ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮುರಳಿ ವಿಜಯ್ಭಾವನಾತ್ಮಕವಾಗಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮುರಳಿ ವಿಜಯ್87 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಆರಂಭಿಕ ಬ್ಯಾಟರ್

ಚೆನ್ನೈ(ಜ.30): ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಮುರಳಿ ವಿಜಯ್‌, ಇಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಭಾರತ ಪರ ಒಟ್ಟಾರೆ 87 ಪಂದ್ಯಗಳನ್ನಾಡಿರುವ ಮುರಳಿ ವಿಜಯ್, 4,490 ರನ್‌ ಬಾರಿಸಿದ್ದಾರೆ. ಈ ಪೈಕಿ ಆರಂಭಿಕನಾಗಿಯೇ, ಅದರಲ್ಲೂ ಟೆಸ್ಟ್ ಆರಂಭಿಕನಾಗಿ ಮುರಳಿ ವಿಜಯ್ ಹೆಚ್ಚು ಗಮನ ಸೆಳೆದಿದ್ದು, 61 ಪಂದ್ಯಗಳನ್ನಾಡಿ 38.29ರ ಬ್ಯಾಟಿಂಗ್ ಸರಾಸರಿಯಲ್ಲಿ 3,982 ರನ್ ಬಾರಿಸಿದ್ದರು. ಇದಷ್ಟೇ ಅಲ್ಲದೇ ಮುರಳಿ ವಿಜಯ್, ಭಾರತ ಪರ 17 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಇದೀಗ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ, ಮುರಳಿ ವಿಜಯ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ನಾನಿಂದು ತುಂಬಾ ಕೃತಜ್ಞತೆ ಹಾಗೂ ನಮೃತೆಯ ಭಾವದಿಂದ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಭಾರತ ತಂಡದ ಜತೆಗಿನ ನನ್ನ ಪಯಣವು 2002-2018ರ ವರೆಗೆ ಅತ್ಯದ್ಭುತವಾಗಿತ್ತು. ಭಾರತವನ್ನು ಅತ್ಯುನ್ನತ ಹಂತದಲ್ಲಿ ಪ್ರತಿನಿಧಿಸಿದ್ದು, ನನ್ನ ಪಾಲಿಗೆ ಅತ್ಯಂತ ಗೌರವದ ವಿಷಯ.

ನನ್ನ ದೇಶವನ್ನು ಪ್ರತಿನಿಧಿಸಲು ಅವಕಾಶ ನೀಡಿದ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI), ತಮಿಳುನಾಡು ಕ್ರಿಕೆಟ್ ಸಂಸ್ಥೆ(TNCA), ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಚೆಮ್‌ಪ್ಲಾಸ್ಟ್ ಸನ್ಮಾರ್ ಸಂಸ್ಥೆಗೆ ಕೃತಜ್ಞನಾಗಿರುತ್ತೇನೆ.

ನನ್ನೆಲ್ಲಾ ಸಹ ಆಟಗಾರರು, ಕೋಚ್‌ಗಳು, ಮೆಂಟರ್‌ಗಳು ಮತ್ತು ಸಹಾಯಕ ಸಿಬ್ಬಂದಿಗಳು. ನಿಮ್ಮೆಲ್ಲರ ಜತೆಗಿನ ಒಡನಾಟವು ನನ್ನ ಪಾಲಿಗೆ ಸೌಭಾಗ್ಯವೇ ಸರಿ. ನನ್ನ ಕನಸನ್ನು ನನಸಾಗಿಸಲು ಸಹಕರಿಸಿದ ನಿಮ್ಮೆಲ್ಲರಿಗೂ ಅನಂತ ಧನ್ಯವಾದಗಳು.

Scroll to load tweet…

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಾಗ ಕ್ರಿಕೆಟ್ ಅಭಿಮಾನಿಗಳು ನನ್ನ ವೃತ್ತಿಜೀವನದ ಏಳು-ಬೀಳುಗಳಲ್ಲಿ ಬೆಂಬಲಿಸುತ್ತಲೇ ಬಂದಿದ್ದೀರ. ಆ ಸುಂದರ ಕ್ಷಣಗಳನ್ನು ಎಂದೆಂದಿಗೂ ಮರೆಯುವುದಿಲ್ಲ. ನಿಮ್ಮ ಜತೆ ಕಳೆದ ಸಮಯ ಹಾಗೂ ನಿಮ್ಮ ಬೆಂಬಲವೇ ನನ್ನಲ್ಲಿ ಮತ್ತಷ್ಟು ಪ್ರೇರಣೆಯನ್ನುಂಟು ಮಾಡುತ್ತಿತ್ತು. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು.

ಕೊನೆಯದಾಗಿ ನಾನು ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಯಾಕೆಂದರೆ ನನ್ನ ವೃತ್ತಿಜೀವನದುದ್ದಕ್ಕೂ ಅವರ ನಿಸ್ವಾರ್ಥ ಪ್ರೀತಿ ಹಾಗೂ ಬೆಂಬಲ ನನ್ನ ಜತೆಗಿದೆ. ನೀವೆಲ್ಲರೂ ನನ್ನ ಬೆನ್ನು ಮೂಳೆಯಿದ್ದಂತೆ, ನೀವೆಲ್ಲರೂ ನನ್ನ ಜತೆಗಿರದೇ ಹೋಗಿದ್ದರೇ, ನಾನಿಂದು ಏನಾಗಿದ್ದೇನೋ ಅದು ಆಗಲು ಸಾಧ್ಯವಿರುತ್ತಿರಲಿಲ್ಲ.

ನಾನು ಇನ್ನು ಮುಂದೆ ಕ್ರಿಕೆಟ್‌ ಜಗತ್ತಿನ ಹೊಸ ಅವಕಾಶಗಳನ್ನು ಎದುರು ನೋಡುತ್ತಿದ್ದು, ಬ್ಯುಸಿನೆಸ್‌ ಕಡೆಗೂ ಗಮನ ನೀಡಬೇಕೆಂದಿದ್ದೇನೆ. ಇದಷ್ಟೇ ಅಲ್ಲದೇ ನಾನು ತುಂಬಾ ಇಷ್ಟಪಡುವ ಹಾಗೂ ಸವಾಲನ್ನು ತೆಗೆದುಕೊಳ್ಳುವ ಕ್ರೀಡೆಯಲ್ಲಿ ಮುಂದುವರೆಯಲಿದ್ದೇನೆ.

ಇನ್ನು ಮುಂದೆ ಹೊಸ ಹಾಗೂ ಬೇರೆಯದ್ದೇ ವಾತಾವರಣವಿರಲಿದೆ. ಓರ್ವ ಕ್ರಿಕೆಟಿಗನಾಗಿ ಇದು ಮುಂದಿನ ಹೆಜ್ಜೆ ಎಂದು ಭಾವಿಸುತ್ತೇನೆ ಹಾಗೂ ನನ್ನ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಎದುರು ನೋಡುತ್ತಿದ್ದೇನೆ. ನನ್ನೆಲ್ಲಾ ಹಿರಿಯ ಸಹ ಆಟಗಾರರಿಗೆ ಹಾಗೂ ಭಾರತ ಕ್ರಿಕೆಟ್ ತಂಡದ ಮುಂದಿನ ಪಯಣವು ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಸುಂದರ ನೆನಪುಗಳನ್ನು ಕಟ್ಟಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎಂದು ಮುರಳಿ ವಿಜಯ್ ಬರೆದುಕೊಂಡಿದ್ದಾರೆ.