Asianet Suvarna News Asianet Suvarna News

ಹರ್ಮನ್‌ಪ್ರೀತ್, ಮಿಥಾಲಿ, ಸ್ಮೃತಿ ಆಕರ್ಷಕ ಫಿಫ್ಟಿ, ಕೊನೆಯ ಏಕದಿನ ಪಂದ್ಯ ಗೆದ್ದ ಮಹಿಳಾ ಟೀಂ ಇಂಡಿಯಾ..!

* ನ್ಯೂಜಿಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆಗೆ ಜಯ

* ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಗೆಲುವಿನ ಹಳಿಗೆ ಮರಳಿದ ಭಾರತ

* ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತೀಯ ವನಿತೆಯರು

Mithali Raj Led Indian Womens Cricket Team Thrash New Zealand in fifth ODI kvn
Author
Bengaluru, First Published Feb 24, 2022, 4:06 PM IST

ಕ್ವೀನ್ಸ್‌ಟೌನ್(ಫೆ.24): ಆತಿಥೇಯ ನ್ಯೂಜಿಲೆಂಡ್ ಎದುರು ಸತತ ನಾಲ್ಕು ಏಕದಿನ ಪಂದ್ಯಗಳನ್ನು ಸೋತು ವೈಟ್‌ವಾಷ್ ಭೀತಿಗೆ ಸಿಲುಕಿದ್ದ ಮಿಥಾಲಿ ರಾಜ್‌ (Mithali Raj) ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು (Indian Women's Cricket Team) ಕೊನೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur), ಸ್ಮೃತಿ ಮಂದನಾ (Smriti Mandhana) ಹಾಗೂ ಮಿಥಾಲಿ ರಾಜ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ಮಹಿಳಾ ತಂಡವು 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡದ ಬೌಲರ್‌ಗಳು ಕೊನೆಯ ಪಂದ್ಯದಲ್ಲಿ ಲಯ ಕಂಡುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವನ್ನು 251 ರನ್‌ಗಳಿಗೆ ನಿಯಂತ್ರಿಸುವಲ್ಲಿ ಭಾರತೀಯ ವನಿತೆಯರು ಯಶಸ್ವಿಯಾದರು.  ಈ ಗುರಿ ಬೆನ್ನತ್ತಿದ ಮಿಥಾಲಿ ರಾಜ್ ಪಡೆ ಕೇವಲ 4 ವಿಕೆಟ್‌ ಕಳೆದುಕೊಂಡು ಇನ್ನೂ 24 ಎಸೆತಗಳು ಭಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಭಾರತ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ 71 ರನ್ ಬಾರಿಸಿದರೆ, ಹರ್ಮನ್‌ಪ್ರೀತ್ ಕೌರ್ 63 ರನ್ ಚಚ್ಚಿದರು. ಇನ್ನು ನಾಯಕಿಯ ಆಟ ಪ್ರದರ್ಶಿಸಿದ ಮಿಥಾಲಿ ರಾಜ್ ಅಜೇಯ 57 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. 

ನ್ಯೂಜಿಲೆಂಡ್ ಪ್ರವಾಸದಲ್ಲಿನ ಏಕೈಕ ಟಿ20 ಪಂದ್ಯದಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು, ಇದಾದ ಬಳಿಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸತತವಾಗಿ 4 ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿತ್ತು. ಮಾರ್ಚ್‌ ತಿಂಗಳಿನಲ್ಲಿ ನ್ಯೂಜಿಲೆಂಡ್‌ನಲ್ಲೇ ಆರಂಭವಾಗಲಿರುವ ಏಕದಿನ ಸರಣಿಗೂ ಮುನ್ನ ಪೂರ್ವಭಾವಿ ಸಿದ್ದತೆಗಾಗಿ ಕಿವೀಸ್‌ ನಾಡಿಗೆ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದರೆ ಕೊನೆಯ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು. ಅದರಲ್ಲೂ ಭಾರತೀಯ ಸ್ಪಿನ್ನರ್‌ಗಳು ಉರುಳಿದ 9 ವಿಕೆಟ್‌ಗಳ ಪೈಕಿ 7 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ (Rajeshwari Gayakwad), ದೀಪ್ತಿ ಶರ್ಮಾ ಹಾಗೂ ಸ್ನೆಹ್ ರಾಣಾ ತಲಾ 2 ವಿಕೆಟ್‌ ಪಡೆದರೆ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಒಂದು ವಿಕೆಟ್ ಪಡೆದರು. ಇನ್ನು ವೇಗದ ಬೌಲರ್ ಮೇಘನಾ ಸಿಂಗ್ ತನ್ನ ಖಾತೆಗೆ ಒಂದು ವಿಕೆಟ್ ಸೇರಿಸಿಕೊಂಡರು.

IPL 2022: ಮುಂಬೈನಲ್ಲಿ 55 ಪಂದ್ಯಗಳು, ಪುಣೆಯಲ್ಲಿ 15 ಪಂದ್ಯಗಳು..?

ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ, ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕೈಕ ಟಿ20 ಹಾಗೂ ಮೊದಲು ಮೂರು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಇದೀಗ ಕೊನೆಯ ಏಕದಿನ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಮಂಧನಾ 84 ಎಸೆಗಳನ್ನು ಎದುರಿಸಿ 9 ಬೌಂಡರಿ ಸಹಿತ 71 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಕಳೆದ ಕೆಲವು ಪಂದ್ಯಗಳಿಂದ ನಮ್ಮ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ನಾವು ಗೆಲುವಿನ ಲಯಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ದೊಡ್ಡ ಟೂರ್ನಿಗೂ ಮುನ್ನ ಸರಿಯಾದ ಅಭ್ಯಾಸ ನಡೆಸುವುದು ತುಂಬಾ ಒಳ್ಳೆಯದ್ದು. ದುರಾದೃಷ್ಟವಶಾತ್ ಒಮಿಕ್ರಾನ್‌ ಭೀತಿಯಿಂದಾಗಿ ನಾವು ಭಾರತದಲ್ಲಿ ಕ್ಯಾಂಪ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಈ ವಿಶ್ವಕಪ್ ಟೂರ್ನಿ ಬಳಿಕ ನಾನು ಪಡೆಯಲಿದ್ದು, ಮುಂಬರುವ ದಿನಗಳಲ್ಲಿ ಭಾರತ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಮಿಥಾಲಿ ರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios