೆ.ಅರುಣ್‌ ಕುಮಾರ್‌, ತಮಿಳುನಾಡಿನ ಎಸ್‌.ಶ್ರೀರಾಮ್‌, ಆಂಧ್ರದ ಸೈಯದ್‌ ಶಹಾಬುದ್ದೀನ್‌ ಅವರಿಂದಲೂ ರಚಿನ್‌ಗೆ ತರಬೇತಿ ದೊರೆತಿದೆ. ದಿಗ್ಗಜ ವೇಗಿ ಜಾವಗಲ್‌ ಶ್ರೀನಾಥ್‌ರಿಂದಲೂ ರಚಿನ್‌ ಸಾಕಷ್ಟುಕಲಿತಿದ್ದಾನೆ. ಭಾರತದ ಇನ್ನೂ ಅನೇಕ ಹಿರಿಯ ಕ್ರಿಕೆಟಿಗರು ರಚಿನ್‌ಗೆ ಮಾರ್ಗದರ್ಶನ ನೀಡಿದ್ದಾರೆ. ಇದಲ್ಲದೆ, ಅವನಿಗೆ ನ್ಯೂಜಿಲೆಂಡ್‌, ಭಾರತ ಎರಡೂ ಕಡೆ ಆಡುವ ಅವಕಾಶ ಸಾಕಷ್ಟುಬಾರಿ ಒದಗಿದೆ. ಇಲ್ಲಿನ ಚಳಿಗಾಲದಲ್ಲಿ ರಚಿನ್‌ ಭಾರತಕ್ಕೆ ತೆರಳಿ ಅಭ್ಯಾಸ ನಡೆಸುತ್ತಿದ್ದ. ಬೆಂಗಳೂರು, ಮೈಸೂರು, ಹೈದರಾಬಾದ್‌, ಅನಂತಪುರ, ಚೆನ್ನೈ ಸೇರಿದಂತೆ ಭಾರತದ ಅನೇಕ ಕಡೆ ಆತ 10ಕ್ಕೂ ಹೆಚ್ಚು ವರ್ಷ ಕ್ರಿಕೆಟ್‌ ತರಬೇತಿ ಪಡೆದಿದ್ದಾನೆ. ಹಾಗಾಗಿ, ಅವನಿಗೆ ನ್ಯೂಜಿಲೆಂಡ್‌, ಭಾರತ ಎರಡೂ ಚಿರಪರಿಚಿತ.

Exclusive interview with Bengaluru origin New Zealand Cricketer Rachin Ravindra parents vcs

ರಚಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಬಹುದು ಅಂತ ನಿಮಗೆ ಅನ್ನಿಸಿದ್ದು ಯಾವಾಗ?
ಹಾಗನ್ನಿಸಿದ ‘ಯುರೇಕಾ’ ಸನ್ನಿವೇಶ ಅಂತೇನಿಲ್ಲ. ಕ್ರಿಕೆಟ್‌ನಲ್ಲಿ ಆತ ತೊಡಗಿಸಿಕೊಂಡ ರೀತಿ, ಅದಕ್ಕಾಗಿ ಆತ ನೀಡಿದ ಸಮಯ, ಆಟದ ಬಗ್ಗೆ ಆತನ ಶ್ರದ್ಧೆ ಹಾಗೂ ಪ್ರೀತಿ... ಇವೆಲ್ಲವೂ ಸೇರಿ ಅವನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂದಿದೆ. ವಿಶೇಷ ಎಂದರೆ, ರಚಿನ್‌ ಅತ್ಯಂತ ಕಿರಿಯ ವಯಸ್ಸಲ್ಲೇ ಹಿರಿಯರ ತಂಡದಲ್ಲಿ ಆಡುತ್ತಿದ್ದ. ಉದಾಹರಣೆಗೆ, 12ರ ಎಳವೆಯಲ್ಲೇ 15 ವರ್ಷದೊಳಗಿನವರ ತಂಡಕ್ಕೆ, 13 ಆಗಿದ್ದಾಗ 17 ವರ್ಷದೊಳಗಿನವರ ತಂಡಕ್ಕೆ, 15-16ರ ಹರೆಯದಲ್ಲೇ 19 ವರ್ಷದೊಳಗಿನವರ ರಾಷ್ಟ್ರೀಯ ತಂಡಕ್ಕೆ ಆಡಿದ್ದ. ಆದ್ದರಿಂದ ರಚಿನ್‌ ಬಲುದೂರ ಸಾಗುತ್ತಾನೆ ಎಂಬ ನಂಬಿಕೆ ನಮಗೆ ಎಂದೋ ಬಂದಿತ್ತು. ಆದಾಗ್ಯೂ, ನ್ಯೂಜಿಲೆಂಡ್‌ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದು ಸುಲಭದ ಮಾತಾಗಿರಲಿಲ್ಲ. ವಿಶ್ವದರ್ಜೆಯ ಆಟಗಾರರನ್ನು ಹೊಂದಿರುವ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರ ತಂಡಗಳಲ್ಲಿ ಒಂದಾಗಿರುವ ‘ಬ್ಲ್ಯಾಕ್‌ ಕ್ಯಾಫ್ಸ್‌’ ಬಳಗ ಸೇರಿದ್ದು ಹೆಮ್ಮೆಯೇ ಸರಿ.

ನಿಮ್ಮ ತವರು ದೇಶದ ವಿರುದ್ಧವೇ ರಚಿನ್‌ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನೀವು ಆರಾಧಿಸುವ ರಾಹುಲ್‌ ದ್ರಾವಿಡ್‌ ಅವರೇ ಕೋಚ್‌ ಆಗಿರುವ ತಂಡದ ವಿರುದ್ಧ ದ್ವಿತೀಯ ಇನಿಂಗ್ಸ್‌ನಲ್ಲಿ ‘ಗೋಡೆ’ಯಂತೆ ನಿಂತರು. 91 ಎಸೆತ ಎದುರಿಸಿ 18 ರನ್‌ ಗಳಿಸಿ ಅಜೇಯರಾಗಿ ಉಳಿದುದೇ ಅಲ್ಲದೆ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಆ ಕ್ಷಣ ಹೇಗಿತ್ತು?
ಒಂದು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಅತ್ಯಂತ ಗೌರವದ ಸಂಗತಿ. ಅದು ಯಾವ ದೇಶದ ವಿರುದ್ಧ ಆದರೂ ಸರಿ. ಆದರೆ, ಟೆಸ್ಟ್‌ ಇತಿಹಾಸದಲ್ಲೇ ಶ್ರೇಷ್ಠರಾದ ಕೆಲವು ಆಟಗಾರರನ್ನು ಹೊಂದಿರುವ ತಂಡವೊಂದರ ವಿರುದ್ಧ ಆಡಲು ಅವಕಾಶ ಸಿಗುವುದು ಸಣ್ಣದೇನಲ್ಲ. ಅದರಲ್ಲೂ ಅತ್ಯುತ್ಕೃಷ್ಟಲಯದಲ್ಲಿರುವ ಭಾರತವನ್ನು ಅದರದ್ದೇ ನೆಲದಲ್ಲಿ ಎದುರಿಸುವುದು ದೊಡ್ಡ ಸವಾಲೇ. ಸೋಲು ಸನ್ನಿಹಿತ ಎನ್ನುವಂಥ ಸಂದರ್ಭದಲ್ಲಿ ವಿಶ್ವದರ್ಜೆಯ ಸ್ಪಿನ್ನರ್‌ಗಳನ್ನು ಎದುರಿಸಿ, ನೆಲಕಚ್ಚಿ ನಿಂತು ಪಂದ್ಯ ಡ್ರಾ ಮಾಡಿಕೊಳ್ಳುವುದು ಸಾಧನೆಯೇ. ಈ ಹಾದಿಯಲ್ಲಿ ಆತ ಅನುಭವಿಸಿರಬಹುದಾದ ಒತ್ತಡವನ್ನು ನಾನು ಊಹಿಸಲು ಸಾಧ್ಯವಿಲ್ಲ. ಎದೆಯೊಳಗಿಂದಲೇ ಹುಟ್ಟುವ ಅನುಮಾನ, ಅಂಜಿಕೆ, ಆತಂಕಗಳು ಇವೆಯಲ್ಲ, ಅದು ಟೆಸ್ಟ್‌ ಕ್ರಿಕೆಟ್‌ ಒಡ್ಡುವ ನಿಜವಾದ ಪರೀಕ್ಷೆ. ಮಿಲಿಮೀಟರುಗಳ ವ್ಯತ್ಯಾಸದಲ್ಲಿ ನಿರ್ಧಾರವಾಗುವ ಕತ್ತಿಯಲಗಿನಂಥ ಸನ್ನಿವೇಶದಲ್ಲಿ ಆತ ತೋರಿದ ಕೆಚ್ಚು ಓರ್ವ ಕ್ರಿಕೆಟ್‌ ಪ್ರೇಮಿ ತಂದೆಯಾಗಿ ಖಂಡಿತವಾಗಿಯೂ ನನಗೆ ಹೆಮ್ಮೆ ತಂದಿದೆ. ದ್ರಾವಿಡ್‌ ಅವರಂತೂ ಇಂಥ ಆಟಗಳಿಗೆ ಹೆಸರುವಾಸಿ. ಅವರು ಅದೆಷ್ಟೋ ಬಾರಿ ಇಂತಹ ಇನ್ನಿಂಗ್ಸ್‌ ಆಡಿದ್ದಾರೆ. ಅಂಥವರೆದುರು ಒಂದು ಉತ್ತಮ ಪ್ರದರ್ಶನ ತೋರುವುದು ಭಾಗ್ಯವೇ ಸರಿ.

Exclusive interview with Bengaluru origin New Zealand Cricketer Rachin Ravindra parents vcs

ರಚಿನ್‌ ಅಂದರೆ ರಾಹುಲ್‌-ಸಚಿನ್‌ ಸೇರಿಸಿ ರಚಿಸಿದ ಹೆಸರಾ?
ರಚಿನ್‌ ಎಂಬ ಹೆಸರನ್ನು ಪ್ರಸ್ತಾಪಿಸಿದ್ದು ನನ್ನ ಪತ್ನಿ ದೀಪಾ. ಅವನಿಗೆ ಈ ಹೆಸರಿಡುವ ಬಗ್ಗೆ ಆಕೆಯೇ ಸಲಹೆ ನೀಡಿದ್ದು. ಕೇಳಿದ ತಕ್ಷಣ ನನಗೆ ಬಹಳ ಸರಳವಾದ ಹೆಸರು, ಬರೆಯಲು ಹಾಗೂ ಹೇಳಲು ಸುಲಭ ಅನ್ನಿಸಿ ಆಕೆಯ ಅಭಿಪ್ರಾಯವನ್ನು ಅನುಮೋದಿಸಿದೆ. ರಾಹುಲ್‌ ಹೆಸರಿನ (್ಕa) ಹಾಗೂ ಸಚಿನ್‌ ಹೆಸರಿನಲ್ಲಿರುವ (್ಚhಜ್ಞಿ) ಸೇರಿಸಿ ಆಕೆ ರಚಿನ್‌ ಹೆಸರು ರಚಿಸಿದ್ದಳು ಎಂಬುದು ನನಗೆ ಅದೆಷ್ಟೋ ಸಮಯದ ನಂತರ ಗೊತ್ತಾಯಿತು. ಈಗ ಎಲ್ಲೆಡೆ ಈ ಬಗ್ಗೆ ಮಾತಾಡುತ್ತಾರೆ. ಆ ಬಗ್ಗೆ ನನಗೆ ಖುಷಿಯಿದೆ.

ರಚಿನ್‌ಗೆ ಐಪಿಎಲ್‌ ಬಗ್ಗೆ ಆಸಕ್ತಿ ಇದೆಯಾ?
ಐಪಿಎಲ್‌ನಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡುವ ಕನಸು ಯಾವ ಕ್ರಿಕೆಟಿಗನಿಗೆ ಇರುವುದಿಲ್ಲ ಹೇಳಿ? ಆದರೆ, ರಚಿನ್‌ ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದಾನೆ. ಅವನು ಸಾಗಬೇಕಾದ ಹಾದಿ ಕಠಿಣವೂ ಇದೆ, ದೂರವೂ ಇದೆ. ಸದ್ಯಕ್ಕೆ ಆತ ಒಂದೊಂದೇ ಪಂದ್ಯದ ಬಗ್ಗೆ ಗಮನವಿಟ್ಟು ಮುನ್ನಡೆಯಬೇಕಿದೆ. ಐಪಿಎಲ್‌ನಲ್ಲಿ ಅವಕಾಶ ಸಿಗಬೇಕಾದರೆ, ಫ್ರಾಂಚೈಸಿಗಳ ಅಗತ್ಯಕ್ಕೆ ತಕ್ಕ ಪ್ರದರ್ಶನವನ್ನು ತೋರಬೇಕಿದೆ. ಆಮೇಲಷ್ಟೇ ರಚಿನ್‌ಗೆ ಅವಕಾಶಗಳನ್ನು ನಿರೀಕ್ಷಿಸಬಹುದು.

ಮನೆಯಲ್ಲಿ ಈಗಲೂ ಕನ್ನಡದಲ್ಲೇ ಮಾತಾಡ್ತೀರಾ?
ನಾನು ಮತ್ತು ದೀಪಾ ಕನ್ನಡದಲ್ಲೇ ಮಾತಾಡ್ತೀವಿ. ನಡುನಡುವೆ ಇಂಗ್ಲಿಷ್‌ ಸೇರಿಕೊಳ್ಳುತ್ತದೆ. ರಚಿನ್‌ ಮತ್ತು ಐಸಿರಿ ಇಬ್ಬರೂ ಇಂಗ್ಲಿಷ್‌ನಲ್ಲೇ ಮಾತಾಡ್ತಾರೆ. ಆದರೆ, ಅವರಿಬ್ಬರಿಗೂ ಕನ್ನಡ ಚೆನ್ನಾಗಿ ಅರ್ಥ ಆಗುತ್ತೆ.

ರಚಿನ್‌ ಕ್ರಿಕೆಟ್‌ ಅಂಕಿ-ಅಂಶ

ಮಾದರಿ ಪಂದ್ಯಗಳು ರನ್‌ ವಿಕೆಟ್‌ ಶತಕ ಅರ್ಧಶತಕ

ಟೆಸ್ಟ್‌ 2 53 3 0 0

ಅಂ.ರಾ.ಟಿ20 6 54 6 0 0

ಪ್ರಥಮ ದರ್ಜೆ 30 1648 28 3 10

ಲಿಸ್ಟ್‌ ಎ 12 316 8 1 1

ಇತರೆ ಟಿ20 28 345 25 0 0

Follow Us:
Download App:
  • android
  • ios