ಮಯಾಂಕ್ ಅಗರ್‌ವಾಲ್ ಭರ್ಜರಿ ಶತಕ: ಬಿಹಾರ ಎದುರು ರಾಜ್ಯಕ್ಕೆ ಲೀಡ್
ರಣಜಿ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡವು ಬಿಹಾರ ಎದುರು ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ
ಪಾಟ್ನಾ: ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ಬಿಹಾರ ವಿರುದ್ಧ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದು, ಕೊನೆ ದಿನವಾದ ಮಂಗಳವಾರ ಗೆಲುವು ದಾಖಲಿಸುವ ಕಾತರದಲ್ಲಿದೆ.
ಬಿಹಾರ ಮೊದಲ ದಿನವೇ ಕೇವಲ 143ಕ್ಕೆ ರನ್‌ಗೆ ಆಲೌಟಾಗಿತ್ತು. 2ನೇ ದಿನದಾಟ ಮಳೆಗೆ ಆಹುತಿಯಾಗಿದ್ದರೆ, 3ನೇ ದಿನವಾದ ಸೋಮವಾರ ಪಂದ್ಯದ ಮೇಲೆ ಕರ್ನಾಟಕ ಹಿಡಿತ ಸಾಧಿಸಿತು. ನಾಯಕ ಮಯಾಂಕ್ ಅಗರ್‌ವಾಲ್ ಶತಕದ ನೆರವಿನಿಂದ ತಂಡ ದಿನದಂತ್ಯಕ್ಕೆ 7 ವಿಕೆಟ್‌ಗೆ 287 ರನ್ ಕಲೆಹಾಕಿದ್ದು, ಒಟ್ಟು 144 ರನ್ ಮುನ್ನಡೆ ಪಡೆದಿದೆ. ಕೊನೆ ದಿನ ಇನ್ನಷ್ಟು ಮೊತ್ತ ಕಲೆಹಾಕಿ, ಬಿಹಾರವನ್ನು ಬೇಗನ್ ಆಲೌಟ್ ಇನ್ನಿಂಗ್ಸ್ ಗೆಲುವು ದಾಖಲಿಸುವುದು ಕರ್ನಾಟಕದ ಗುರಿ.
ಕೊಹ್ಲಿ, ಸಿರಾಜ್ ರಿಟೇನ್, ಕೆಎಲ್ ರಾಹುಲ್ ಆರ್‌ಸಿಬಿ ಕ್ಯಾಪ್ಟನ್?
ತಂಡದ ಮೊದಲೆರಡೂ ಪಂದ್ಯಗಳು ಮಳೆ ಕಾರಣಕ್ಕೆ ಮೊದಲ ಇನ್ನಿಂಗ್ಸ್ ಕೂಡಾ ಪೂರ್ಣಗೊಳ್ಳದೆ ಡ್ರಾಗೊಂಡಿರುವ ಕಾರಣ ಬಿಹಾರ ವಿರುದ್ಧ ಗೆದ್ದರಷ್ಟೇ ನಾಕೌಟ್ ಆಸೆ ಜೀವಂತವಾಗಿರಲಿದೆ. ಮೊದಲ ದಿನ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದ್ದ ರಾಜ್ಯ ತಂಡಕ್ಕೆ ಮಂಗಳವಾರ ಆಘಾತ ಎದುರಾಯಿತು. ಆರಂಭಿಕರಾದ ನಿಕಿನ್ ಜೋಸ್ (16) ಹಾಗೂ ಸುಜಯ್ ಸತೇರಿ(10) ಬೇಗನೇ ಔಟಾದರು. ಆದರೆ ನಾಯಕ ಮಯಾಂಕ್ ತಂಡದ ಕೈ ಬಿಡಲಿಲ್ಲ.
3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮಯಾಂಕ್ ಬಿಹಾರ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರು 131 ಎಸೆತಗಳಲ್ಲಿ 105 ರನ್ ಸಿಡಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಸ್ಮರಣ್ ಆರ್. 37, ಮಾಜಿ ನಾಯಕ ಮನೀಶ್ ಪಾಂಡೆ 56, ಅಭಿನವ್ ಮನೋಹರ್ 37 ರನ್ ಗಳಿಸಿದರು. ತಂಡ 5 ವಿಕೆಟ್‌ಗೆ 286 ರನ್ ಗಳಿಸಿತ್ತಾದರೂ, ಬಳಿಕ ಕೇವಲ 1 ರನ್ ಸೇರಿಸುವಷ್ಟರಲ್ಲಿ ಅಭಿನವ, ಮಯಾಂಕ್ ಹಾಗೂ ವೈಶಾಖ್ ವಿಕೆಟ್ ಕಳೆದುಕೊಂಡಿತು. ಸದ್ಯ ಶ್ರೇಯಸ್ ಗೋಪಾಲ್ (ಔಟಾಗದೆ 1) ಕ್ರೀಸ್ ನಲ್ಲಿದ್ದಾರೆ. ಬಿಹಾರ ಪರ ಹಿಮಾನು ಸಿಂಗ್ 4, ಶಕೀಬ್ ಹುಸೈನ್ 2 ವಿಕೆಟ್ ಕಿತ್ತರು.
ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿ ಮೊದಲು ದೇಶಿ ಕ್ರಿಕೆಟ್ ಆಡಲಿ: ಆರ್‌ಸಿಬಿ ಮಾಜಿ ಕ್ರಿಕೆಟಿಗನ ಆಗ್ರಹ
ಸ್ಕೋರ್:
ಬಿಹಾರ 143/10,
ಕರ್ನಾಟಕ 287/7 (3ನೇ ದಿನದಂತ್ಯಕ್ಕೆ)
(ಮಯಾಂಕ್ 105, ಮನೀಶ್ 56, ಸ್ಮರಣ್ 37, ಅಭಿನವ್ 37, ಹಿಮಾನು 4-51)