ಐಪಿಎಲ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಭರ್ಜರಿ ಫಾರ್ಮ್‌ನಲ್ಲಿರುವ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೆ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲ ಜೋರಾಗಿದೆ.

ಮುಂಬೈ: ಐಪಿಎಲ್‌ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ಈ ಹೈವೋಲ್ಟೇಜ್ ಪಂದ್ಯ ಶುರುವಾಗಲಿದೆ. ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ. ಹೀಗೆ ಕ್ರಿಕೆಟ್ ಲೋಕದ ದೊಡ್ಡ ದೊಡ್ಡ ಆಟಗಾರರೇ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. 

ಆದರೂ, ಐದು ಬಾರಿಯ ಚಾಂಪಿಯನ್ ಮುಂಬೈ ಈ ಸೀಸನ್‌ನಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತು ಸುಣ್ಣವಾಗಿದೆ. ಹಾರ್ದಿಕ್ ಪಾಂಡ್ಯ ಬಳಗಕ್ಕೆ ಇನ್ನೊಂದು ಸೋಲನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದೀಗ ಹಾರ್ದಿಕ್ ಪಾಂಡ್ಯ ಪಡೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದ್ದು, ಇಂದಿನ ಪಂದ್ಯಕ್ಕೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಾರಾ ಎನ್ನುವಂತಹ ಕುತೂಹಲ ಕೂಡಾ ಜೋರಾಗಿದೆ.

ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಮುಂಬೈ ಇಂಡಿಯನ್ಸ್

ಭರ್ಜರಿ ಬ್ಯಾಟಿಂಗ್ ಲೈನ್-ಅಪ್ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವಾಂಖೆಡೆಯಲ್ಲಿ ಮುಂಬೈ ಗೆಲ್ಲಲೇಬೇಕಾದ ಪಣ ತೊಟ್ಟಿದೆ. ಆದರೆ ಮುಂಬೈ ಕ್ಯಾಂಪ್‌ನಲ್ಲಿ ಸಮಸ್ಯೆಗಳು ಒಂದೆರಡಲ್ಲ. ತಂಡದ ಭರವಸೆಯ ಬೌಲರ್ ಜಸ್‌ಪ್ರೀತ್ ಬುಮ್ರಾ ಈ ಸೀಸನ್‌ನಲ್ಲಿ ಇದುವರೆಗೆ ಪಡೆದಿದ್ದು ಕೇವಲ ಎರಡು ವಿಕೆಟ್ ಮಾತ್ರ. ಟ್ರೆಂಟ್ ಬೌಲ್ಟ್ ಸೇರಿದಂತೆ ಇತರ ಬೌಲರ್‌ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಗಾಯಗೊಂಡು ಹೊರಗುಳಿದಿರುವ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಕೇಶವ್ ಮಹಾರಾಜ್ ಅಥವಾ ವಿಲ್ ಜಾಕ್ಸ್ ತಂಡಕ್ಕೆ ಬರುವ ಸಾಧ್ಯತೆ ಇದೆ. ರನ್‌ ಮಳೆ ಸುರಿಸುವ ಬ್ಯಾಟರ್‌ಗಳು ಕೂಡ ನಿರೀಕ್ಷಿತ ಪ್ರದರ್ಶನ ನೀಡದೆ ಪರದಾಡುತ್ತಿದ್ದಾರೆ.

ಸೂರ್ಯಕುಮಾರ್ ಯಾದವ್ ಇದುವರೆಗೆ ಗಳಿಸಿದ್ದು ಕೇವಲ 110 ರನ್. ಕ್ಯಾಪ್ಟನ್ ಹಾರ್ದಿಕ್ 97 ರನ್ ಗಳಿಸಿ, ಮೂರು ವಿಕೆಟ್ ಪಡೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡು ರೋಹಿತ್ ಶರ್ಮಾ ತಂಡಕ್ಕೆ ಮರಳುವುದು ತಂಡಕ್ಕೆ ಬಲ ತುಂಬಲಿದೆ. ಹಿಟ್‌ಮ್ಯಾನ್ ತಂಡ ಕೂಡಿಕೊಂಡರೆ ಇಂದು ಕ್ವಿಂಟನ್ ಡಿ ಕಾಕ್ ಹಾಗೂ ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಇತ್ತೀಚೆಗೆ ಭಾರತ ಟಿ20 ವಿಶ್ವಕಪ್‌ ಗೆದ್ದಾಗ ಅದರಲ್ಲಿದ್ದ ನಾಲ್ವರು ಆಟಗಾರರು ಮುಂಬೈ ತಂಡದಲ್ಲಿದ್ದಾರೆ. ಆದರೆ ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ, ತಿಲಕ್‌ ವರ್ಮಾ, ಜಸ್ಪ್ರೀತ್ ಬುಮ್ರಾರಿಂದ ಸ್ಥಿರ ಪ್ರದರ್ಶನ ಕಂಡುಬರುತ್ತಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣ.

ಬಲಿಷ್ಠ ಬ್ಯಾಟಿಂಗ್ ಲೈನ್‌ ಅಪ್ ಹೊಂದಿರುವ ಸನ್‌ರೈಸರ್ಸ್

ಮತ್ತೊಂದೆಡೆ, ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಸನ್‌ರೈಸರ್ಸ್ ಆತ್ಮವಿಶ್ವಾಸದಲ್ಲಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಅವರಂತಹ ಬ್ಯಾಟರ್‌ಗಳ ಆರ್ಭಟಕ್ಕೆ ತತ್ತರಿಸದ ಬೌಲರ್‌ಗಳೇ ಇಲ್ಲ. ಇವರಲ್ಲಿ ಇಬ್ಬರು ಕ್ರೀಸ್‌ನಲ್ಲಿ ನಿಂತರೂ ಮುಂಬೈಗೆ ಕಷ್ಟ ತಪ್ಪಿದ್ದಲ್ಲ. ನಿತೀಶ್ ಕುಮಾರ್ ರೆಡ್ಡಿ ಆಲ್‌ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಬಂದ ಮೇಲೆ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಎರಡು ತಂಡಗಳು ಇದುವರೆಗೆ 25 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 15ರಲ್ಲಿ ಮತ್ತು ಹೈದರಾಬಾದ್ 10ರಲ್ಲಿ ಗೆಲುವು ಸಾಧಿಸಿವೆ.

ಮತ್ತೊಂದೆಡೆ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಆಡಿರುವ 8 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದೆ. ಆರಂಭಿಕ 4ರ ಪೈಕಿ 3ರಲ್ಲಿ ಸೋತಿದ್ದ ತಂಡ ಬಳಿಕ ಎಲ್ಲಾ 4 ಪಂದ್ಯಗಳಲ್ಲೂ ಗೆದ್ದಿದೆ. ಈಗ ಮುಂಬೈ ವಿರುದ್ಧ ಅದರದೇ ತವರಿನಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.