ನವದೆಹಲಿ(ಮೇ.12): ಇಂಗ್ಲೆಂಡ್‌ ಪ್ರವಾಸಕ್ಕೆ ಬಿಸಿಸಿಐ ಬರೋಬ್ಬರಿ 20 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಜತೆ ಜತೆಗೆ ನಾಲ್ವರು ತಜ್ಞ ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೂ ಬಿಸಿಸಿಐ ಮಣೆ ಹಾಕಿದೆ. 

ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಶರ್ಮಾ, ಶುಭ್‌ಮನ್‌ ಗಿಲ್‌, ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್‌. ರಾಹುಲ್‌ಗೆ ಬಿಸಿಸಿಐ ಅವಕಾಶ ನೀಡಿದೆ. ಇದೇ ವೇಳೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಕ್ಕೆ ಒಳಗಾಗಿದ್ದ ವೇಗಿ ಮೊಹಮ್ಮದ್ ಶಮಿ ಹಾಗೂ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ಸಹಾ ಇಂಗ್ಲೆಂಡ್‌ ಪ್ರವಾಸಕ್ಕೆ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರು ಆಟಗಾರರು ತವರಿನಲ್ಲಿ ಇಂಗ್ಲೆಂಡ್ ವಿರುದ್ದ ನಡೆದ ಸರಣಿಯಿಂದ ಹೊರಗುಳಿದಿದ್ದರು.

ಇದೀಗ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದರಿಂದ ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ. ಈಗಾಗಲೇ ಟೀಂ ಇಂಡಿಯಾ ಡೆಡ್ಲಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್‌ ವೇಗದ ಬೌಲಿಂಗ್‌ ವಿಭಾಗದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಆದರೆ ಈ ಐವರು ವೇಗದ ಬೌಲರ್‌ಗಳ ಪೈಕಿ ಆಡುವ ಹನ್ನೊಂದರ ಬಳಗದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎನ್ನುವ ಕುತೂಹಲ ಸಾಕಷ್ಟು ಜೋರಾಗಿದೆ. ಆದರೆ ಟೀಂ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ ಎಸ್‌ ಕೆ ಪ್ರಸಾದ್‌ ಮೊಹಮ್ಮದ್ ಸಿರಾಜ್‌ಗೆ ಖಂಡಿತ ಅವಕಾಶ ಸಿಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ವೃತ್ತಿಜೀವನದ ಆರಂಭಿಕ ಹಂತದಲ್ಲೇ 27 ವರ್ಷದ ಸಿರಾಜ್‌ ಇನ್ನುಳಿದ ಯುವ ವೇಗಿಗಳನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಸಾಗಿದ್ದಾರೆ ಎಂದು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; ಬಲಿಷ್ಠ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ!

ಈಗ ಮೊಹಮ್ಮದ್ ಸಿರಾಜ್‌ ಉಳಿದೆಲ್ಲಾ ಬೌಲರ್‌ಗಳನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಬಂದಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಸತತವಾಗಿ ವಿಕೆಟ್‌ ಕಬಳಿಸುವ ಮೂಲಕ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಉಳಿದೆಲ್ಲರಿಗಿಂತ ಸದ್ಯ ಸಿರಾಜ್ ಸಾಕಷ್ಟು ಮುಂದಿದ್ದಾರೆ. ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಿರಾಜ್‌ಗೆ ಇಂಗ್ಲೆಂಡ್‌ ಸರಣಿಯಲ್ಲಿ ಮಣೆ ಹಾಕುವುದು ಒಳಿತು ಎಂದು ಸ್ಪೋರ್ಟ್ಸ್‌ಕೀಡಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ 2020/21ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಎಂಸಿಜಿಯಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 2 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದ್ದರು. ಇನ್ನು ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಕೇವಲ 2 ವಿಕೆಟ್ ಪಡೆದಿದ್ದ ಸಿರಾಜ್‌, ಬ್ರಿಸ್ಬೇನ್‌ನ ಗಾಬಾ ಟೆಸ್ಟ್‌ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಇನಿಂಗ್ಸ್‌ನೊಂದರಲ್ಲಿ 5 ವಿಕೆಟ್‌ ಕಬಳಿಸುವ ಮೂಲಕ ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ತವರಿನಲ್ಲಿ ಇಂಗ್ಲೆಂಡ್ ವಿರುದ್ದ 2 ಪಂದ್ಯವನ್ನಾಡಿ ಸಿರಾಜ್ 3 ವಿಕೆಟ್ ಪಡೆದಿದ್ದಾರೆ.