ಕೊಲಂಬೋ(ನ.22): ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರು, ಪ್ರಧಾನಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ವಿಶ್ವಪ್ರಸಿದ್ಧ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಗುತ್ತದೆ ಎಂದು ಸುದ್ದಿ ಹಬ್ಬಿದೆ. ಇದು ತಮಿಳರೇ ಹೆಚ್ಚಾಗಿರುವ ಲಂಕಾದ ಉತ್ತರ ಪ್ರಾಂತ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ಮತ್ತೆ ಮತ್ತೆ ನೋಡಬೇಕೆನಿಸುವ ರೋಹಿತ್ ಹಿಡಿದ ಅದ್ಭುತ ಕ್ಯಾಚ್..!

2005ರಿಂದ 2015ರವರೆಗೂ ಮಹಿಂದಾ ರಾಜಪಕ್ಸೆ ಅವರ ಆಡಳಿತಾವಧಿಯಲ್ಲಿ ಭದ್ರತಾ ಕಾರ್ಯದರ್ಶಿಯಾಗಿದ್ದ ಹಾಲಿ ಅಧ್ಯಕ್ಷ ಗೋಟಬಯ ಅವರು ತಮಿಳರ ವಿರುದ್ಧದ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ. ಹೀಗಾಗಿ, ಲಂಕಾದಲ್ಲಿ ಶೇ.12ರಷ್ಟಿರುವ ಭಾರತೀಯ ಮತ್ತು ಶ್ರೀಲಂಕಾದ ತಮಿಳರು ಗೋಟಬಯ ವಿರುದ್ಧದ ನಿಲುವು ಹೊಂದಿದ್ದಾರೆ. 

ಇದನ್ನೂ ಓದಿ: ಭಾರತದ ಹಿಡಿತದಲ್ಲಿ ಪಿಂಕ್‌ಬಾಲ್ ಟೆಸ್ಟ್, ಬೆತ್ತಲಾದ ನಟಿ ಬದುಕಲ್ಲಿ ಟ್ವಿಸ್ಟ್; ನ.22ರ ಟಾಪ್ 10 ಸುದ್ದಿ!

ಆದರೆ, ಸದಾ ರಾಜಪಕ್ಸೆಗಳ ಪರವಾಗಿಯೇ ವಕಾಲತ್ತು ವಹಿಸುವ ಮುರಳೀಧರನ್‌ ಮಾತ್ರ, ತಮಿಳರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿಲ್ಲ ಎಂದು ಪ್ರತಿಪಾದಿಸುತ್ತಾರೆ. ಹೀಗಾಗಿಯೇ ಗೋಟಬಯ ಪರ ಇರುವ ಮುರಳೀಧರನ್‌ ನೇಮಕದ ಸುದ್ದಿ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಅಧ್ಯಕ್ಷೀಯ ಚುನಾವಣೆ ವೇಳೆ ತಮಿಳು ಮೂಳದವರೇ ಆಗಿರುವ ಮುರಳೀಧರನ್‌ ಅವರು, ಗೋಟಬಯ ರಾಜಪಕ್ಸೆ ಅವರನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದರು.