ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 6 ರನ್‌ಗಳ ರೋಚಕ ಜಯ ಸಾಧಿಸಿದೆ. 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಮೊಹಮ್ಮದ್ ಸಿರಾಜ್ 5 ವಿಕೆಟ್ ಪಡೆದು ಗೆಲುವಿನ ರೂವಾರಿ ಎನಿಸಿಕೊಂಡರು.
ಲಂಡನ್: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಓವಲ್ ಟೆಸ್ಟ್ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಆರು ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲದೊಂದಿಗೆ ತನ್ನ ಅಭಿಯಾನ ಮುಗಿಸಿದೆ. 5 ವಿಕೆಟ್ ಕಬಳಿಸಿದ ವೇಗಿ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾ ಗೆಲುವಿನ ರೂವಾರಿ ಎನಿಸಿದರು.
ಗೆಲ್ಲಲು 374 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ಗೆಲ್ಲಲು ಕೇವಲ 35 ರನ್ ಅಗತ್ಯವಿತ್ತು. ವಿಕೆಟ್ ಕೀಪರ್ ಬ್ಯಾಟರ್ ಜೇಮೀ ಸ್ಮಿತ್ ಹಾಗೂ ಜೇಮಿ ಓವರ್‌ಟನ್ ಕ್ರೀಸ್‌ನಲ್ಲಿದ್ದರು. ಐದನೇ ದಿನದಾಟದ ಮೊದಲ ಓವರ್‌ನ ಮೊದಲೆರಡು ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಮರು ಓವರ್‌ನಲ್ಲೇ ವೇಗಿ ಮೊಹಮ್ಮದ್ ಸಿರಾಜ್, ಜೇಮೀ ಸ್ಮಿತ್(2) ಅವರನ್ನು ಬಲಿ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಶಾಕ್ ನೀಡಿದರು. ಇದಾದ ಕೆಲ ಹೊತ್ತಿನಲ್ಲೇ ಅಮೂಲ್ಯ 9 ರನ್ ಬಾರಿಸಿದ್ದ ಜೇಮಿ ಓವರ್‌ಟನ್ ಅವರನ್ನು ಬಲಿಪಡೆಯುವ ಮೂಲಕ ಆತಿಥೇಯರಿಗೆ ಡಬಲ್ ಶಾಕ್ ನೀಡಿದರು.
ಇಂಗ್ಲೆಂಡ್ ಗೆಲ್ಲಲು ಕೇವಲ 18 ರನ್ ಬೇಕಿದ್ದಾಗ ವೇಗಿ ಪ್ರಸಿದ್ದ್ ಕೃಷ್ಣ ಜೋಶ್ ಟಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಇನ್ನು ಗಸ್ ಅಟ್ಕಿನ್‌ಸನ್ 17 ರನ್ ಗಳಿಸಿ ಸಿರಾಜ್‌ಗೆ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಸಿರಾಜ್ ಗೆಲುವಿನ ಹೀರೋ: ಇನ್ನು ಕೊನೆಯ ದಿನದಾಟದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ ನಾಲ್ಕು ವಿಕೆಟ್ ಅಗತ್ಯವಿದ್ದವು. ಈ ಪೈಕಿ ಸಿರಾಜ್ ಇಂದು ಮೂರು ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಮೊಹಮ್ಮದ್ ಸಿರಾಜ್ ಮಹತ್ವದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 104 ರನ್ ನೀಡಿ 5 ವಿಕೆಟ್ ಕಬಳಿಸಿ ಪಂದ್ಯದ ಗೆಲುವಿನ ರೂವಾರಿ ಎನಿಸಿದರು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ 4 ವಿಕೆಟ್ ಕಬಳಿಸಿದ್ದರು. ಈ ಮೂಲಕ ಓವಲ್ ಟೆಸ್ಟ್‌ನಲ್ಲಿ ಸಿರಾಜ್ 9 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.
ಆಂಡರ್‌ಸನ್-ತೆಂಡುಲ್ಕರ್ ಸರಣಿ ಸಮಬಲ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಅವರಿಲ್ಲದೇ ಶುಭ್‌ಮನ್ ಗಿಲ್ ನೇತೃತ್ವದ ಯುವ ಆಟಗಾರರನ್ನೊಳಗೊಂಡ ತಂಡ ಇಂಗ್ಲೆಂಡ್‌ನಲ್ಲಿ ದಿಟ್ಟ ಪ್ರದರ್ಶನ ತೋರುವ ಮೂಲಕ ಇದೀಗ 5 ಪಂದ್ಯಗಳ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯಲ್ಲಿ 2-2 ಸಮಬಲದೊಂದಿಗೆ ಕೊನೆಯಾಗಿದೆ. ಹೆಡಿಂಗ್ಲೆ ಹಾಗೂ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದರೆ, ಬರ್ಮಿಂಗ್‌ಹ್ಯಾಮ್ ಹಾಗೂ ದಿ ಓವಲ್ ಮೈದಾನದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಇನ್ನು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಯಿತು.