ನವದೆಹಲಿ(ಡಿ.07): 2022ರಲ್ಲಿ ಅಮೆರಿಕದಲ್ಲಿ ಆರಂಭಗೊಳ್ಳಲಿರುವ ಮೇಜರ್‌ ಕ್ರಿಕೆಟ್‌ ಲೀಗ್‌ (ಎಂಎಲ್‌ಸಿ) ಟಿ20 ಟೂರ್ನಿಯಲ್ಲಿ ವಿಶ್ವದ ಅಗ್ರ ಕಂಪನಿಗಳಾದ ಮೈಕ್ರೋಸಾಫ್ಟ್‌ ಹಾಗೂ ಅಡೋಬಿ ಐಎನ್‌ಸಿಯ ಸಿಇಒಗಳು ತಂಡ ಖರೀದಿಸಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಮೈಕ್ರೋಸಾಫ್ಟ್‌ ಸಿಇಒ, ಭಾರತೀಯ ಮೂಲದ ಸತ್ಯ ನಾದೆಲ್ಲಾ ಸೀಯಾಟಲ್‌ ಮೂಲದ ತಂಡವನ್ನು ಖರೀದಿಸಲು ಇಚ್ಛಿಸಿದ್ದರೆ, ಅಡೋಬಿ ಕಂಪನಿಯ ಸಿಇಒ ಶಂತನು ನಾರಾಯಣನ್‌ ಕ್ಯಾಲಿಫೋರ್ನಿಯಾ ಮೂಲದ ತಂಡದ ಮಾಲೀಕರಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಶಾರುಖ್‌ ಖಾನ್‌ ಹಾಗೂ ಜೂಹಿ ಚಾವ್ಲಾ ಮಾಲಿಕತ್ವ ಕೋಲ್ಕತಾ ನೈಟ್‌ರೈಡ​ರ್‍ಸ್, ಲಾಸ್‌ ಏಂಜಲೀಸ್‌ ಮೂಲದ ತಂಡವನ್ನು ಖರೀದಿಸುವುದಾಗಿ ಲೀಗ್‌ ಆಯೋಜಕರು ಘೋಷಿಸಿದ್ದಾರೆ.

ಇನ್ನು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಕೂಡಾ ನೂತನ ಟಿ20 ಲೀಗ್‌ನಲ್ಲಿ ತಂಡ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು  ವರದಿಯಾಗಿದೆ. 42 ವರ್ಷದ ಸಿಇಒ ವಿಜಯ್ ಶೇಖರ್ ಶರ್ಮಾ ಇತ್ತೀಚೆಗಷ್ಟೇ ಬಿಸಿಸಿಐ ಟೈಟಲ್‌ ಪ್ರಾಯೋಜಕತ್ವವನ್ನು ಮುಂದುವರೆಸಿಕೊಂಡು ಹೋಗುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಹೀಗಾಗಿ 2023ರವರೆಗೆ ಟೀಂ ಇಂಡಿಯಾ ಹಾಗೂ ದೇಸಿ ಕ್ರಿಕೆಟ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವದ ಹಕ್ಕನ್ನು ಪೇಟಿಎಂ ಪಡೆದುಕೊಂಡಿದೆ.

ಯುಎಸ್‌ ಟಿ20 ಲೀಗ್‌: ತಂಡ ಖರೀದಿಸಿದ ಶಾರುಕ್‌ ಖಾನ್

ಅಮೆರಿಕ ಕ್ರಿಕೆಟ್‌ ಎಂಟರ್‌ಪ್ರೈಸಸ್(ACE) ಏರ್‌ಹಾಗ್ಸ್‌ ಕ್ರೀಡಾಂಗಣವನ್ನು 15 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದು, 6000 ಪ್ರೇಕ್ಷಕರು ವೀಕ್ಷಿಸಬಹುದಾಗಿದ್ದ ಬೇಸ್‌ಬಾಲ್ ಕ್ರೀಡಾಂಗಣವನ್ನು ಕ್ರಿಕೆಟ್‌ ಮೈದಾನವಾಗಿ ಅಭಿವೃದ್ದಿ ಪಡಿಸಲಾಗಿದ್ದು, ಚೊಚ್ಚಲ ಆವೃತ್ತಿಯ ಟೂರ್ನಿಯನ್ನು ಇದೇ ಸ್ಥಳದಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.