Asianet Suvarna News Asianet Suvarna News

ನ್ಯೂಜಿಲೆಂಡ್ ಕೇಂದ್ರಿಯ ಗುತ್ತಿಗೆಯಿಂದ ಹೊರಬಿದ್ದ ಮಾರ್ಟಿನ್ ಗಪ್ಟಿಲ್‌..! ಮುಗಿಯಿತಾ ಕ್ರಿಕೆಟ್‌ ಬದುಕು?

ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಅನುಭವಿ ಬ್ಯಾಟರ್ ಮಾರ್ಟಿನ್ ಗಪ್ಟಿಲ್
ಬೌಲ್ಟ್‌, ಗ್ರ್ಯಾಂಡ್‌ ಹೋಮ್‌ ಬಳಿಕ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಮೂರನೇ ಕ್ರಿಕೆಟಿಗ ಗಪ್ಟಿಲ್
ಟಿ20 ಲೀಗ್ ಟೂರ್ನಿಗಳತ್ತ ಮಾರ್ಟಿನ್ ಗಪ್ಟಿಲ್‌ ಹೆಚ್ಚು ಗಮನ ಹರಿಸುವ ಸಾಧ್ಯತೆ

Martin Guptill Released By New Zealand From Central Contract List kvn
Author
First Published Nov 23, 2022, 1:28 PM IST

ವೆಲ್ಲಿಂಗ್ಟನ್‌(ನ.23): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್‌ ಮಾರ್ಟಿನ್ ಗಪ್ಟಿಲ್, ಇದೀಗ ನ್ಯೂಜಿಲೆಂಡ್‌ ಕೇಂದ್ರಿಯ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ. ಈ ಮೊದಲು ಎಡಗೈ ಮಾರಕ ವೇಗಿ ಟ್ರೆಂಟ್ ಬೌಲ್ಟ್‌ ಹಾಗೂ 36 ವರ್ಷದ ಅನುಭವಿ ಆಲ್ರೌಂಡರ್ ಕಾಲಿನ್‌ ಡಿ ಗ್ರ್ಯಾಂಡ್‌ ಹೋಮ್‌ ಅವರು ಕೇಂದ್ರಿಯ ಗುತ್ತಿಗೆಯಿಂದ ಹೊರಬಿದ್ದಿದ್ದರು. ಇದೀಗ ಮಾರ್ಟಿನ್‌ ಗಪ್ಟಿಲ್‌, ಈ ಪಟ್ಟಿ ಸೇರ್ಪಡೆಗೊಂಡ ಮೂರನೇ ಕಿವೀಸ್‌ ಆಟಗಾರ ಎನಿಸಿಕೊಂಡಿದ್ದಾರೆ.

ಇದೀಗ ಮಾರ್ಟಿನ್‌ ಗಪ್ಟಿಲ್‌, ಟಿ20 ಲೀಗ್‌ ಟೂರ್ನಿಯಲ್ಲಿ ಹೆಚ್ಚು ಗಮನ ಹರಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ನ್ಯೂಜಿಲೆಂಡ್ ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದಿರುವ ಟ್ರೆಂಟ್ ಬೌಲ್ಟ್‌, ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಮೆಲ್ಬರ್ನ್ ಸ್ಟಾರ್ಸ್‌ ತಂಡದ ಜತೆ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನೊಂದೆಡೆ ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳಿನಿಂದ ಪುರುಷರ ಬಿಗ್‌ಬ್ಯಾಶ್ ಲೀಗ್ ಟಿ20 ಟೂರ್ನಿ ಆರಂಭವಾಗಲಿದೆ.

ಟ್ರೆಂಟ್ ಬೌಲ್ಟ್‌, ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ ಅವರಂತೆಯೇ 36 ವರ್ಷದ ಮಾರ್ಟಿನ್ ಗಪ್ಟಿಲ್‌ ಕೂಡಾ ಆಯ್ಕೆಯಾದರೇ, ನ್ಯೂಜಿಲೆಂಡ್ ಪರ ಆಡಲು ಲಭ್ಯವಿರಲಿದ್ದಾರೆ. ಆದರೆ ಅವರೀಗ ಹೊಸ ಅವಕಾಶಗಳನ್ನು ಹುಡುಕಲು ಸ್ವತಂತ್ರರಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಟ್ರೆಂಟ್ ಬೌಲ್ಟ್‌, ಮಾರ್ಟಿನ್ ಗಪ್ಟಿಲ್‌ಗೆ ಇನ್ನೂ ಕಿವೀಸ್ ತಂಡದ ಬಾಗಿಲು ಮುಚ್ಚಿಲ್ಲ: ಕೋಚ್ ಗ್ಯಾರಿ ಸ್ಟೆಡ್‌

2009ರಲ್ಲಿ ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮಾರ್ಟಿನ್‌ ಗಪ್ಟಿಲ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು 198 ಏಕದಿನ ಪಂದ್ಯಗಳನ್ನಾಡಿ ಏಳು ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡದ ಪರ 122 ಟಿ20 ಪಂದ್ಯಗಳನ್ನಾಡಿ 3,531 ರನ್ ಬಾರಿಸಿದ್ದಾರೆ. 

ಮಾರ್ಟಿನ್ ಗಪ್ಟಿಲ್, ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗಪ್ಟಿಲ್, ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಮಾರ್ಟಿನ್ ಗಪ್ಟಿಲ್ ಬದಲಿಗೆ ಫಿನ್ ಅಲೆನ್‌ ಹಾಗೂ ಡೆವೊನ್‌ ಕಾನ್‌ವೇ ಕಿವೀಸ್ ಪರ ಆರಂಭಿಕರಾಗಿ ಇನಿಂಗ್ಸ್‌ ಆರಂಭಿಸಿದ್ದರು. ನ್ಯೂಜಿಲೆಂಡ್ ತಂಡವು ಸೆಮೀಸ್‌ ಪ್ರವೇಶಿಸಿತ್ತಾದರೂ, ಇಂಗ್ಲೆಂಡ್ ಎದುರು ಮುಗ್ಗರಿಸುವ ಮೂಲಕ ಪ್ರಶಸ್ತಿ ಸುತ್ತಿಗೇರಲು ವಿಫಲವಾಗಿತ್ತು. ಇದಾದ ಬಳಿಕ ತವರಿನಲ್ಲಿ ನಡೆಯುತ್ತಿರುವ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಗೂ ಕಿವೀಸ್‌ ತಂಡದಲ್ಲಿ ಸ್ಥಾನ ಪಡೆಯಲು ಮಾರ್ಟಿನ್ ಗಪ್ಟಿಲ್ ವಿಫಲವಾಗಿದ್ದರು.

ಈ ಕುರಿತಂತೆ ಮಾತನಾಡಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಹೆಡ್‌ ಕೋಚ್, ಗ್ಯಾರಿ ಸ್ಟೆಡ್‌, "ಟ್ರೆಂಟ್‌ ಬೌಲ್ಟ್‌ ಹಾಗೂ ಮಾರ್ಟಿನ್ ಗಪ್ಟಿಲ್‌ಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಕೂಡಿಕೊಳ್ಳಲು ಬಾಗಿಲು ಮುಚ್ಚಿಲ್ಲ. ಅವರಲ್ಲಿ ಇನ್ನೂ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ" ಎಂದು ಹೇಳಿದ್ದರು.

Follow Us:
Download App:
  • android
  • ios