"

ವೆಲ್ಲಿಂಗ್ಟನ್(ಫೆ.21): ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಸಿಡಿಸಿದೆ. ಸದ್ಯ ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಕ್ರೀಸ್ ಕಾಯ್ದಕೊಂಡಿದ್ದು, 2ನೇ ದಿನದಾಟದ ಮೊದಲ ಸೆಶನ್ ಇದೀಗ ತೀವ್ರ ಕುತೂಹಲ ಕೆರಳಿಸಿದೆ. 

ಇದನ್ನೂ ಓದಿ: ಮೊದಲ ದಿನ ಮಳೆಯಾಟ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪರದಾಟ..!

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆರಂಭಿಕ ಮಯಾಂಕ್ ಅಗರ್ವಾಲ್ ಎಚ್ಚರಿಕೆಯ ಹೆಜ್ಜೆ ಇಟ್ಟರು. ಮೊದಲ ಸೆಶನ್ ಪೂರ್ತಿ ಆಡಿದ ಮಯಾಂಕ್ ಅಗರ್ವಾಲ್ ಅಪರೂಪದ ದಾಖಲೆ ಬರೆದರು. ನ್ಯೂಜಿಲೆಂಡ್‌ನಲ್ಲಿ ಮೊದಲ ಸೆಶನ್ ಆಡಿದ ಭಾರತದ 2ನೇ ಆರಂಭಿಕ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್

30 ವರ್ಷಗಳ ಹಿಂದೆ ಅಂದರೆ 1990ರಲ್ಲಿ ಭಾರತ ತಂಡದ ಆರಂಭಿಕ ಮನೋಜ್ ಪ್ರಭಾಕರ್ ನೇಪಿಯರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಸೆಶನ್ ಸಂಪೂರ್ಣವಾಗಿ ಆಡಿದ್ದರು. 268 ಎಸೆತ ಎದುರಿಸಿದ ಮನೋಜ್ ಪ್ರಭಾಕರ್ 95 ರನ್ ಸಿಡಿಸಿದ್ದರು. ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. 

ಇದೀಗ ಮಯಾಂಕ್ ಅಗರ್ವಾಲ್ ಲಂಚ್ ಬ್ರೇಕ್ ವೇಳೆ ಅಜೇಯ 29 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಬಳಿಕ ಮಯಾಂಕ್ 34 ರನ್ ಸಿಡಿಸಿ ಔಟಾದರು. ಮೊದಲ ದಿನ ಭಾರತ ಹಿನ್ನಡೆ ಅನುಭವಿಸಿದೆ ನಿಜ. ಆದರೆ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾ ನಂಬರ್ 1 ತಂಡ. ಅಷ್ಟೇ ವೇಗವಾಗಿ ಕಮ್‌ಬ್ಯಾಕ್ ಮಾಡಬಲ್ಲ ಸಾಮರ್ಥ್ಯ ಭಾರತ ತಂಡಕ್ಕಿದೆ ಅನ್ನೋದನ್ನು ಮರೆಯುವಂತಿಲ್ಲ.