* 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ವೇಳಾಪಟ್ಟಿ ಫಿಕ್ಸ್* ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕೋಲ್ಕತಾ ನೈಟ್ ರೈಡರ್ಸ್ ಸವಾಲು* 2022ನೇ ಸಾಲಿನ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭ

ಮುಂಬೈ(ಫೆ.28): 15ನೇ ಆವೃತ್ತಿಯ ಐಪಿಎಲ್‌ನ (IPL 2022) ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಹಾಗೂ ಕಳೆದ ಬಾರಿ ರನ್ನರ್‌-ಅಪ್‌ ಕೋಲ್ಕತಾ ನೈಟ್‌ ರೈಡ​ರ್ಸ್ (Kolkata Knight Riders) ತಂಡಗಳು ಮುಖಾಮುಖಿಯಾಗಲಿವೆ ಎಂದು ಬಿಸಿಸಿಐ (BCCI) ಅಧಿಕಾರಿ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಮಾರ್ಚ್‌ 26ರಂದು ನಡೆಯಲಿರುವ ಪಂದ್ಯಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಒಂದೆರಡು ದಿನಗಳಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಪಂದ್ಯಗಳು ಮಹಾರಾಷ್ಟ್ರದ 4 ಕ್ರೀಡಾಂಗಣಗಳಲ್ಲಿ ನಿಗದಿಯಾಗಿದ್ದು, ಆಟಗಾರರ ಸಂಚಾರದ ವೇಳೆ ಟ್ರಾಫಿಕ್‌ ಸಮಸ್ಯೆ ಉಂಟಾಗದಿರಲು ಮಹಾರಾಷ್ಟ್ರ ಸರ್ಕಾರ ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡುವ ಭರವಸೆ ನೀಡಿದೆ. ಒಂದು ಹೋಟೆಲ್‌ನಲ್ಲಿ ಎರಡು ತಂಡಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಟೂರ್ನಿಯ ಆರಂಭದಲ್ಲಿ ಶೇ.25ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಬಳಿಕ ಸರ್ಕಾರದ ಮಾರ್ಗಸೂಚಿ ಅನ್ವಯ ಮತ್ತಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

ಐಪಿಎಲ್‌ ಟೀಸರ್‌ನಲ್ಲಿ ಧೋನಿ ಹೊಸ ಲುಕ್‌

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌.ಧೋನಿ (MS Dhoni) ಐಪಿಎಲ್‌ 2022ರ ಪ್ರೊಮೋ ವಿಡಿಯೋದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾನುವಾರ ಐಪಿಎಲ್‌ ಪ್ರಾಯೋಜಕರಾದ ಸ್ಟಾರ್‌ ಸ್ಪೋರ್ಟ್ಸ್‌ ಪ್ರೊಮೋ ವಿಡಿಯೋದ ಟೀಸರ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಧೋನಿ ಖಾಕಿ ಬಟ್ಟೆಧರಿಸಿ ಬಸ್‌ ಚಾಲಕನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಮೊಹಾಲಿಯಲ್ಲಿ ಅಭ್ಯಾಸ ಆರಂಭಿಸಿದ ವಿರಾಟ್‌ ಕೊಹ್ಲಿ

ಮೊಹಾಲಿ: ತಮ್ಮ 100ನೇ ಟೆಸ್ಟ್‌ ಪಂದ್ಯವನ್ನು ಆಡುವ ಹುಮ್ಮಸ್ಸಿನಲ್ಲಿರುವ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli), ಶ್ರೀಲಂಕಾ ವಿರುದ್ಧ ಮಾರ್ಚ್ 4ರಿಂದ ನಡೆಯಲಿರುವ ಮೊದಲ ಟೆಸ್ಟ್‌ ಆಡಲು ಮೊಹಾಲಿ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ. 

IND vs SL T20: ಶ್ರೀಲಂಕಾ ವಿರುದ್ಧ ಭಾರತದ ಕ್ಲೀನ್ ಸ್ವೀಪ್, ಐತಿಹಾಸಿಕ 12ನೇ ಟಿ20 ಗೆದ್ದ ಟೀಂ ಇಂಡಿಯಾ

ಲಂಕಾ ಎದುರಿನ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಅವರು ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಭ್‌ಮನ್‌ ಗಿಲ್‌, ರಿಷಭ್‌ ಪಂತ್‌, ಮೊಹಮದ್‌ ಶಮಿ, ಜಯಂತ್‌ ಯಾದವ್‌, ಆರ್‌.ಅಶ್ವಿನ್‌ ಸಹ ಮೊಹಾಲಿಗೆ ತಲುಪಿದ್ದು, ಅಭ್ಯಾಸದಲ್ಲಿ ತೊಡಗಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ, ಪ್ರವಾಸಿ ಶ್ರೀಲಂಕಾ ಎದುರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ಟೆಸ್ಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

24 ವರ್ಷ ಬಳಿಕ ಪಾಕ್‌ಗೆ ಆಸೀಸ್‌: ಭಾರೀ ಭದ್ರತೆ

ಇಸ್ಲಾಮಾಬಾದ್‌: 24 ವರ್ಷಗಳ ಬಳಿಕ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡ ಸರಣಿ ಆಡಲು ಪಾಕಿಸ್ತಾನಕ್ಕೆ ಆಗಮಿಸಿದೆ. ಪ್ಯಾಟ್‌ ಕಮಿನ್ಸ್‌ (Pat Cummins) ನಾಯಕತ್ವದ ತಂಡ ಮಾರ್ಚ್‌ 4ರಿಂದ 3 ಟೆಸ್ಟ್‌, ಮಾರ್ಚ್‌ 29ರಿಂದ 3 ಏಕದಿನ ಪಂದ್ಯಗಳನ್ನಾಡಲಿದ್ದು, ಏಕೈಕ ಟಿ20 ಪಂದ್ಯ ಏಪ್ರಿಲ್ 5ಕ್ಕೆ ನಿಗದಿಯಾಗಿದೆ.

ಭಾನುವಾರ ಇಸ್ಲಾಮಾಬಾದ್‌ಗೆ ಬಂದಿಳಿದ ತಂಡ ಅಲ್ಲೇ ಹೋಟೆಲ್‌ನಲ್ಲಿ ತಂಗಿದ್ದು, ಸುಮಾರು 4,000 ಮಂದಿ ಪೊಲೀಸ್‌ ಹಾಗೂ ಸೈನಿಕರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆ ಬಗ್ಗೆ ಕಮಿನ್ಸ್‌ ಸಂತೋಷ ವ್ಯಕ್ತಪಡಿಸಿದ್ದಾರೆ. 1998ರಲ್ಲಿ ಆಸೀಸ್‌ ಕೊನೆ ಬಾರಿ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಿತ್ತು. 2009ರಲ್ಲಿ ಶ್ರೀಲಂಕಾ ಕ್ರಿಕೆಟಿಗರ ಬಸ್‌ ಮೇಲೆ ಉಗ್ರರ ದಾಳಿ ಬಳಿಕ ಹಲವು ವರ್ಷಗಳ ಕಾಲ ಯಾವುದೇ ತಂಡ ಪಾಕ್‌ಗೆ ತೆರಳಿರಲಿಲ್ಲ. ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳು ಪಾಕ್‌ ಪ್ರವಾಸ ರದ್ದುಗೊಳಿಸಿದ್ದವು.