ಐಪಿಎಲ್ ಟ್ರೇಡಿಂಗ್ ನಿಯಮ ಪ್ರಕಾರ ಒಬ್ಬ ಆಟಗಾರನನ್ನು ಮತ್ತೊಂದು ತಂಡದಿಂದ ಖರೀದಿಸಬೇಕಾದರೆ ಎರಡೂ ಫ್ರಾಂಚೈಸಿಗಳು ಒಮ್ಮತಕ್ಕೆ ಬರಬೇಕು. ಮಾರಾಟ ಮಾಡುವ ಫ್ರಾಂಚೈಸಿಯು ಹೇಳುವ ಮೊತ್ತವನ್ನು ಖರೀದಿಸುವ ಫ್ರಾಂಚೈಸಿ ನೀಡಬೇಕಾಗುತ್ತದೆ. ಹಾರ್ದಿಕ್‌ರನ್ನು ನೀಡಬೇಕಿದ್ದರೆ ಮುಂಬೈನಿಂದ ಗುಜರಾತ್‌ ₹100 ಕೋಟಿ ಬೇಡಿಕೆ ಇಟ್ಟಿತ್ತು ಎಂದು ಹೇಳಲಾಗುತ್ತಿದೆ.

ನವದೆಹಲಿ(ಡಿ.26): ತಾರಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಐಪಿಎಲ್‌ನ ಗುಜರಾತ್‌ ಜೈಂಟ್ಸ್‌ ತೊರೆದು ಮುಂಬೈ ಇಂಡಿಯನ್ಸ್‌ಗೆ ಮರಳಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಆದರೆ ಅವರ ವರ್ಗಾವಣೆಗಾಗಿ ಮುಂಬೈ ತಂಡ ಗುಜರಾತ್‌ಗೆ ಬರೋಬ್ಬರಿ 100 ಕೋಟಿ ರು. ನೀಡಿತ್ತು ಎಂಬ ಅಚ್ಚರಿಯ ಸಂಗತಿ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಐಪಿಎಲ್ ಟ್ರೇಡಿಂಗ್ ನಿಯಮ ಪ್ರಕಾರ ಒಬ್ಬ ಆಟಗಾರನನ್ನು ಮತ್ತೊಂದು ತಂಡದಿಂದ ಖರೀದಿಸಬೇಕಾದರೆ ಎರಡೂ ಫ್ರಾಂಚೈಸಿಗಳು ಒಮ್ಮತಕ್ಕೆ ಬರಬೇಕು. ಮಾರಾಟ ಮಾಡುವ ಫ್ರಾಂಚೈಸಿಯು ಹೇಳುವ ಮೊತ್ತವನ್ನು ಖರೀದಿಸುವ ಫ್ರಾಂಚೈಸಿ ನೀಡಬೇಕಾಗುತ್ತದೆ. ಹಾರ್ದಿಕ್‌ರನ್ನು ನೀಡಬೇಕಿದ್ದರೆ ಮುಂಬೈನಿಂದ ಗುಜರಾತ್‌ ₹100 ಕೋಟಿ ಬೇಡಿಕೆ ಇಟ್ಟಿತ್ತು ಎಂದು ಹೇಳಲಾಗುತ್ತಿದೆ.

ಮುಂಬೈ ಮುನ್ನಡೆಸಲಿರುವ ಹಾರ್ದಿಕ್ ಪಾಂಡ್ಯ

ಗುಜರಾತ್‌ ಟೈಟಾನ್ಸ್‌ ಬಿಟ್ಟು ಮುಂಬೈ ಇಂಡಿಯನ್ಸ್‌ಗೆ ಮರಳಿದ ಒಂದು ತಿಂಗಳೊಳಗೆ ಹಾರ್ದಿಕ್‌ ಪಾಂಡ್ಯ ಹೆಗಲಿಗೆ ಫ್ರಾಂಚೈಸಿಯು ನಾಯಕತ್ವದ ಭಾರ ಹೊರಿಸಿದೆ. 2024ರ ಐಪಿಎಲ್‌ನಲ್ಲಿ ತಂಡವನ್ನು ಹಾರ್ದಿಕ್‌ ಮುನ್ನಡೆಸಲಿದ್ದಾರೆ. 2013-2023ರ ನಡುವೆ 5 ಐಪಿಎಲ್‌ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್‌ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕೆಲ ದಿನಗಳ ಹಿಂದಷ್ಟೇ ಹೊಸ ನಾಯಕನನ್ನು ನೇಮಿಸಿ, ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಗಿದ್ದಾಗಿ ತಿಳಿಸಿದೆ. 

2023ರಲ್ಲಿ ಟೀಂ ಇಂಡಿಯಾ ಪರ ಭರವಸೆ ಮೂಡಿಸಿದ ಐವರು ಪ್ಲೇಯರ್ಸ್..!

ಮುಂಬೈ ಇಂಡಿಯನ್ಸ್‌ನ ಜಾಗತಿಕ ಮುಖ್ಯಸ್ಥ ಮಹೇಲಾ ಜಯವರ್ಧನೆ, ಹಾರ್ದಿಕ್‌ ಪಾಂಡ್ಯ ಅವರ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಈ ನಿರ್ಧಾರ ಪರಂಪರೆ ಬೆಳೆಸುವ ಭಾಗವಾಗಿದೆ. ಭವಿಷ್ಯದ ಸವಾಲುಗಳಿಗೆ ಸದಾ ಸಿದ್ಧರಾಗಿರಬೇಕು ಎನ್ನುವುದು ತಂಡದ ಧ್ಯೇಯ. ಅದಕ್ಕೆ ತಕ್ಕಂತೆ ನಡೆದುಕೊಳ್ಳಲು ಹಾರ್ದಿಕ್‌ಗೆ ನಾಯಕತ್ವ ನೀಡಲಾಗಿದೆ. ಮುಂಬೈ ತಂಡವು ಸಚಿನ್‌, ಹರ್ಭಜನ್‌, ಪಾಂಟಿಂಗ್‌, ರೋಹಿತ್‌ರಂತಹ ದಿಗ್ಗಜ ನಾಯಕರಡಿಯಲ್ಲಿ ಆಡಿ ಯಶಸ್ಸು ಕಂಡಿದೆ’ ಎಂದಿದ್ದಾರೆ.

ಷರತ್ತು ಹಾಕಿ ಮುಂಬೈ ತಂಡ ಸೇರಿದ ಹಾರ್ದಿಕ್‌ ಪಾಂಡ್ಯ?

ನಾಯಕನ್ನಾಗಿ ಮಾಡುವುದಾದರೆ ಮಾತ್ರ ಗುಜರಾತ್‌ ಜೈಂಟ್ಸ್‌ ತಂಡ ಬಿಟ್ಟು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರುವುದಾಗಿ ಹಾರ್ದಿಕ್‌ ಪಾಂಡ್ಯ ಷರತ್ತು ಹಾಕಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ತಮ್ಮ ತಂಡಕ್ಕೆ ಬರುವಂತೆ ಮುಂಬೈ ಮಾಲಿಕರು ಸಂಪರ್ಕಿಸಿದಾಗ, ಹಾರ್ದಿಕ್‌ ನಾಯಕತ್ವಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಒಪ್ಪಿದ ತಂಡದ ಮಾಲಿಕ ಆಕಾಶ್‌ ಅಂಬಾನಿ, ಏಕದಿನ ವಿಶ್ವಕಪ್‌ ಆರಂಭಗೊಳ್ಳುವ ಮೊದಲೇ ರೋಹಿತ್‌ ಶರ್ಮಾ ಜೊತೆ ಚರ್ಚಿಸಿ, ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್‌ಸ್ಟೋರಿ; ಮಾಜಿ ಪ್ರೇಯಸಿಯಿಂದ ಗಂಭೀರ ಆರೋಪ

ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಕಳೆದೆರಡು ಐಪಿಎಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ತೋರಿತ್ತು. ನಾಯಕನಾದ ಮೊದಲ ಪ್ರಯತ್ನದಲ್ಲೇ ಹಾರ್ದಿಕ್ ಪಾಂಡ್ಯ 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇನ್ನು 2023ರ ಐಪಿಎಲ್ ಟೂರ್ನಿಯಲ್ಲೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ರೋಚಕ ಸೋಲು ಅನುಭವಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.