ಭಾರತ ಎದುರಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದ ಮಾರ್ಟಿನ್ ಗಪ್ಟಿಲ್, ಟ್ರೆಂಟ್ ಬೌಲ್ಟ್ಕಿವೀಸ್ ತಂಡ ಕೂಡಿಕೊಳ್ಳಲು ಅವಕಾಶವಿದೆ ಎಂದ ಕೋಚ್ ಗ್ಯಾರಿ ಸ್ಟೆಡ್

ವೆಲ್ಲಿಂಗ್ಟನ್‌(ನ.16): ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದ, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಇದೀಗ ದ್ವಿಪಕ್ಷೀಯ ಸೀಮಿತ ಓವರ್‌ಗಳ ಸರಣಿಯನ್ನಾಡಲು ಸಜ್ಜಾಗಿವೆ. ಇದೀಗ ನವೆಂಬರ್ 18ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿ ಹಾಗೂ ಇದಾದ ಬಳಿಕ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದೆ. ಕಿವೀಸ್ ಅನುಭವಿ ಆಟಗಾರರಾದ ಮಾರ್ಟಿನ್‌ ಗಪ್ಟಿಲ್ ಹಾಗೂ ಟ್ರೆಂಟ್ ಬೌಲ್ಟ್‌, ಭಾರತ ಎದುರಿನ ಸರಣಿಯಿಂದ ಹೊರಬಿದ್ದಿದ್ದಾರೆ.

ಹೌದು, ನವೆಂಬರ್ 18ರಿಂದ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಗಪ್ಟಿಲ್ ಹಾಗೂ ಬೌಲ್ಟ್ ಹೊರಬಿದ್ದಿರುವುದರಿಂದ, ಸ್ಪೋಟಕ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಟಿ20 ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಬಲಗೈ ವೇಗಿ ಆಡಂ ಮಿಲ್ನೆ 2017ರ ಬಳಿಕ ನ್ಯೂಜಿಲೆಂಡ್ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಈ ಕುರಿತಂತೆ ಮಾತನಾಡಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಹೆಡ್‌ ಕೋಚ್, ಗ್ಯಾರಿ ಸ್ಟೆಡ್‌, "ಟ್ರೆಂಟ್‌ ಬೌಲ್ಟ್‌ ಹಾಗೂ ಮಾರ್ಟಿನ್ ಗಪ್ಟಿಲ್‌ಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಕೂಡಿಕೊಳ್ಳಲು ಬಾಗಿಲು ಮುಚ್ಚಿಲ್ಲ. ಅವರಲ್ಲಿ ಇನ್ನೂ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ" ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಎಡಗೈ ವೇಗಿ, ನ್ಯೂಜಿಲೆಂಡ್ ಕ್ರಿಕೆಟ್‌ನ ಕೇಂದ್ರೀಯ ಗುತ್ತಿಗೆ ಸ್ವೀಕರಿಸಲು ನಿರಾಕರಿಸಿದ್ದರು, ಹೀಗಿದ್ದೂ, ಬೌಲ್ಟ್‌ ತಾವು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನು ಮಾರ್ಟಿನ್ ಗಪ್ಟಿಲ್, ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ, ಒಂದೇ ಒಂದು ಪಂದ್ಯದಲ್ಲೂ ಸಹಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಪರ ಎಲ್ಲಾ ಪಂದ್ಯಗಳಲ್ಲೂ ಡೆವೊನ್ ಕಾನ್‌ವೇ ಹಾಗೂ ಫಿನ್ ಅಲೆನ್ ಇನಿಂಗ್ಸ್‌ ಆರಂಭಿಸಿದ್ದರು.

IPL 2023: ಸನ್‌ರೈಸರ್ಸ್‌ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಕೇನ್ ವಿಲಿಯಮ್ಸನ್‌..!

ಆರಂಭಿಕ ಬ್ಯಾಟರ್ ಫಿನ್ ಅಲೆನ್, ನ್ಯೂಜಿಲೆಂಡ್ ಪರ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡಲಾರಂಭಿಸಿದ್ದಾರೆ. ಅಲೆನ್, ಕಿವೀಸ್ ಪರ 23 ಟಿ20 ಪಂದ್ಯಗಳನ್ನಾಡಿ 2 ಅರ್ಧಶತಕ ಹಾಗೂ ಒಂದು ಶತಕ ಸಹಿತ 564 ರನ್ ಬಾರಿಸಿದ್ದಾರೆ. ಇನ್ನು 8 ಏಕದಿನ ಪಂದ್ಯಗಳಿಂದ 308 ರನ್ ಬಾರಿಸಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿಯು ನವೆಂಬರ್ 18, 20, 22ರಂದು ನಡೆಯಲಿವೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ 25, 27 ಹಾಗೂ 30ರಂದು ನಡೆಯಲಿವೆ.

ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ:

ಕೇನ್ ವಿಲಿಯಮ್ಸನ್, ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೆವೊನ್ ಕಾನ್‌ವೇ(ವಿಕೆಟ್ ಕೀಪರ್), ಲಾಕಿ ಫರ್ಗ್ಯೂಸನ್, ಡೇರಲ್ ಮಿಚೆಲ್, ಆಡಂ ಮಿಲ್ನೆ, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೈರ್ ಟಿಕ್ನರ್.

ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ:

ಕೇನ್ ವಿಲಿಯಮ್ಸನ್(ನಾಯಕ), ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೆವೊನ್ ಕಾನ್‌ವೇ, ಲಾಕಿ ಫರ್ಗ್ಯೂಸನ್, ಡೇರಲ್ ಮಿಚೆಲ್, ಆಡಂ ಮಿಲ್ನೆ, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟಾಮ್ ಲೇಥಮ್(ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ.