ಪೊಲೀಸ್ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಲವ್‌ಸ್ಟೋರಿ; ಮಾಜಿ ಪ್ರೇಯಸಿಯಿಂದ ಗಂಭೀರ ಆರೋಪ
ಕಾರಿಯಪ್ಪ ನನ್ನ ಪೋಷಕರ ಬಳಿ ಬಂದು ನನ್ನನ್ನು ಮದುವೆಯಾಗ್ತೇನೆ ಅಂತ ಹೇಳಿದ್ರು. ನನ್ನ ಪೋಷಕರ ಜತೆ ಮಾತನಾಡುವಾಗ ಮದುವೆಯನ್ನು ನೀವೇ ಮಾಡಿಕೊಡಬೇಕು ಎಂದು ಹೇಳಿದ್ರು. ಮನೆ ಬಳಿಯೇ ತಮಗೆ ಫ್ಲಾಟ್ ಮಾಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದರು ಎಂದು ಕಾರಿಯಪ್ಪ ಮಾಜಿ ಪ್ರಿಯತಮೆ ಆರೋಪಿಸಿದ್ದಾರೆ.
ಬೆಂಗಳೂರು(ಡಿ.25): ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಅವರ ಮೇಲೆ ಪ್ರೀತಿಸಿ ವಂಚಿಸಿದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ಬೆಂಗಳೂರಿನ ಎರಡು ಪೊಲೀಸ್ ಠಾಣೆಯಲ್ಲಿ ಕೆ ಸಿ ಕಾರಿಯಪ್ಪ ಹಾಗೂ ಅವರ ಮಾಜಿ ಪ್ರಿಯತಮೆ ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ಲೈಂಗಿಕವಾಗಿ ಬಳಸಿಕೊಂಡು, ಈಗ ಮೋಸ ಮಾಡಿದ್ದಾರೆ ಎಂದು ಕಾರಿಯಪ್ಪ ಅವರ ಮಾಜಿ ಪ್ರಿಯತಮೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಷ್ತಾಕ್ ಅಲಿ ಟೂರ್ನಿಯ ವೇಳೆ ಅವರು ನನ್ನನ್ನು ಹೆಂಡತಿ ಎಂದು ಹೇಳಿ ನನ್ನನ್ನು ಕರೆದುಕೊಂಡು ಹೋಗಿದ್ದರು. ಆದರೆ ರಾಜಸ್ಥಾನ ಕ್ಯಾಂಪ್‌ಗೆ ಹೋದಾಗಿನಿಂದ ನನ್ನನ್ನು ಅವೈಡ್ ಮಾಡಲಾರಂಭಿಸಿದರು. ನಾನು ಪ್ರಶ್ನೆ ಮಾಡಿದಾಗ ಸ್ವಲ್ಪ ಬ್ಯುಸಿ ಇದ್ದೇನೆ ಎಂದು ಹೇಳಿದರು ಎಂದು ಮಾಜಿ ಪ್ರಿಯತಮೆ ಆರೋಪಿಸಿದ್ದಾರೆ.
ಕಾರಿಯಪ್ಪ ನನ್ನ ಪೋಷಕರ ಬಳಿ ಬಂದು ನನ್ನನ್ನು ಮದುವೆಯಾಗ್ತೇನೆ ಅಂತ ಹೇಳಿದ್ರು. ನನ್ನ ಪೋಷಕರ ಜತೆ ಮಾತನಾಡುವಾಗ ಮದುವೆಯನ್ನು ನೀವೇ ಮಾಡಿಕೊಡಬೇಕು ಎಂದು ಹೇಳಿದ್ರು. ಮನೆ ಬಳಿಯೇ ತಮಗೆ ಫ್ಲಾಟ್ ಮಾಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದರು ಎಂದು ಕಾರಿಯಪ್ಪ ಮಾಜಿ ಪ್ರಿಯತಮೆ ಆರೋಪಿಸಿದ್ದಾರೆ.
ನಾನು ಸ್ನೇಹಿತರ ಜತೆಗೆ ಎಲ್ಲಿಗಾದರೂ ಹೋದರೆ ಅದನ್ನು ಪ್ರಶ್ನೆ ಮಾಡುತ್ತಿದ್ದರು. ಅವರು ಮಾನಸಿಕವಾಗಿ ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ನನ್ನ ಬಳಿ ಅವರ ವಿಡಿಯೋ ಸಹ ಇದೆ. ನಾನು ಆಲ್ಕೋಹಾಲ್ ಸೇವಿಸ್ತೇನೆ. ಆದರೆ ಕಾರಿಯಪ್ಪ ವೀಡ್ ಮಾದರಿಯ ಡ್ರಗ್ಸ್ ಸೇವಿಸುತ್ತಾರೆ. ನನ್ನ ಹಾಗೂ ಅವರ ನಡುವೆ ಬ್ರೇಕ್ ಅಪ್ ಆಗಿಲ್ಲ, ಆದ್ರೆ ಅವರು ನನ್ನನ್ನು ಅವೈಡ್ ಮಾಡುತ್ತಿದ್ದಾರೆ ಎಂದು ಕಾರಿಯಪ್ಪ ಮಾಜಿ ಪ್ರಿಯತಮೆ ಆರೋಪಿಸಿದ್ದಾರೆ.
ಅವರಿಗೆ ನಾನು ಹಲವು ಬಾರಿ ಹಣ ಕೊಟ್ಟಿದ್ದೇನೆ. ಎರಡು ಲಕ್ಷದವರೆಗೆ ಹಣ ಕೊಟ್ಟಿದ್ದೇನೆ. ನಾವಿಬ್ಬರೂ ಒಂದೇ ಊರಿನವರಾಗಿದ್ದರಿಂದ ನಾನೇ ಅವರಿಗೆ ಮೆಸೇಜ್ ಮಾಡಿದ್ದೆ. ಅವರು ಪಬ್ಲಿಕ್ ಫಿಗರ್ ಹಾಗಾಗಿ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದೆ. ಕೊನೆಗೆ ಅವರೇ ನನಗೆ ಮೆಸೇಜ್ ಮಾಡಿದ್ದರು. ನನಗೆ ಅವರಿಂದ ಮೋಸವಾಗಿರುವ ಬಗ್ಗೆ ನಾನು ಕ್ರಿಕೆಟ್ ಅಸೋಸಿಯೇಷನ್‌ಗೂ ಪತ್ರ ಬರೆಯುತ್ತೇನೆ ಎಂದು ಕಾರಿಯಪ್ಪ ಮಾಜಿ ಪ್ರಿಯತಮೆ ಆರೋಪಿಸಿದ್ದಾರೆ.
ಕಾರಿಯಪ್ಪ ಅವರಿಂದ ಪ್ರತ್ಯೇಕ ದೂರು:
ಇನ್ನು ಕ್ರಿಕೆಟಿಗ ಕೆ ಸಿ ಕಾರಿಯಪ್ಪ ಕೂಡಾ ಆ ಮಹಿಳೆಯ ವಿರುದ್ದ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದೂವರೆ ವರ್ಷದ ಹಿಂದೆಯೇ ಆಕೆಯೊಂದಿಗೆ ನಾನು ಬ್ರೇಕ್‌ಅಪ್ ಮಾಡಿಕೊಂಡಿದ್ದೇನೆ. ಆಕೆ ಅಭ್ಯಾಸಗಳು ಸರಿಯಿಲ್ಲ. ಈಗ ನನ್ನ ಕ್ರಿಕೆಟ್ ಭವಿಷ್ಯ ಹಾಳು ಮಾಡುತ್ತೇನೆ ಎಂದು ಗಲಾಟೆ ಮಾಡುತ್ತಿದ್ದಾಳೆ. ನನ್ನ ಮನೆ ಬಳಿ ಬಂದು ಗಲಾಟೆ ಮಾಡುತ್ತಾಳೆ ಎಂದು ಕಾರಿಯಪ್ಪ ದೂರು ನೀಡಿದ್ದಾರೆ.