ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ಗುವಾಹಟಿಯಿಂದ ಹೈದರಾಬಾದ್‌ಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ನಾಲ್ಕು ಗಂಟೆಗಳ ಕಾಲ ವಿಳಂಬವಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ಲೈನ್ಸ್‌ನಿಂದ ಸರಿಯಾದ ಮಾಹಿತಿ ಸಿಗದ ಕಾರಣ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಗುವಾಹಟಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸೇವೆಯ ಬಗ್ಗೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುವಾಹಟಿಯಿಂದ ಹೈದರಾಬಾದ್‌ಗೆ ಹೋಗಬೇಕಿದ್ದ ವಿಮಾನ ತಡವಾಗಿದ್ದರಿಂದ ಸಿರಾಜ್‌ಗೆ ತೊಂದರೆಯಾಗಿದೆ. ಸಂಜೆ 7.25ಕ್ಕೆ ಹೊರಡಬೇಕಿದ್ದ ವಿಮಾನ ತಡವಾಗಿ ಬಂದಿದೆ ಎಂದು ಸಿರಾಜ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಚಾರಿಸಿದರೂ ಏರ್‌ಲೈನ್ಸ್‌ನವರು ಸರಿಯಾದ ವಿವರಣೆ ನೀಡದೆ, ಪ್ರಯಾಣಿಕರನ್ನು ನಾಲ್ಕು ಗಂಟೆಗಳ ಕಾಲ ಕಾಯುವಂತೆ ಮಾಡಿದರು ಎಂದು ಸಿರಾಜ್ ಹೇಳಿದ್ದಾರೆ.

ಏರ್ ಇಂಡಿಯಾ ಮೇಲೆ ನಿರಾಸೆ ಹೊರಹಾಕಿದ ಮೊಹಮ್ಮದ್ ಸಿರಾಜ್

ಸಿರಾಜ್ ಅವರ ಪೋಸ್ಟ್ ಹೀಗಿದೆ ''ಗುವಾಹಟಿಯಿಂದ ಹೈದರಾಬಾದ್‌ಗೆ ಏರ್ ಇಂಡಿಯಾ ವಿಮಾನ ಸಂಖ್ಯೆ IX 2884 ಸಂಜೆ 7:25ಕ್ಕೆ ಹೊರಡಬೇಕಿತ್ತು. ಆದರೆ ಏರ್‌ಲೈನ್‌ನಿಂದ ಯಾವುದೇ ಮಾಹಿತಿ ಬಂದಿಲ್ಲ. ಅವರು ಸರಿಯಾದ ಕಾರಣ ನೀಡದೆ ವಿಮಾನವನ್ನು ವಿಳಂಬಗೊಳಿಸಿದರು. ಇದು ತುಂಬಾ ನಿರಾಶಾದಾಯಕವಾಗಿದೆ. ವಿಮಾನ 4 ಗಂಟೆ ತಡವಾಯಿತು, ಆದರೂ ನಮಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಇದು ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ.'' ಎಂದು ಸಿರಾಜ್ ಬರೆದುಕೊಂಡಿದ್ದಾರೆ.

Scroll to load tweet…

ಈ ಘಟನೆಯ ನಂತರ ಏರ್ ಇಂಡಿಯಾ ಕ್ಷಮೆಯಾಚಿಸಿದೆ. ಅನಿರೀಕ್ಷಿತ ಕಾರ್ಯಾಚರಣೆಯ ಕಾರಣಗಳಿಂದ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಅಲ್ಲದೆ, ವಿಮಾನ ನಿಲ್ದಾಣದ ಸಿಬ್ಬಂದಿ ಎಲ್ಲ ಪ್ರಯಾಣಿಕರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಎಂದು ಏರ್ ಇಂಡಿಯಾ ಹೇಳಿದೆ. ''ಈ ಪರಿಸ್ಥಿತಿ ಎಷ್ಟು ಕಷ್ಟಕರವೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ,'' ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 408 ರನ್‌ಗಳಿಂದ ಸೋತ ನಂತರ ಸಿರಾಜ್ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದರು.

Scroll to load tweet…

ತವರಿನಲ್ಲಿ ಹರಿಣಗಳ ಎದುರು ಟೆಸ್ಟ್ ಸರಣಿ ಸೋತ ಭಾರತ

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-2 ಅಂತರದಿಂದ ಸೋತಿದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಸೋತ ನಂತರ ಇದು ಸತತ ಎರಡನೇ ತವರು ಕ್ರಿಕೆಟ್ ಸರಣಿ ಸೋಲಾಗಿದೆ. ರನ್‌ಗಳ ಅಂತರದಲ್ಲಿ ಇದು ಭಾರತದ ಅತಿದೊಡ್ಡ ಟೆಸ್ಟ್ ಸೋಲು ಕೂಡ ಆಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ 30 ರನ್‌ಗಳಿಂದ ಸೋತಿತ್ತು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಮುಕ್ತಾಯವಾದ ಬೆನ್ನಲ್ಲೇ ನವೆಂಬರ್ 30ರಿಂದ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಈ ಸರಣಿಗೆ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದೆ. ಇದೇ ಕಾರಣಕ್ಕೆ ಸಿರಾಜ್ ಗುವಾಹಟಿಯಿಂದ ತವರಿಗೆ ವಾಪಾಸ್ಸಾಗಿದ್ದಾರೆ.