ಓವಲ್ ಟೆಸ್ಟ್‌ನಲ್ಲಿ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದರು. ಒಟ್ಟು 9 ವಿಕೆಟ್ ಪಡೆದ ಸಿರಾಜ್, ಕೊನೆಯ ದಿನದ ರೋಚಕ ಪಂದ್ಯದಲ್ಲಿ ಭಾರತಕ್ಕೆ ಜಯ ತಂದುಕೊಟ್ಟರು. ಸರಣಿಯಲ್ಲಿ ಒಟ್ಟು 23 ವಿಕೆಟ್‌ಗಳೊಂದಿಗೆ ಸಿರಾಜ್ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಓವಲ್: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ ನಲ್ಲಿ ಪಂದ್ಯಶ್ರೇಷ್ಠ ಆಟಗಾರನಾಗಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹೊರಹೊಮ್ಮಿದ್ದಾರೆ. ಓವಲ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಐದು ಮತ್ತು ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದ ಸಿರಾಜ್, ಕೊನೆಯ ದಿನ ಭಾರತವನ್ನು ಜಯದತ್ತ ಕೊಂಡೊಯ್ದರು. ಸರಣಿಯ ಎಲ್ಲಾ ಐದು ಟೆಸ್ಟ್ ಗಳಲ್ಲೂ ಮಿಂಚಿದ ಸಿರಾಜ್ ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದರು.

ಸರಣಿಯಲ್ಲಿ ಒಟ್ಟು 185.3 ಓವರ್‌ಗಳನ್ನು ಎಸೆದ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ 23 ವಿಕೆಟ್ ಗಳೊಂದಿಗೆ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ನಾಲ್ಕನೇ ದಿನ ಹ್ಯಾರಿ ಬ್ರೂಕ್ ನ ನಿರ್ಣಾಯಕ ಕ್ಯಾಚ್ ಅನ್ನು ಹಿಡಿಯುವಲ್ಲಿ ಸಿರಾಜ್ ಮಾಡಿದ ತಪ್ಪು ಭಾರತದ ಗೆಲುವಿಗೆ ಮಾರಕವಾಗಬಹುದಿತ್ತು ಎಂದು ಭಾವಿಸಲಾಗಿತ್ತು. ಆದರೆ ಕೊನೆಯ ದಿನ ಹೃದಯದಿಂದ ಬೌಲಿಂಗ್ ಮಾಡಿದ ಸಿರಾಜ್ ಭಾರತವನ್ನು ಅವಿಸ್ಮರಣೀಯ ಜಯದತ್ತ ಕೊಂಡೊಯ್ದರು.

Scroll to load tweet…

ಕೊನೆಯ ದಿನ ಇಂಗ್ಲೆಂಡ್‌ಗೆ ಗೆಲ್ಲಲು ಕೇವಲ 35 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಮಾರಕ ದಾಳಿ ಸಂಘಟಿಸಿದ ಸಿರಾಜ್ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಭಾರತ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಅಮೋಘ ದಾಳಿ ನಡೆಸಿದ ಮೊಹಮ್ಮದ್ ಸಿರಾಜ್, ಓವಲ್ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನ ರೂವಾರಿ ಎನಿಸಿಕೊಂಡರು.

ಕ್ಯಾಚ್ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದ ಸಿರಾಜ್: ಓವಲ್ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಮೊಹಮ್ಮದ್ ಸಿರಾಜ್ ಬೌಂಡರಿ ಲೈನ್‌ನಲ್ಲಿ ಹ್ಯಾರಿ ಬ್ರೂಕ್ ಕ್ಯಾಚ್ ಕೈಚೆಲ್ಲುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಈ ಅವಕಾಶವನ್ನು ಬಳಸಿಕೊಂಡ ಹ್ಯಾರಿ ಬ್ರೂಕ್ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ನಡುಕ ಹುಟ್ಟಿಸಿದ್ದರು. ಆದರೆ ಕೊನೆಯ ದಿನ ಸಿರಾಜ್ ಬೆಂಕಿಯುಂಡೆಯಂತಹ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗಿಲ್ ಮತ್ತು ಬ್ರೂಕ್‌ಗೆ ಒಲಿದ ಪ್ಲೇಯರ್ ಆಫ್‌ ದಿ ಸೀರಿಸ್

ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡದ ಪ್ಲೇಯರ್ ಆಫ್‌ ದಿ ಸೀರಿಸ್ ಆಗಿ ಹೊರಹೊಮ್ಮಿದರೆ, ನಾಯಕ ಶುಭಮನ್ ಗಿಲ್ ಭಾರತ ತಂಡದ ಪ್ಲೇಯರ್ ಆಫ್ ದಿ ಸೀರಿಸ್ ಆಯ್ಕೆಯಾದರು. ಐದು ಟೆಸ್ಟ್ ಗಳಿಂದ ನಾಲ್ಕು ಶತಕಗಳನ್ನು ಒಳಗೊಂಡಂತೆ 754 ರನ್ ಗಳಿಸುವ ಮೂಲಕ ಶುಭ್‌ಮನ್ ಗಿಲ್ ಭಾರತದ ಸರಣಿಶ್ರೇಷ್ಠ ಆಟಗಾರ ಎನಿಸಿಕೊಂಡರು. ಬ್ರೂಕ್ ಐದು ಟೆಸ್ಟ್ ಗಳಿಂದ 481 ರನ್ ಗಳಿಸಿದರು. ಐದು ಟೆಸ್ಟ್ ಗಳಿಂದ 537 ರನ್ ಗಳಿಸಿದ ಜೋ ರೂಟ್ ಸರಣಿಯ ರನ್ ಪಟ್ಟಿಯಲ್ಲಿ ಗಿಲ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.

Scroll to load tweet…

ಓವಲ್ ನಲ್ಲಿ ಕೊನೆಯ ದಿನ ಜಯಕ್ಕೆ ಇಂಗ್ಲೆಂಡಿಗೆ 35 ರನ್ ಗಳು ಬೇಕಾಗಿದ್ದವು. ವಿಕೆಟ್ ಕೀಪರ್ ಜೇಮೀ ಸ್ಮಿತ್ ಮತ್ತು ಜೇಮಿ ಓವರ್ಟನ್ ಕ್ರೀಸ್ ನಲ್ಲಿದ್ದರು. ಕೊನೆಯ ದಿನದ ಮೊದಲ ಎರಡು ಎಸೆತಗಳನ್ನು ಓವರ್ಟನ್ ಬೌಂಡರಿಗೆ ಬಾರಿಸಿದಾಗ ಭಾರತ ಪಂದ್ಯವನ್ನು ಕೈಚೆಲ್ಲಿದೆ ಎಂದು ಭಾವಿಸಲಾಗಿತ್ತು. ಆದರೆ ಜೇಮಿ ಸ್ಮಿತ್ ರನ್ನು ಔಟ್ ಮಾಡಿದ ಸಿರಾಜ್ ಇಂಗ್ಲೆಂಡ್ ಅನ್ನು ಒತ್ತಡಕ್ಕೆ ಸಿಲುಕಿಸಿದರು. ನಂತರ ಓವರ್ಟನ್ ರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದ ಸಿರಾಜ್, ಜೋಶ್ ಟಂಗ್ ರನ್ನು ಬೌಲ್ಡ್ ಮಾಡಿದರು. ಹೋರಾಡಿದ ಗಸ್ ಅಟ್ಕಿನ್ಸನ್ ರನ್ನು ಸುಂದರವಾದ ಯಾರ್ಕರ್ ನಲ್ಲಿ ಬೌಲ್ಡ್ ಮಾಡಿ ಸಿರಾಜ್ ಭಾರತಕ್ಕೆ ಆರು ರನ್ ಗಳಿಂದ ರೋಚಕ ಜಯ ತಂದುಕೊಟ್ಟರು.