SA20 ಟೂರ್ನಿಯಲ್ಲಿ ಚೊಚ್ಚಲ ಶತಕ ಚಚ್ಚಿದ ಫಾಫ್ ಡು ಪ್ಲೆಸಿಸ್..!
SA20 ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್ ಫಾಫ್ ಡು ಪ್ಲೆಸಿಸ್
ಡರ್ಬನ್ ಸೂಪರ್ ಜೈಂಟ್ಸ್ ಎದುರು ಫಾಫ್ ಪಡೆಗೆ 8 ವಿಕೆಟ್‌ಗಳ ಜಯ
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಲಿರುವ ಫಾಫ್ ಡು ಪ್ಲೆಸಿಸ್
ಜೋಹಾನ್ಸ್‌ಬರ್ಗ್(ಜ.25): ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬಾರಿಸಿದ ಚೊಚ್ಚಲ ಶತಕದ ನೆರವಿನಿಂದ ಡರ್ಬನ್ ಸೂಪರ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದೆ. SA20 ಟೂರ್ನಿಯಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಪಾತ್ರರಾಗಿದ್ದಾರೆ.
ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಫಾಫ್ ನೇತೃತ್ವದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಡರ್ಬನ್ ಸೂಪರ್ ಜೈಂಟ್ಸ್ ನೀಡಿದ್ದ 179 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ರೀಜಾ ಹೆಂಡ್ರಿಕ್ಸ್ 157 ರನ್‌ಗಳ ಭರ್ಜರಿ ಜತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ರೀಜಾ ಹೆಂಡ್ರಿಕ್ಸ್ 46 ಎಸೆತಗಳಲ್ಲಿ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಫಾಫ್ ಡು ಪ್ಲೆಸಿಸ್, ಕೇವಲ 58 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 113 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಈ ಗೆಲುವಿನೊಂದಿಗೆ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವು MI ಕೇಪ್‌ಟೌನ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಇನ್ನು ಈ ಸೋಲಿನೊಂದಿಗೆ ಡರ್ಬನ್ ಸೂಪರ್ ಜೈಂಟ್ಸ್ ತಂಡದ ಪ್ಲೇ ಆಫ್‌ಗೇರುವ ಅವಕಾಶಕ್ಕೆ ಮತ್ತೊಮ್ಮೆ ಬಲವಾದ ಪೆಟ್ಟುಬಿದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ.
SA20 League: ಡೆಲ್ಲಿ ಪರ ವಿಲ್ ಜೇಕ್ಸ್ ಗುಡುಗು, ಆರ್‌ಸಿಬಿ ಅಭಿಮಾನಿಗಳಲ್ಲಿ ಪುಳಕ..!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಇದುವರೆಗೂ ಶತಕ ಸಿಡಿಸಿಲ್ಲ, ಆದರೆ ಇದೀಗ ಚೊಚ್ಚಲ ಆವೃತ್ತಿಯ SA20 ಟೂರ್ನಿಯ ಇನಿಂಗ್ಸ್‌ವೊಂದರಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫಾಫ್ ಡು ಪ್ಲೆಸಿಸ್ ಭರ್ಜರಿ ಶತಕ ಬಾರಿಸಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳಯದಲ್ಲಿ ಹೊಸ ಹುರುಪನ್ನುಂಟು ಮಾಡಿದೆ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ನಾಯಕನಾಗಿ ಮುನ್ನಡೆಸಲಿರುವ ಫಾಫ್, ಮೇಲೆ ಬೆಂಗಳೂರು ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಅಗ್ರಸ್ಥಾನದಲ್ಲೇ ಮುಂದುವರೆದ ಪ್ರಿಟೋರಿಯಾ ಕ್ಯಾಪಿಟಲ್ಸ್: ಚೊಚ್ಚಲ ಆವೃತ್ತಿಯ SA20 ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಆಡಿದ 7 ಪಂದ್ಯಗಳಲ್ಲಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 23 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೇ, ಸರ್ನ್‌ರೈಸರ್ಸ್ ಈಸ್ಟರ್ನ್ ಕೇಪ್, ಪಾರ್ಲ್ ರಾಯಲ್ಸ್ ಹಾಗೂ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಕ್ರಮವಾಗಿ 4 ಸ್ಥಾನಗಳಲ್ಲಿ ಮುಂದುವರೆದಿವೆ.