19ನೇ ಆವೃತ್ತಿಯ ಐಪಿಎಲ್‌ನಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ 13 ವರ್ಷಗಳಿಂದ ಮೊದಲ ಪಂದ್ಯದಲ್ಲಿ ಸೋಲುತ್ತಿದ್ದ ಕಳಂಕವನ್ನು ತಂಡವು ಅಳಿಸಿಹಾಕಿದೆ.
ಮುಂಬೈ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಭಾರಂಭ ಮಾಡುವಲ್ಲಿ ಯಶಸ್ವಿಯಾಗಿದೆ. ಐತಿಹಾಸಿಕ ವಾಂಖೆಡೆ ಮೈದಾನದಲ್ಲಿ ಮಾರ್ಚ್ 29ರಂದು ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಆರು ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರಿಂದಲೂ ಮಾಡಲು ಆಗದ ಸಾಧನೆಯನ್ನು ಹಾರ್ದಿಕ್ ಪಾಂಡ್ಯ ಮಾಡಿ ತೋರಿಸಿದ್ದಾರೆ.
2012ರ ಬಳಿಕ ಮೊದಲ ಪಂದ್ಯ ಗೆದ್ದ ಮುಂಬೈ ಇಂಡಿಯನ್ಸ್!
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕಳೆದ 13 ವರ್ಷಗಳಿಂದಲೂ ತಾನಾಡಿದ ಮೊದಲ ಪಂದ್ಯವನ್ನು ಸೋಲುತ್ತಲೇ ಬಂದಿತ್ತು. 2012ರ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನ ಮೊದಲ ಪಂದ್ಯವನ್ನು ಸತತವಾಗಿ ಸೋಲುತ್ತಲೇ ಬಂದಿತ್ತು. ಆದರೆ ಇದೀಗ ಕೋಲ್ಕತಾ ನೈಟ್ ರೈಡರ್ಸ್ ಎದುರು ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ರಿಯಾನ್ ರಿಕೆಲ್ಟನ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಮುಂಬೈ 6 ವಿಕೆಟ್ ಗೆಲುವು ಸಾಧಿಸಿ, 13 ವರ್ಷಗಳ ಮೊದಲ ಪಂದ್ಯದ ಸೋಲಿನ ಕಳಂಕ ತೊಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಮೊದಲ ಪಂದ್ಯ ಗೆದ್ದಿದ್ದು ಯಾವಾಗ?
ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಬಾರಿಗೆ 2012ರಲ್ಲಿ ಮೊದಲ ಪಂದ್ಯವನ್ನು ಗೆದ್ದಿತ್ತು. ಐತಿಹಾಸಿಕ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಾದ ಬಳಿಕ ಕಳೆದ 13 ಸೀಸನ್‌ನಿಂದಲೂ ಮೊದಲ ಪಂದ್ಯದ ಗೆಲುವಿಗಾಗಿ ಮುಂಬೈ ಇಂಡಿಯನ್ಸ್ ಹಪಹಪಿಸುತ್ತಿತ್ತು. ಇದೀಗ ಕೊನೆಗೂ 2026ರಲ್ಲಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
300 ಟಿ20 ಪಂದ್ಯ: ಮುಂಬೈ ಇಂಡಿಯನ್ಸ್ ದಾಖಲೆ
ಮುಂಬೈ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ವಿಶೇಷ ಮೈಲುಗಲ್ಲು ಸಾಧಿಸಿದೆ. ವಿಶ್ವದಲ್ಲೇ 300 ಟಿ20 ಪಂದ್ಯಗಳನ್ನಾಡಿದ ಮೊದಲ ಫ್ರಾಂಚೈಸಿ ತಂಡ ಎಂಬ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ ಪಾತ್ರವಾಗಿದೆ.
2008ರಿಂದಲೂ ಐಪಿಎಲ್ ಆಡುತ್ತಿರುವ ಮುಂಬೈ ತಂಡ, 5 ಬಾರಿ ಚಾಂಪಿಯನ್ ಆಗಿದೆ. ಐಪಿಎಲ್ ಮಾತ್ರವಲ್ಲದೇ ಚಾಂಪಿಯನ್ಸ್ ಲೀಗ್‌ನಲ್ಲೂ ಮುಂಬೈ ಕೆಲ ಪಂದ್ಯಗಳನ್ನಾಡಿವೆ. ಭಾನುವಾರದ ಪಂದ್ಯಕ್ಕೂ ಮುನ್ನ ಒಟ್ಟು 299 ಪಂದ್ಯಗಳ ಪೈಕಿ ಮುಂಬೈ 162ರಲ್ಲಿ ಗೆದ್ದಿದ್ದು, 132 ಪಂದ್ಯಗಳಲ್ಲಿ ಸೋತಿದೆ. 4 ಪಂದ್ಯ ಟೈ ಆಗಿದ್ದರೆ, 2 ಪಂದ್ಯ ರದ್ದುಗೊಂಡಿದೆ.
ಇನ್ನು, ಟಿ20ಯಲ್ಲಿ ಗರಿಷ್ಠ ಪಂದ್ಯವಾಡಿದ 2ನೇ ಫ್ರಾಂಚೈಸಿ ತಂಡ ಖ್ಯಾತಿ ಐಪಿಎಲ್‌ನ ಹಾಲಿ ಚಾಂಪಿಯನ್ ಆರ್‌ಸಿಬಿಗೆ ಇದೆ. ಬೆಂಗಳೂರಿನ ತಂಡ 287 ಪಂದ್ಯಗಳನ್ನಾಡಿದ್ದು, 140ರಲ್ಲಿ ಗೆದ್ದು, 140ರಲ್ಲಿ ಸೋಲನುಭವಿಸಿದೆ. 3 ಬಾರಿ ಚಾಂಪಿಯನ್ ಕೋಲ್ಕತಾ ತಂಡ 282 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಮುಂಬೈ ವಿರುದ್ಧದ ಸೆಣಸಾಟಕ್ಕೂ ಮುನ್ನ 281 ಪಂದ್ಯಗಳಲ್ಲಿ ತಂಡ 144ರಲ್ಲಿ ಗೆದ್ದಿದ್ದರೆ, 130 ಪಂದ್ಯಗಳಲ್ಲಿ ಪರಾಭವಗೊಂಡಿತ್ತು.
ಐಪಿಎಲ್‌ನಲ್ಲಿ ಗರಿಷ್ಠ ಪಂದ್ಯ
ತಂಡ ಪಂದ್ಯ
ಮುಂಬೈ 300
ಆರ್‌ಸಿಬಿ 287
ಕೆಕೆಆರ್ 281
ಸಿಎಸ್‌ಕೆ 277
ಡೆಲ್ಲಿ 274
ಪಂಜಾಬ್ 268
ರಾಜಸ್ಥಾನ 242
ಸನ್‌ರೈಸರ್ಸ್ 203
ಡೆಕ್ಕನ್ 77
ಗುಜರಾತ್ 60

