Asianet Suvarna News Asianet Suvarna News

MS Dhoni Team India: ವಿಶ್ವಕಪ್‌ನಲ್ಲಿ ಕೆಟ್ಟ ನಿರ್ವಹಣೆ, ಎಂಎಸ್‌ ಧೋನಿಗೆ ಬಿಸಿಸಿಐ ಬುಲಾವ್‌?

ಟೀಮ್‌ ಇಂಡಿಯಾ ಟಿ20 ತಂಡವನ್ನು ಇನ್ನಷ್ಟು ಬಲಿಷ್ಠ ಮಾಡಲು ಬಿಸಿಸಿಐ ಈಗಾಗಲೇ ಕೆಲಸ ಆರಂಭಿಸಿದೆ. 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನ ಸೋಲು ತಂಡದಲ್ಲಿ ಆಗಬಹುದಾದ ಕೆಲವೊಂದು ಬದಲಾವಣೆಗಳ ಬಗ್ಗೆ ಸಣ್ಣ ಸೂಚನೆ ನೀಡಿದೆ. ಬಿಸಿಸಿಐ ಟಿ20 ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದ್ದು, ಯಾವುದಾದರೂ ಒಂದು ರೂಪದಲ್ಲಿ ಎಂಎಸ್‌ ಧೋನಿಗೆ ಈ ತಂಡದ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ.
 

MS Dhoni return to Team India T20 Team Incharge BCCI plan ready san
Author
First Published Nov 15, 2022, 1:52 PM IST

ನವದೆಹಲಿ (ನ.15): ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಹಂತದಲ್ಲಿ ಸೋಲು ಕಾಣುವುದರೊಂದಿಗೆ, ವಿಶ್ವಕಪ್‌ ಗೆಲ್ಲುವ ಭಾರತ ತಂಡದ ಬಹುದಿನಗಳ ಆಸೆ ಭಗ್ನವಾಗಿದೆ. ತಂಡ ಮತ್ತೊಮ್ಮೆ ಸೆಮಿಫೈನಲ್‌ನಲ್ಲಿಯೇ ಸೋಲು ಕಂಡಿದ್ದು ಅಭಿಮಾನಿಗಳಿಗೆ ಮಾತ್ರವಲ್ಲ ಸ್ವತಃ ಬಿಸಿಸಿಐ ಅಧಿಕಾರಿಗಳಿಗೂ ಬೇಸರ ತಂದಿದೆ. ವಿಶ್ವಕಪ್‌ಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡರೂ, ಸೂಕ್ತ ಆಟಗಾರರನ್ನು ಆಯ್ಕೆ ಮಾಡಿಕೊಂಡರೂ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ತಂಡ ವಿಫಲವಾಗಿದೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ತಂಡ ಆಡಿರುವ ರೀತಿ ಬಿಸಿಸಿಐಗೆ ಆಘಾತ ತಂದಿದೆ. ಯಾವುದೇ ಪಂದ್ಯದಲ್ಲೂ ಟೀಮ್ ಇಂಡಿಯಾ ಅಧಿಕಾರಯುತ ಗೆಲುವು ದಾಖಲು ಮಾಡಿರಲಿಲ್ಲ, ಅದರ ಬೆನ್ನಿಗೆ ಸೆಮಿಫೈನಲ್‌ನಲ್ಲಿ 10 ವಿಕೆಟ್‌ ಸೋಲು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಟಿ20 ತಂಡದ ಸಂಪೂರ್ಣ ಚಹರೆಯನ್ನೇ ಬದಲಿಸಲು ಬಿಸಿಸಿಐ ಯೋಚನೆ ಮಾಡಿದೆ. ಆದರೆ, ತಂಡದಲ್ಲಿನ ಸಂಪೂರ್ಣ ಬದಲಾವಣೆಗೆ ಬಿಸಿಸಿಐ ಸಿದ್ಧವಾಗಿದೆಯೇ ಹಾಗೂ ಬದಲಾವಣೆ ಮಾಡಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದೇ ಮುಖ್ಯ ಪ್ರಶ್ನೆಯಾಗಿ ಉಳಿದುಕೊಂಡಿದೆ.

ಟೆಲಿಗ್ರಾಫ್‌ ಪತ್ರಿಕೆಯ ವರದಿಯ ಪ್ರಕಾರ, ಏಕದಿನ ಹಾಗೂ ಟೆಸ್ಟ್‌ ತಂಡದಲ್ಲಿ ಬದಲಾವಣೆ ಬಗ್ಗೆ ಬಿಸಿಸಿಐ ಹೆಚ್ಚಿನ ಗಮನ ನೀಡಿಲ್ಲ. ಆದರೆ, ಟಿ20 ಮಾದರಿಯ ತಂಡದ ಸ್ವರೂಪ, ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆ ಎಲ್ಲವೂ ಬದಲಾಗಲಿದೆ. ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ವಿಚಾರವಾಗಿ ಬಿಸಿಸಿಐ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಹಾರ್ದಿಕ್‌ ಪಾಂಡ್ಯ ಅವರನ್ನು ಟಿ20 ಮಾದರಿಯ ನಾಯಕನ್ನಾಗಿ ಘೋಷಣೆ ಮಾಡಬೇಕೋ ಅಥವಾ ಟಿ20 ಮತ್ತು ಏಕದಿನ ಮಾದರಿಗಳಿಗೆ ಬೇರೆ-ಬೇರೆ ನಾಯಕರು ಹಾಗೂ ಕೋಚ್‌ಗಳು ಇರಬೇಕೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಮಾಜಿ ನಾಯಕ ಎಂಎಸ್‌ ಧೋನಿಯನ್ನು ಮತ್ತೆ ಟೀಮ್‌ ಇಂಡಿಯಾ ಬಳಗದಲ್ಲಿ ಸೇರಿಸಲು ಬಿಸಿಸಿಐ ಉತ್ಸುಕವಾಗಿದೆ ಎನ್ನುವುದು ಮುಖ್ಯವಾದ ವಿಚಾರವಾಗಿದೆ. ಐಸಿಸಿ ಟೂರ್ನಿಗಳಲ್ಲಿ ಟೀಮ್‌ ಇಂಡಿಯಾ ಹೇಗೆ ಆಡಬೇಕು, ಆಟಗಾರರ ಸಿದ್ಧತೆ ಯಾವೆಲ್ಲಾ ರೀತಿ ಇರಬೇಕು ಎನ್ನುವುದರ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಸಿಐ, ಎಂಎಸ್‌ ಧೋನಿಗೆ ವಹಿಸಲು ಇಚ್ಛಿಸಿದೆ.

ತಂಡದಲ್ಲಿ ಧೋನಿ ಪಾತ್ರವೇನು?: 2021ರ ಟಿ20 ವಿಶ್ವಕಪ್‌ ಸಮಯದಲ್ಲೂ ಎಂಎಸ್‌ ಧೋನಿ ಟೀಮ್‌ ಇಂಡಿಯಾದ ಮೆಂಟರ್‌ ಆಗಿ ಕೆಲಸ ಮಾಡಿದ್ದರು. ಆದರೆ, ಕೇವಲ ಅದೊಂದು ಟೂರ್ನಿಗಾಗಿ ಬಿಸಿಸಿಐ ಧೋನಿ ಅವರಿಗೆ ಈ ಜವಾಬ್ದಾರಿ ನೀಡಿತ್ತು. ತಂಡ ವಿಶ್ವಕಪ್‌ನಲ್ಲಿ ನಿರ್ಗಮಿಸುವುದರೊಂದಿಗೆ ಧೋನಿ ಕೆಲಸವೂ ಮುಗಿದಿತ್ತು. ಆದರೆ, ಧೋನಿ ಈ ತಂಡದಲ್ಲಿ ಮೇಜರ್‌ ಇಂಪಾಕ್ಟ್‌ ಮಾಡದೇ ಇರಲು ಕಾರಣ ಅವರಿಗೆ ಸಿಕ್ಕ ಕಡಿಮೆ ಅವಧಿ. ಆದರೆ, ಈ ಬಾರಿ ಧೋನಿಗೆ ಖಾಯಂ ಆಗಿ ಮೆಂಟರ್‌ ಸ್ಥಾನ ನೀಡಲು ನಿರ್ಧರಿಸಿದೆ. ಧೋನಿಯ ಮಾರ್ಗದರ್ಶನದೊಂದಿಗೆ ಐಸಿಸಿ ಟೂರ್ನಿಗಳಲ್ಲಿ ತಂಡ ಹೇಗೆ ಯಶಸ್ಸಿನ ದಾರಿಗೆ ಏರಬೇಕು ಎನ್ನುವುದರ ಬಗ್ಗೆ ತರಬೇತಿ ಪಡೆದುಕೊಳ್ಳಲಿದೆ.

T20 World Cup: ಧೋನಿ ದಾಖಲೆ ಸರಿಗಟ್ಟಿದ ಬಟ್ಲರ್‌, ಟ್ರೋಫಿಯೊಂದಿಗೆ ಸಂಭ್ರಮಿಸಿದ ಇಂಗ್ಲೆಂಡ್‌!

ವರದಿಯ ಪ್ರಕಾರ, ಐಪಿಎಲ್ 2023 ರ ನಂತರ ಎಂಎಸ್ ಧೋನಿ ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಟೀಮ್‌ ಇಂಡಿಯಾದ ಜೊತೆ ಇರಲು ಸಮಯವೂ ಇರುತ್ತದೆ. ಟಿ 20 ಸ್ವರೂಪದಲ್ಲಿ ಟೀಮ್ ಇಂಡಿಯಾದೊಂದಿಗೆ ಕೆಲಸ ಮಾಡಲು ಬಿಸಿಸಿಐ ಅವರನ್ನು ಕೇಳುವ ಸಾಧ್ಯತೆ ಇದೆ. ತಂಡದ ಮುಖ್ಯ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ಗೆ ಮೂರೂ ಸ್ವರೂಪಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ.

'ಇದಕ್ಕೆ ಕರ್ಮ ಅಂತಾರೆ..' ಪಾಕ್‌ ಸೋಲಿನ ಬಳಿಕ ಅಖ್ತರ್‌ಗೆ ಮೊಹಮದ್‌ ಶಮಿ ಸೂಪರ್‌ ಚಾಟಿಯೇಟು!

2022ರ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋತು ಇನ್ನೂ ಒಂದು ವಾರ ಕಳೆದಿಲ್ಲ ಮತ್ತು ಇದ್ದಕ್ಕಿದ್ದಂತೆ ಬೆಳವಣಿಗೆ ತೀವ್ರಗೊಳ್ಳಲು ಆರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತದೆಯೇ ಅಥವಾ ವಿಷಯಗಳನ್ನು ಸುಗಮವಾಗಿ ನಿಭಾಯಿಸುತ್ತದೆಯೇ ಎನ್ನುವುದು ಮುಂದಿನ ಪ್ರಶ್ನೆ. ಮುಂದಿನ ಟಿ20 ವಿಶ್ವಕಪ್ 2024 ರಲ್ಲಿ ನಿಗದಿಯಾಗಿದ.ೆ ಆದರೆ ಅದಕ್ಕೂ ಮೊದಲು 2023 ರಲ್ಲಿ ಏಕದಿನ ವಿಶ್ವಕಪ್ ಇದೆ. ಅಂತಹ ಪರಿಸ್ಥಿತಿಯಲ್ಲಿ, ಮಂಡಳಿಯು ಈಗಾಗಲೇ ಹೊಸ ಯೋಜನೆಯಲ್ಲಿ ತೊಡಗಿ, ರೋಹಿತ್‌ ಶರ್ಮ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕಲಿದೆಯೇ ಎನ್ನುವ ಪ್ರಶ್ನೆ ಕಾಡಿದೆ.

Follow Us:
Download App:
  • android
  • ios