ಬೆಂಗಳೂರು(ಮೇ.20): ಭಾರತ ಕ್ರಿಕೆಟ್ ತಂಡವು ಜುಲೈ ತಿಂಗಳಿನಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ರವಿಶಾಸ್ತ್ರಿ ಅನುಪಸ್ಥಿತಿಯಲ್ಲಿ ರಾಹುಲ್ ದ್ರಾವಿಡ್‌ ಟೀಂ ಇಂಡಿಯಾ ಮುಖ್ಯಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 

ಲಂಕಾ ಸರಣಿಗೆ ರಾಹುಲ್‌ ದ್ರಾವಿಡ್ ಕೋಚ್‌ ಆಗಲಿದ್ದಾರೆ ಎನ್ನುವ ಮಾಹಿತಿ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಈ ವಿಚಾರವನ್ನು ಹಬ್ಬದಂತೆ ಸಂಭ್ರಮಿಸಲಾರಂಭಿಸಿದ್ದಾರೆ. ಲಂಕಾ ಸರಣಿಗೆ ದ್ರಾವಿಡ್‌ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಎಎನ್‌ಐಗೆ ಖಚಿತಪಡಿಸಿವೆ. ಬಿಸಿಸಿಐ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿರದಿದ್ದರೂ ಸಹಾ ನೆಟ್ಟಿಗರು ಈಗಿನಿಂದಲೇ ರಾಹುಲ್‌ ದ್ರಾವಿಡ್‌ ಅವರನ್ನು ಟೀಂ ಇಂಡಿಯಾ ಶಾಶ್ವತ ಕೋಚ್‌ ಅನ್ನಾಗಿ ನೇಮಿಸಿ ಎಂದು ಆಗ್ರಹಿಸಿದ್ದಾರೆ.

ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಆಯ್ಕೆ
 
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾಗಲೇ, ಭಾರತದ ಮತ್ತೊಂದು ತಂಡ ಜುಲೈನಲ್ಲಿ ಶ್ರೀಲಂಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ದ ವಾಲ್‌ ಖ್ಯಾತಿಯ ರಾಹುಲ್ ದ್ರಾವಿಡ್‌ ಟೀಂ ಇಂಡಿಯಾ ತಾತ್ಕಾಲಿಕ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಮಾಹಿತಿ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಮಾತ್ರವಲ್ಲ ರಾಹುಲ್ ದ್ರಾವಿಡ್‌ ಅವರನ್ನೇ ಟೀಂ ಇಂಡಿಯಾದ ಶಾಶ್ವತ ಕೋಚ್ ಆಗಿ ನೇಮಕ ಮಾಡಿ ಎಂದು ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ.
 

ಇದೇ ವೇಳೆ ಟೀಂ ಇಂಡಿಯಾ ಹೆಡ್‌ ಕೋಚ್‌ ರವಿಶಾಸ್ತ್ರಿಯನ್ನು ನೆಟ್ಟಿಗರು ಮತ್ತೊಮ್ಮೆ ಟ್ರೋಲ್ ಮಾಡಿದ್ದಾರೆ.