ಕ್ರೀಡಾಂಗಣವೊಂದರ ಒಂದು ಸೀಟ್‌ಗೆ ತನ್ನ ಹೆಸರನ್ನು ಹೊಂದಿರುವ ಭಾರತದ ಮೊಟ್ಟಮೊದಲ ಆಟಗಾರ ಎನ್ನುವ ಕೀರ್ತಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಪಾತ್ರರಾಗಲಿದ್ದಾರೆ
ಮುಂಬೈ (ಏ.4): 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ವಾಂಖೆಡೆ ಸ್ಟೇಡಿಯಂನಲ್ಲಿ ಬಾರಿಸಿದ ಐತಿಹಾಸಿಕ ಗೆಲುವಿನ ಸಿಕ್ಸರ್ ಭಾರತೀಯರ ಪಾಲಿಗೆ ಇನ್ನೂ ಅಚ್ಚಳಿಯದೇ ಉಳಿದಿದೆ. ಇದು ಇತ್ತೀಚಿನ ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸ್ ಐತಿಹಾಸಿಕ ಕ್ಷಣ ಎಂದರೂ ತಪ್ಪಾಗಲಾರದು. ಧೋನಿ ಬಾರಿಸಿದ ಈ ಸಿಕ್ಸರ್ ಮೂಲಕ ಭಾರತದ 28 ವರ್ಷಗಳ ವಿಶ್ವಕಪ್ ಟ್ರೋಫಿಯ ಬರ ಅಂತ್ಯಕಂಡಿತ್ತು. ಶ್ರೀಲಂಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ತವರಿನಲ್ಲಿಯೇ ವಿಶ್ವ ಚಾಂಪಿಯನ್ ಎನಿಸಿಕೊಂಡಿತ್ತು. ಈಗ ಮುಂಬೈ ಕ್ರಿಕೆಟ್ ಸ್ಟೇಡಿಯಂ ಎಂಎಸ್ ಧೋನಿಯ ಹೆಸರನ್ನು ವಾಂಖೆಡೆ ಮೈದಾನದಲ್ಲಿ ಐತಿಹಾಸಿಕವಾಗಿರಿಸಲು ಬಯಸಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ಬಾರಿಸಿದ ಸಿಕ್ಸರ್, ಸ್ಟ್ಯಾಂಡ್ ಒಂದರ ಸೀಟ್‌ಗೆ ಬಡಿದಿತ್ತು. ಈಗ ಅದೇ ಸೀಟ್‌ಗೆ ಎಂಎಸ್ ಧೋನಿ ಹೆಸರಿಡಲು ಎಂಸಿಎ ತೀರ್ಮಾನ ಮಾಡಿದೆ. ಅದರೊಂದಿಗೆ ಧೋನಿಯ ಹೆಸರು, ವಿಶ್ವಕಪ್ ಗೆಲುವಿನ ಶಾಟ್ ಹಾಗೂ ಐತಿಹಾಸಿಕ ಕ್ಷಣವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿಡಲು ಎಂಸಿಎ ಮುಂದಾಗಿದೆ. ಆ ಮೂಲಕ ಕ್ರೀಡಾಂಗಣವೊಂದರ ಸೀಟ್‌ಗೆ ತನ್ನ ಹೆಸರನ್ನು ಹೊಂದಿರುವ ಭಾರತದ ಮೊಟ್ಟಮೊದಲ ಆಟಗಾರ ಎನ್ನುವ ಕೀರ್ತಿಗೂ ಎಂಎಸ್ ಧೋನಿ ಪಾತ್ರರಾಗಲಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ, ಇದೇ ಶನಿವಾರ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ 2023 ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದ ವೇಳೆ ಧೋನಿ ಹೆಸರಿನ ಸೀಟ್‌ಅನ್ನು ಅನಾವರಣ ಮಾಡಲು ಎಂಸಿಎ ನಿರ್ಧಾರ ಮಾಡಿದೆ. ಈ ವೇಳೆ ಧೋನಿ ಕೂಡ ಇರುವುದರಿಂದ ಕಾರ್ಯಕ್ರಮ ವಿಶೇಷವಾಗಿರಲಿದೆ ಎಂದು ಎಂಸಿಎ ನಿರ್ಧಾರ ಮಾಡಿದೆ.
ವಾಂಖೆಡೆ ಸ್ಟೇಡಿಯಂನ ಒಳಗಿರುವ ಸೀಟ್‌ಗೆ ಎಂಎಸ್ ಧೋನಿ ಹೆಸರಿಡಲು ಎಂಸಿಎ ಸೋಮವಾರ ನಿರ್ಧಾರ ಮಾಡಿದೆ ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ತಿಳಿಸಿದ್ದಾರೆ. ಈ ಸೀಟ್‌ನ ಮೇಲೆಯೇ 2011ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಧೋನಿ ಬಾರಿಸಿದ ಗೆಲುವಿನ ಸಿಕ್ಸರ್ ಲ್ಯಾಂಡ್ ಆಗಿತ್ತು. ಎಂಎಸ್ ಧೋನಿಗೆ ಸ್ಟೇಡಿಯಂಗೆ ಆಗಮಿಸುವಂತೆ ಮನವಿ ಮಾಡಲಿದ್ದು, ಈ ಸೀಟ್‌ಅನ್ನು ಅನಾವರಣ ಮಾಡುವಂತೆ ಕೇಳಿಕೊಳ್ಳಲಿದ್ದೇವೆ. ಅವರಿಗೆ ಮೆಮೊಂಟೋ ಕೂಡ ನೀಡಲಾಗುವುದು ಎಂದು ಕಾಳೆ ಹೇಳಿದ್ದಾರೆ.
ಕ್ಯಾಪ್ಟನ್ ಕೂಲ್ ಧೋನಿ ಬ್ಯಾಟಿಂಗ್‌ಗಿಳಿಯುತ್ತಿದ್ದಂತೆಯೇ ದಾಖಲೆಯ ಮಂದಿ ಜಿಯೋದಲ್ಲಿ ಪಂದ್ಯ ವೀಕ್ಷಣೆ..!
2020ರಲ್ಲಿ ಇಂಥದ್ದೊಂದು ಸಲಹೆಯನ್ನು ಎಂಸಿಎ ಸದಸ್ಯರಾಗಿದ್ದ ಅಜಿಂಕ್ಯಾ ನಾಯ್ಕ್ ಎನ್ನುವವರು ನೀಡಿದ್ದರು. ಆದರೆ, ಅಪೆಕ್ಸ್ ಕೌನ್ಸಿಲ್ ಮಾತ್ರ ಈ ನಿರ್ಧಾರವನ್ನು ಪಾಸ್ ಮಾಡಿರಲಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಈಗಾಗಲೇ ಭಾರತೀಯ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್ ಹಾಗೂ ವಿಜಯ್ ಮರ್ಚೆಂಟ್ ಹೆಸರಿನ ಸ್ಟ್ಯಾಂಡ್‌ಗಳಿವೆ.
ಧೋನಿಗೆ ಧೋನಿಯೇ ಸಾಟಿ, ಚೆನ್ನೈಗೆ ಮಹಿಯ ಫಿಟ್ನೆಸ್ ತೀರಾ ಅನಿವಾರ್ಯ..!
ಒಂದು ಸ್ಟೇಡಿಯಂನ ಆಸನಕ್ಕೆ ಕ್ರೀಡಾಪಟುವಿನ ಹೆಸರನ್ನು ಇಡುವುದು ಭಾರತಕ್ಕೆ ಇದು ಮೊದಲನೆಯದಾಗಿದ್ದರೂ, ಈ ಅಭ್ಯಾಸ ವಿಶ್ವದ ಇತರೆಡೆ ಸಾಮಾನ್ಯವಾಗಿದೆ. ನ್ಯೂಜಿಲೆಂಡ್‌ನ ಮಾಜಿ ಆಲೌಂಡರ್ ಗ್ರಾಂಟ್ ಎಲಿಯಟ್ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ತಮ್ಮ ಹೆಸರಿನ ಸೀಟ್‌ಅನ್ನು ಹೊಂದಿದ್ದಾರೆ. ಡೇಲ್ ಸ್ಟೇಯ್ನ್ ಅವರ ಐಕಾನಿಕ್ ಸಿಕ್ಸರ್ ಗೌರವಾರ್ಥವಾಗಿ ಅವರು ತಮ್ಮ ಹೆಸರಿನ ಸೀಟ್ ಹೊಂದಿದ್ದಾರೆ. ಅವರ ಈ ಸಾಹಸದಿಂದಾಗಿ 2015 ರಲ್ಲಿ ನ್ಯೂಜಿಲೆಂಡ್ ತಂಡ ತನ್ನ ಮೊದಲ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿತ್ತು.
