ನವದೆಹಲಿ[ಡಿ.11]: ಭಾರತ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸ್ತ್ರಿ ಮತ್ತೊಮ್ಮೆ ಎಂ.ಎಸ್‌.ಧೋನಿಯನ್ನು ಬೆಂಬಲಿಸಿದ್ದಾರೆ. ಅವರನ್ನು ಯಾರೂ ಪ್ರಶ್ನಿಸಲು ಹೋಗಬಾರದು ಎಂದು ಶಾಸ್ತ್ರಿ ಹೇಳಿದ್ದಾರೆ. 

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರವಿಶಾಸ್ತ್ರಿ, ‘ಆತ ಒಬ್ಬ ದಿಗ್ಗಜ ಆಟಗಾರ. ತಮ್ಮ ಪ್ರಭಾವ ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆಯುವ ಅನಿವಾರ್ಯತೆ ಅವರಿಗಿಲ್ಲ. ಅವರು ಸದ್ಯ ಆಟದಿಂದ ಬಿಡುವು ಪಡೆದಿದ್ದು, ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡಲಿದ್ದಾರೆ’ ಎಂದಿದ್ದಾರೆ.

ನಿರ್ಣಾಯಕ ಟಿ20 ಪಂದ್ಯಕ್ಕೆ ವಾಂಖೇಡೆ ಮೈದಾನ ರೆಡಿ

ಧೋನಿ ತಂಡಕ್ಕೆ ವಾಪಸಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಶಾಸ್ತ್ರಿ, ‘ಅವರಿಗಿರುವ ಅನುಭವ ಆಧಾರದಲ್ಲಿ ಸಹಜವಾಗಿಯೇ ಆಯ್ಕೆಗೆ ಪರಿಗಣಿಸಲಾಗುತ್ತದೆ. ಐಪಿಎಲ್‌ ನಂತರ ಅವರು ಭಾರತ ತಂಡದಲ್ಲಿ ಮುಂದುವರಿಯಲು ಧೋನಿ ಇಚ್ಛಿಸಿದರೆ ಆ ನಿರ್ಧಾರವನ್ನು ಯಾರು ಪ್ರಶ್ನಿಸಬಾರದು’ ಎಂದಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ಲಭ್ಯತೆ ಬಗ್ಗೆ ಮಾತನಾಡಿದ್ದ ಧೋನಿ, ‘ಜನವರಿವರೆಗೆ ಏನೂ ಕೇಳಬೇಡಿ’ ಎಂದಷ್ಟೇ ಹೇಳಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌ ಕೆಲ ತಿಂಗಳುಗಳ ಹಿಂದೆಯೇ ಧೋನಿ ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ರಿಷಭ್‌ ಪಂತ್‌ರನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸ್ಥಾನಕ್ಕಾಗಿ ಸಿದ್ಧಗೊಳಿಸಲಾಗುತ್ತಿದೆ ಎಂದಿದ್ದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.