* ಇಂದೋರ್ ಟೆಸ್ಟ್‌ನಲ್ಲಿ ಕೇವಲ 109 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್* 16 ರನ್‌ ನೀಡಿ 5 ವಿಕೆಟ್ ಕಬಳಿಸಿದ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್* ತವರಿನಲ್ಲಿ 2008ರ ಬಳಿಕ ನಾಲ್ಕನೇ ಕನಿಷ್ಠ ಮೊತ್ತ ಗಳಿಸಿದ ಟೀಂ ಇಂಡಿಯಾ

ಇಂದೋರ್(ಮಾ.01): ಮ್ಯಾಥ್ಯೂ ಕುಹ್ನೆಮನ್‌ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ, ಇಂದೋರ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 109 ರನ್‌ಗಳಿಗೆ ಸರ್ವಪತನ ಕಂಡಿದೆ. ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ತೋರಿದ ಮ್ಯಾಥ್ಯೂ ಕುಹ್ನೆಮನ್‌ ಕೇವಲ 16 ರನ್ ನೀಡಿ 5 ವಿಕೆಟ್ ಕಬಳಿಸಿದರು. ಟೀಂ ಇಂಡಿಯಾ 109 ರನ್‌ಗಳಿಗೆ ಆಲೌಟ್‌ ಆಗಿದ್ದು, 2008ರ ಬಳಿಕ ತವರಿನಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ದಾಖಲಿಸಿದ 4ನೇ ಕನಿಷ್ಠ ಸ್ಕೋರ್ ಎನಿಸಿಕೊಂಡಿತು.

ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ರೋಹಿತ್ ಶರ್ಮಾ ತಮಗೆ ಮೊದಲ ಓವರ್‌ನಲ್ಲೇ ಸಿಕ್ಕ ಎರಡು ಜೀವಾದಾನವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ಸಾಕಷ್ಟು ತಿರುವುಪಡೆದುಕೊಳ್ಳುತ್ತಿರುವ ಪಿಚ್‌ನಲ್ಲಿ ಮುನ್ನುಗ್ಗಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕುಹ್ನೆಮನ್‌ ಬೌಲಿಂಗ್‌ನಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್‌ ಸೇರಿದರು. ಕುಹ್ನೆಮನ್ ತಮ್ಮ ಮೊದಲ ಓವರ್‌ನಲ್ಲೇ ಆಸೀಸ್‌ಗೆ ಯಶಸ್ಸು ತಂದುಕೊಡುವಲ್ಲಿ ಸಫಲರಾದರು. ರೋಹಿತ್ ಶರ್ಮಾ 12 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಕೆ ಎಲ್ ರಾಹುಲ್ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಶುಭ್‌ಮನ್ ಗಿಲ್ ಬ್ಯಾಟಿಂಗ್ ಕೇವಲ 21 ರನ್‌ಗಳಿಗೆ ಸೀಮಿತವಾಯಿತು.

Scroll to load tweet…

ಕೈಕೊಟ್ಟ ಮಧ್ಯಮ ಕ್ರಮಾಂಕ: ಟೀಂ ಇಂಡಿಯಾ 34 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಇದಾದ ಬಳಿಕ ಕ್ರೀಸ್‌ಗಿಳಿಸಿದ ಚೇತೇಶ್ವರ್ ಪೂಜಾರ(01), ರವೀಂದ್ರ ಜಡೇಜಾ(04)ಹಾಗೂ ಶ್ರೇಯಸ್ ಅಯ್ಯರ್(0) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಟೀಂ ಇಂಡಿಯಾ 45 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. 

Indore Test: ಭಾರೀ ಸಂಕಷ್ಟದಲ್ಲಿ ಟೀಂ ಇಂಡಿಯಾ, ನೂರು ರನ್‌ಗಳೊಗೆ 7 ವಿಕೆಟ್ ಪತನ..!

ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಕೆಲಕಾಲ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಕೊಹ್ಲಿ 52 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 22 ರನ್ ಬಾರಿಸಿ ಟೋಡ್ ಮರ್ಫಿಗೆ ಈ ಸರಣಿಯಲ್ಲಿ ಮೂರನೇ ಬಾರಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಬಾರಿಸಿದ 22 ರನ್‌, ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನುಳಿದಂತೆ ಶ್ರೀಕರ್ ಭರತ್ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಉಮೇಶ್ ಯಾದವ್ ಎರಡು ಸಿಕ್ಸರ್ ಸಹಿತ ಸ್ಪೋಟಕ 17 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇನ್ನು ಅಕ್ಷರ್ ಪಟೇಲ್‌ 12 ರನ್ ಬಾರಿಸಿ ಅಜೇಯರಾಗುಳಿದರು. 

ಆಸೀಸ್‌ ಸ್ಪಿನ್ ದಾಳಿಗೆ ಟೀಂ ಇಂಡಿಯಾ ತತ್ತರ: ಹೌದು, ಟೀಂ ಇಂಡಿಯಾ ಬ್ಯಾಟರ್‌ಗಳು, ಆಸ್ಟ್ರೇಲಿಯಾದ ಸ್ಪಿನ್ನರ್‌ಗಳ ಎದುರು ದಿಟ್ಟ ಪ್ರದರ್ಶನ ತೋರಲು ವೈಪಲ್ಯ ಅನುಭವಿಸಿದರು. ಕೇವಲ 9 ಓವರ್ ಬೌಲಿಂಗ್ ಮಾಡಿದ ಮ್ಯಾಥ್ಯೂ ಕುಹ್ನೆಮನ್ 16 ರನ್ ನೀಡಿ ಪ್ರಮುಖ 5 ವಿಕೆಟ್ ಕಬಳಿಸುವ ಮೂಲಕ ಮೊದಲ ಬಾರಿಗೆ 5 ವಿಕೆಟ್ ಗೊಂಚಲು ಪಡೆದರು. ಇನ್ನು ನೇಥನ್ ಲಯನ್ 3 ಹಾಗೂ ಟೋಡ್ ಮರ್ಫಿ ಒಂದು ವಿಕೆಟ್ ಪಡೆದರು.