* ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟ* ಬೌಲಿಂಗ್ ವಿಭಾಗದಲ್ಲಿ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ ಮೊಹಮ್ಮದ್ ಸಿರಾಜ್* ಬ್ಯಾಟರ್‌ ವಿಭಾಗದಲ್ಲಿ ಎರಡು ಸ್ಥಾನ ಜಿಗಿತ ಕಂಡ ಶುಭ್‌ಮನ್‌ ಗಿಲ್‌

ದುಬೈ(ಜ.25): ಟೀಂ ಇಂಡಿಯಾ ಮಾರಕ ವೇಗಿ ಮೊಹಮ್ಮದ್‌ ಸಿರಾಜ್‌, ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ಇದೇ ಮೊದಲ ಬಾರಿಗೆ ನಂಬರ್ 01 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಜೋಶ್ ಹೇಜಲ್‌ವುಡ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. 

ಶ್ರೀಲಂಕಾ ಎದುರಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ 9 ವಿಕೆಟ್‌ ಕಬಳಿಸಿದ್ದರು. ಇನ್ನು ಕಿವೀಸ್ ಎದುರಿನ ಮೊದಲ ಪಂದ್ಯದಲ್ಲೇ ಸಿರಾಜ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಮೊಹಮ್ಮದ್ ಸಿರಾಜ್ ಸದ್ಯ 729 ರೇಟಿಂಗ್‌ ಅಂಕಗಳನ್ನು ಪಡೆಯುವ ಮೂಲಕ ನಂ.1 ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಜಸ್ಪ್ರೀತ್ ಬುಮ್ರಾ ಬಳಿಕ ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಎರಡನೇ ವೇಗಿ ಎನ್ನುವ ಹಿರಿಮೆಗೆ ಮೊಹಮ್ಮದ್ ಸಿರಾಜ್ ಪಾತ್ರರಾಗಿದ್ದಾರೆ. ಬುಮ್ರಾ, ಕಳೆದ ವರ್ಷದ ಜುಲೈನಲ್ಲಿ ಇಂಗ್ಲೆಂಡ್‌ ಎದುರು ಅದ್ಭುತ ಪ್ರದರ್ಶನ ತೋರುವ ಮೂಲಕ ನಂ.1 ಸ್ಥಾನಕ್ಕೇರಿದ್ದರು.

SA20 ಟೂರ್ನಿಯಲ್ಲಿ ಚೊಚ್ಚಲ ಶತಕ ಚಚ್ಚಿದ ಫಾಫ್ ಡು ಪ್ಲೆಸಿಸ್..!

28 ವರ್ಷದ ಹೈದರಾಬಾದ್ ಮೂಲದ ವೇಗಿ ಕಳೆದೊಂದು ವರ್ಷದಲ್ಲಿ ಟೀಂ ಇಂಡಿಯಾ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ಕಳೆದ ಫೆಬ್ರವರಿಯಲ್ಲಿ ಭಾರತ ಏಕದಿನ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದ ಸಿರಾಜ್, ಕೇವಲ ಒಂದು ವರ್ಷದೊಳಗಾಗಿ ಬೌಲರ್‌ಗಳ ಏಕದಿನ ರ‍್ಯಾಂಕಿಂಗ್‌‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ಬಳಿಕ ಸಿರಾಜ್‌ 21 ಏಕದಿನ ಪಂದ್ಯಗಳನ್ನಾಡಿ 37 ವಿಕೆಟ್ ಕಬಳಿಸಿದ್ದಾರೆ. 

ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ಬೌಲಿಂಗ್‌ ವಿಭಾಗದಲ್ಲಿ ಟಾಪ್‌ 5 ಸ್ಥಾನ ಪಡೆದ ಆಟಗಾರರ ವಿವರ:

1. ಮೊಹಮ್ಮದ್ ಸಿರಾಜ್‌(ಭಾರತ) - 729 ರೇಟಿಂಗ್ ಅಂಕ
2. ಜೋಶ್ ಹೇಜಲ್‌ವುಡ್(ಆಸ್ಟ್ರೇಲಿಯಾ) - 727 ರೇಟಿಂಗ್ ಅಂಕ
3. ಟ್ರೆಂಟ್ ಬೌಲ್ಟ್‌(ನ್ಯೂಜಿಲೆಂಡ್) - 708 ರೇಟಿಂಗ್ ಅಂಕ
4. ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ) - 665 ರೇಟಿಂಗ್ ಅಂಕ
5. ರಶೀದ್ ಖಾನ್(ಆಫ್ಘಾನಿಸ್ತಾನ) - 659 ರೇಟಿಂಗ್ ಅಂಕ

ಇನ್ನು ಬ್ಯಾಟರ್‌ಗಳ ವಿಭಾಗದಲ್ಲಿ ಟಾಪ್‌ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪಾಕಿಸ್ತಾನ ನಾಯಕ ಬಾಬರ್ ಅಜಂ 887 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡರ್‌ ಡುಸೇನ್‌, ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್‌ ಹಾಗೂ ಇಮಾಮ್ ಉಲ್‌ ಹಕ್‌ ಕ್ರಮವಾಗಿ ಮೊದಲ ಐದು ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇನ್ನು ಕಿವೀಸ್ ಎದುರಿನ ಸರಣಿಯಲ್ಲಿ ಒಂದು ದ್ವಿಶತಕ ಹಾಗೂ ಒಂದು ಶತಕ ಸಿಡಿಸಿದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್‌ ಗಿಲ್‌ ಎರಡು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 727 ರೇಟಿಂಗ್ ಅಂಕಗಳೊಂದಿಗೆ ಒಂದು ಸ್ಥಾನ ಏರಿಕೆ ಕಂಡು 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಸ್ಟೀವ್ ಸ್ಮಿತ್ 8ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2 ಸ್ಥಾನ ಏರಿಕೆ ಕಂಡು 9ನೇ ಸ್ಥಾನಕ್ಕೆ ಲಗ್ಗೆಯಿಟ್ಟರೇ, ಇಂಗ್ಲೆಂಡ್‌ ಬ್ಯಾಟರ್ ಜಾನಿ ಬೇರ್‌ಸ್ಟೋವ್‌ ಒಂದು ಸ್ಥಾನ ಕುಸಿದು 10ನೇ ಸ್ಥಾನಕ್ಕೆ ತಲುಪಿದ್ದಾರೆ.