ವೆಲ್ಲಿಂಗ್ಟನ್(ಫೆ.21): ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಮಳೆ ಹಾಗೂ ಕಿವೀಸ್ ವೇಗಿಗಳು ಮೇಲುಗೈ ಸಾಧಿಸಿದರೆ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಪರದಾಡುವಂತೆ ಮಾಡಿದರು. ಮೊದಲ ದಿನದಾಟದಂತ್ಯಕ್ಕೆ 55 ಓವರ್‌ಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿದೆ.

ಮೊದಲ ಟೆಸ್ಟ್: 101ಕ್ಕೆ ಟೀಂ ಇಂಡಿಯಾದ 5 ವಿಕೆಟ್ ಪತನ

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೈಲ್ ಜ್ಯಾಮಿಸನ್ ಕಮಾಲ್ ಮಾಡಿದ್ದು ಮೊದಲ ದಿನವೇ 3 ವಿಕೆಟ್ ಪಡೆದು ಮಿಂಚಿದರು. ವರ್ಷದ ಬಳಿಕ ಟೆಸ್ಟ್ ತಂಡ ಕೂಡಿಕೊಂಡ ಪೃಥ್ವಿ ಶಾ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಪೂಜಾರ(11) ಹಾಗೂ ವಿರಾಟ್ ಕೊಹ್ಲಿ(2) ಅವರ ವಿಕೆಟ್ ಕಬಳಿಸುವಲ್ಲಿ ಜ್ಯಾಮಿಸನ್ ಯಶಸ್ವಿಯಾದರು. ಇನ್ನು ಕೆಲಕಾಲ ಪ್ರತಿರೋಧ ತೋರಿದ ಮಯಾಂಕ್ ಅಗರ್‌ವಾಲ್ 34 ರನ್‌ಗಳಿಸಿ ಬೋಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಹನುಮ ವಿಹಾರಿ(7) ಸಹ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 

ರಹಾನೆ ತಾಳ್ಮೆಯ ಬ್ಯಾಟಿಂಗ್: ಒಂದು ಹಂತದಲ್ಲಿ 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಅಗರ್‌ವಾಲ್ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 44 ರನ್‌ಗಳ ಜತೆಯಾಟ ನಿಭಾಯಿಸಿತು. ಮಯಾಂಕ್ ವಿಕೆಟ್ ಪತನದ ಬಳಿಕ ರಹಾನೆ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರು. ರಹಾನೆ 122 ಎಸೆತಗಳಲ್ಲಿ 4 ಬೌಂಡರಿ ಸಹಿತ 38 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್(10) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮಿಂಚಿದ ಕಿವೀಸ್ ವೇಗಿಗಳು: ನ್ಯೂಜಿಲೆಂಡ್‌ನ 6 ಅಡಿ 6 ಇಂಚಿನ ವೇಗಿ ಕೈಲ್ ಜಾಮಿಸನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಮೊದಲ ದಿನವೇ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯುಶಸ್ವಿಯಾಗಿದ್ದಾರೆ. ಇನ್ನು ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.  

ಮಳೆಕಾಟ: ಮೊದಲ ದಿನದಾಟದಂತ್ಯದಲ್ಲಿ ಮಳೆ ಅಡ್ಡಿ ಪಡಿಸಿತು. ಮೊದಲ ದಿನದಾಟದಲ್ಲಿ ಕೇವಲ 55 ಓವರ್‌ಗಳಷ್ಟೇ ಆಡಲು ಸಾಧ್ಯವಾಯಿತು. ಚಹಾ ವಿರಾಮದ ಮಳೆಯದ್ದೇ ಆಟ ನಡೆಯಿತು. ಗುಡುಗು-ಮಿಂಚು ಸಹಿತ ಮಳೆ ಸುರಿದಿದ್ದರಿಂದ ಅಂತಿಮ ಸೆಷನ್ ಆಟ ನಡೆಯಲಿಲ್ಲ. ಹೀಗಾಗಿ ಎರಡನೇ ದಿನದಲ್ಲಿ ಟೀಂ ಇಂಡಿಯಾ ಎಚ್ಚರಿಕೆಯ ಆಟವಾಡುವುದರ ಜತೆಗೆ ರನ್‌ ಗಳಿಕೆಗೆ ಚುರುಕು ಮುಟ್ಟಿಸಬೇಕಾಗಿದೆ. 

ಫೆಬ್ರವರಿ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ