ಮುಂಬೈ(ಏ.07): ಭಾರತದ ಮಾಜಿ ವಿಕೆಟ್‌ ಕೀಪರ್‌, ಮುಂಬೈ ಇಂಡಿಯನ್ಸ್‌ನ ಪ್ರತಿಭಾನ್ವೇಷಕ ಹಾಗೂ ವಿಕೆಟ್‌ ಕೀಪಿಂಗ್‌ ಸಲಹೆಗಾರ ಕಿರಣ್‌ ಮೋರೆಗೆ ಕೊರೋನಾ ಸೋಂಕು ತಗುಲಿದೆ.

58 ವರ್ಷದ ಮೋರೆಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ, ಅವರು ಐಸೋಲೇಷನ್‌ನಲ್ಲಿದ್ದಾರೆ. ತಂಡದ ವೈದ್ಯಕೀಯ ಸಿಬ್ಬಂದಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ಮುಂಬೈ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಾಂಖೇಡೆಯ ಮೂವರು ಸಿಬ್ಬಂದಿಗೆ ಸೋಂಕು!

ಐಪಿಎಲ್‌ 14ನೇ ಆವೃತ್ತಿಗೆ ಕೇವಲ 2 ದಿನ ಬಾಕಿ ಇದ್ದು, ಟೂರ್ನಿಗೆ ಕೊರೋನಾತಂಕ ಹೆಚ್ಚುತ್ತಲೇ ಇದೆ. ಏ.10ರಂದು ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಇಲ್ಲಿನ ವಾಂಖೇಡೆ ಕ್ರೀಡಾಂಗಣದ ಇಬ್ಬರು ಮೈದಾನ ಸಿಬ್ಬಂದಿ ಹಾಗೂ ಒಬ್ಬ ಕೊಳಾಯಿಗಾರನಿಗೆ ಕೊರೋನಾ ಸೋಂಕು ತಗುಲಿದೆ.

ಕ್ರೀಡಾಂಗಣದಲ್ಲಿ ನಡೆಸಿದ ಪರೀಕ್ಷೆ ವೇಳೆ ಮೂವರ ವರದಿ ಪಾಸಿಟಿವ್‌ ಬಂದಿದೆ. ಕಳೆದ ಶನಿವಾರವಷ್ಟೇ 10 ಮಂದಿ ಮೈದಾನ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.