ನವದೆಹಲಿ(ಡಿ.21): ಭಾರತ ತಂಡದ ತಾರಾ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ವಾಪಸಾಗಲು ಕಾತರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಶಾಖಪಟ್ಟಣಂನಲ್ಲಿ ಟೀಂ ಇಂಡಿಯಾ ಜತೆ ನೆಟ್ಸ್‌ ಅಭ್ಯಾಸದಲ್ಲಿ ಪಾಲ್ಗೊಂಡ ಬೂಮ್ರಾ, ಗುಣಮುಖರಾಗಿರುವಂತೆ ಕಂಡರು. ತಂಡಕ್ಕೆ ಮರಳಬೇಕಿದ್ದರೆ ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಿಂದ ಫಿಟ್ನೆಸ್‌ ಪ್ರಮಾಣಪತ್ರ ಪಡೆಯಬೇಕು. ಆದರೆ ರಾಹುಲ್‌ ದ್ರಾವಿಡ್‌ ನೇತೃತ್ವದ ಎನ್‌ಸಿಎ ಬೂಮ್ರಾರ ಫಿಟ್ನೆಸ್‌ ಪರೀಕ್ಷೆ ನಡೆಸಲು ನಿರಾಕರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಗೊಂದಲಕ್ಕೆ ಸಿಲುಕಿಸಿದೆ.

ಇದನ್ನೂ ಓದಿ: ಬುಮ್ರಾ ನನ್ನ ಮುಂದೆ ‘ಬೇಬಿ ಬೌಲರ್‌’ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್..!

ಕಾರಣವೇನು?: ಬೂಮ್ರಾ ಫಿಟ್ನೆಸ್‌ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಲು ಎನ್‌ಸಿಎ ಬಳಿ ಬಲವಾದ ಕಾರಣವಿದೆ. ಸೆಪ್ಟೆಂಬರ್‌ನಲ್ಲಿ ಬೆನ್ನಿನ ಕೆಳಭಾಗದ ಗಾಯಕ್ಕೆ ತುತ್ತಾದ ಬೂಮ್ರಾ, ಪುನಶ್ಚೇತನ ಶಿಬಿರಕ್ಕಾಗಿ ಎನ್‌ಸಿಎಗೆ ಆಗಮಿಸಲಿಲ್ಲ. ಚಿಕಿತ್ಸೆಗಾಗಿ ಇಂಗ್ಲೆಂಡ್‌ಗೆ ತೆರಳಿದ ಅವರು, ಖಾಸಗಿ ಫಿಸಿಯೋ ಹಾಗೂ ಟ್ರೈನರ್‌ಗಳೊಂದಿಗೆ ಅಭ್ಯಾಸ ನಡೆಸಲು ನಿರ್ಧರಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ತಂಡದ ಫಿಟ್ನೆಸ್‌ ಟ್ರೈನರ್‌ ರಜನಿಕಾಂತ್‌ ಶಿವಜ್ಞಾನಂ ಅವರ ಬಳಿ ಮುಂಬೈನಲ್ಲಿ ಅಭ್ಯಾಸ ನಡೆಸಿದರು. ಈ ಬೆಳವಣಿಗೆ ಎನ್‌ಸಿಎ ನಿರ್ದೇಶಕ ರಾಹುಲ್‌ ದ್ರಾವಿಡ್‌ಗೆ ಅಸಮಾಧಾನ ತಂದಿತು ಎನ್ನಲಾಗಿದೆ. ಎನ್‌ಸಿಎ ಫಿಟ್ನೆಸ್‌ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಅವರ ವೈದ್ಯಕೀಯ ವರದಿಗಳು ನಮ್ಮ ಬಳಿ ಇಲ್ಲ. ಭವಿಷ್ಯದಲ್ಲಿ ಏನಾದರೂ ಸಮಸ್ಯೆಯಾದರೆ ನಾವು ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ದ್ರಾವಿಡ್‌, ಬಿಸಿಸಿಐಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತ ತಂಡದ ಟ್ರೈನರ್‌ ನಿಕ್‌ ವೆಬ್‌ಗೆ, ಬೂಮ್ರಾ ಫಿಟ್ನೆಸ್‌ ಪರೀಕ್ಷೆ ನಡೆಸಲು ಬೆಂಗಳೂರಿಗೆ ಆಗಮಿಸುವುದು ಬೇಡ ಎಂದು ದ್ರಾವಿಡ್‌ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಟೀಂ ಇಂಡಿಯಾಗೆ ಬೂಮ್ರಾ ವಾಪಸ್!

ಕೆಲ ದಿನಗಳ ಹಿಂದೆ, ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಲು ಬೂಮ್ರ ಹಾಗೂ ಹಾರ್ದಿಕ್‌ ಪಾಂಡ್ಯ ನಿರಾಕರಿಸಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಇತ್ತೀಚೆಗಷ್ಟೇ ಭುವನೇಶ್ವರ್‌ ಕುಮಾರ್‌ ಸ್ಪೋಟ್ಸ್‌ರ್‍ ಹರ್ನಿಯಾದಿಂದ ಬಳಲುತ್ತಿರುವುದನ್ನು ಪತ್ತೆ ಹಚ್ಚುವಲ್ಲಿ ವಿಫಲಗೊಂಡಿದ್ದ ಎನ್‌ಸಿಎ ಮುಜುಗರಕ್ಕೆ ಒಳಗಾಗಿತ್ತು.

ಎನ್‌ಸಿಎನಲ್ಲೇ ಫಿಟ್ನೆಸ್‌ ಟೆಸ್ಟ್‌ ನಡೆಯಲಿದೆ: ದಾದಾ!
ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈ ಬೆಳವಣಿಗೆ ಬಗ್ಗೆ ಮಾತನಾಡಿದ್ದು, ಬಿಸಿಸಿಐನಿಂದ ಗುತ್ತಿಗೆ ಹೊಂದಿರುವ ಪ್ರತಿಯೊಬ್ಬ ಆಟಗಾರನ ಫಿಟ್ನೆಸ್‌ ಪರೀಕ್ಷೆ ಎನ್‌ಸಿಎನಲ್ಲೇ ನಡೆಯಬೇಕು. ರಾಹುಲ್‌ ದ್ರಾವಿಡ್‌ ಜತೆ ನಾನು ಮಾತನಾಡುತ್ತೇನೆ ಎಂದಿದ್ದಾರೆ. ‘ಎನ್‌ಸಿಎ ಭಾರತೀಯ ಕ್ರಿಕೆಟಿಗರ ಪಾಲಿಗೆ ಆರಂಭಿಕ ಹಾಗೂ ಅಂತಿಮ ಸ್ಥಳ. ಪ್ರತಿಯೊಬ್ಬರೂ ಅಲ್ಲಿಂದಲೇ ಬರಬೇಕು. ದ್ರಾವಿಡ್‌ರಿಂದ ಭಾರೀ ನಿರೀಕ್ಷೆ ಇದೆ. ಒಬ್ಬ ಕ್ರಿಕೆಟಿಗನಾಗಿ ಅವರ ಕೊಡುಗೆ ಅಪಾರ. ದ್ರಾವಿಡ್‌ ಬದ್ಧತೆ ಹಾಗೂ ಪರಿಪೂರ್ಣತೆಗೆ ಹೆಸರುವಾಸಿ. ಅವರೊಂದಿಗೆ ಮಾತನಾಡಿ, ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಎನ್‌ಸಿಎ ಸುಧಾರಿಸಬೇಕು ಎನ್ನುವ ಕಾರಣದಿಂದಲೇ ದ್ರಾವಿಡ್‌ಗೆ ಅದನ್ನು ವಹಿಸಿದ್ದೇವೆ’ ಎಂದು ಗಂಗೂಲಿ ಹೇಳಿದ್ದಾರೆ.