ಋತುರಾಜ್ ಗಾಯಕ್ವಾಡ್ ಮದುವೆಯಾಗಿದ್ದರಿಂದ ಕ್ರಿಕೆಟ್ ಬದುಕು ಹಾಳಾಗುತ್ತಾ..? ಉತ್ಕರ್ಷ ಪವಾರ್ ಹೇಳಿದ್ದೇನು?
ಕಳೆದ ಜೂನ್ 03ರಂದು ಋತುರಾಜ್ ಗಾಯಕ್ವಾಡ್ ಕೈಹಿಡಿದ ಉತ್ಕರ್ಷ ಪವಾರ್
ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತ ತಂಡದ ನಾಯಕರಾಗಿ ನೇಮಕವಾಗಿರುವ ಗಾಯಕ್ವಾಡ್
ಕಥಕ್ ನೃತ್ಯ ಬಿಟ್ಟು ಕ್ರಿಕೆಟರ್ ಆಗಿ ಬದಲಾದ ಉತ್ಕರ್ಷ ಪವಾರ್
ಮುಂಬೈ(ಆ.09): 24 ವರ್ಷದ ಮಹಾರಾಷ್ಟ್ರ ಮಹಿಳಾ ಕ್ರಿಕೆಟ್ ತಂಡದ ವೇಗಿ ಉತ್ಕರ್ಷ ಪವಾರ್ ಇತ್ತೀಚೆಗಷ್ಟೇ ಭಾರತ ಪುರುಷರ ಕ್ರಿಕೆಟ್ ತಂಡದ ಸದಸ್ಯ ಋತುರಾಜ್ ಗಾಯಕ್ವಾಡ್ ಅವರನ್ನು ಮದುವೆಯಾಗಿದ್ದಾರೆ. ಇದೀಗ ಸಣ್ಣ ವಯಸ್ಸಿಗೆ ಮದುವೆಯಾಗಿದ್ದು, ತಮ್ಮ ಕ್ರಿಕೆಟ್ ವೃತ್ತಿಬದುಕಿಗೆ ಹಿನ್ನಡೆಯಾಗುತ್ತಾ ಎನ್ನುವ ಕುತೂಹಲಕ್ಕೆ ಉತ್ಕರ್ಷ ಪವಾರ್ ತೆರೆ ಎಳೆದಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉತ್ಕರ್ಷ ಪವಾರ್, "ನನಗೆ ಎಲ್ಲಿಯವರೆಗೆ ಕ್ರಿಕೆಟ್ ಆಡಲು ನನ್ನ ದೇಹ ಸ್ಪಂದಿಸುತ್ತದೆಯೋ ಅಲ್ಲಿಯವರೆಗೆ ಈ ಕ್ರೀಡೆಯಲ್ಲಿ ಮುಂದುವರೆಯಲು ನಾನು ಬಯಸಿದ್ದೇನೆ. ಇದಂತೂ ಕೇವಲ 100% ಅಲ್ಲ 200% ಸತ್ಯ ಎಂದು ಮರಾಠಿ ಕ್ರಿಕೆಟ್ ಪಾಡ್‌ಕಾಸ್ಟ್ 'ಕಾಫಿ, ಕ್ರಿಕೆಟ್ ಆನಿ ಬಾರಚ್ ಕಾಹಿ'ಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕಳೆದ ಜೂನ್ 03ರಂದು ಮಹಾರಾಷ್ಟ್ರ ಮಹಿಳಾ ಕ್ರಿಕೆಟರ್ ಉತ್ಕರ್ಷ ಪವಾರ್ ಅವರೊಂದಿಗೆ ಪುಣೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಾದ ಬಳಿಕ ಗಾಯಕ್ವಾಡ್ ಅವರಿಗೆ ಅದೃಷ್ಟ ಖುಲಾಯಿಸಿದ್ದು, ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಗಾಯಕ್ವಾಡ್ ಕೈಹಿಡಿದ ಬಳಿಕ ಉತ್ಕರ್ಷ ಪವಾರ್ ಕೂಡಾ ಲೈಮ್ ಲೈಟ್‌ಗೆ ಬಂದಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ತಂಡದ ಪರ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 39 ಪಂದ್ಯಗಳನ್ನಾಡಿ 28 ವಿಕೆಟ್ ಕಬಳಿಸಿರುವ ಉತ್ಕರ್ಷ ಪವಾರ್, 45 ಟಿ20 ಪಂದ್ಯಗಳಿಂದ 26 ಬಲಿ ಪಡೆದಿದ್ದಾರೆ. ಉತ್ಕರ್ಷ ಪವಾರ್ 2015-16ರಲ್ಲಿ ಮಹಾರಾಷ್ಟ್ರ ಪರ ಇಂಟರ್ ಸ್ಟೇಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
"ನಾನು ಮದುವೆಯಾದ ಬಳಿಕ ಎಲ್ಲರೂ ಪದೇ ಪದೇ ನನ್ನ ಕ್ರಿಕೆಟ್ ಭವಿಷ್ಯದ ಬಗ್ಗೆ ಕೇಳುತ್ತಲೇ ಇದ್ದಾರೆ. ನನ್ನ ಕುಟುಂಬದವರು ಹೀಗೆ ಕೇಳುತ್ತಿಲ್ಲ. ಆದರೆ ಹೊರಗಿನರುವ ಈ ಕುರಿತು ಕೇಳುತ್ತಿದ್ದಾರೆ. ನಮ್ಮ ಕುಟುಂಬದವರು ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅದೇ ರೀತಿ ಋತುರಾಜ್ ಕುಟುಂಬ ಕೂಡಾ ಸಪೋರ್ಟಿವ್ ಆಗಿದೆ. ಹಾಗೆಯೇ ನಮ್ಮ ಸಂಬಂಧಿಕರು ತುಂಬಾ ಸಪೋರ್ಟಿವ್ ಆಗಿದ್ದಾರೆ. ಆದರೆ ಪ್ರಶ್ನೆಗಳು ಕೇಳಿ ಬರುತ್ತಿರುವುದು ಹೊರಗಿನವರಿಂದ ಎಂದು ಉತ್ಕರ್ಷ ಪವಾರ್ ಹೇಳಿದ್ದಾರೆ.
ಸೂರ್ಯನಬ್ಬರಕ್ಕೆ ಕರಗಿದ ವೆಸ್ಟ್ ಇಂಡೀಸ್; ಟೀಂ ಇಂಡಿಯಾಗೆ ಮೊದಲ ಟಿ20 ಗೆಲುವು..!
"ಎಲ್ಲಿಯವರಗೆ ನಾನು ಕ್ರಿಕೆಟ್ ಆಡಲು ಬಯಸುತ್ತೇನೆಯೋ ಅಲ್ಲಿಯವರೆಗೆ ಕ್ರಿಕೆಟ್ ಆಡಲು ನನ್ನ ಪೋಷಕರಿಂದ, ಪತಿ ಋತುರಾಜ್ ಗಾಯಕ್ವಾಡ್ ಹಾಗೂ ನನ್ನ ಸಂಬಂಧಿಕರಿಂದ ಉತ್ತಮ ಬೆಂಬಲವಿದೆ
ಕಥಕ್ ನೃತ್ಯ ಬಿಟ್ಟು ಕ್ರಿಕೆಟರ್ ಆಗಿ ಬದಲಾದ ಉತ್ಕರ್ಷ ಪವಾರ್:
"ನಾನು ಚಿಕ್ಕವಳಿದ್ದಾಗ, ನಾನು ಜಹೀರ್ ಖಾನ್ ಅವರನ್ನು ಫಾಲೋ ಮಾಡುತ್ತಿದ್ದೆ. ನಾನು ಅವರಂತೆ ವೇಗವಾಗಿ ವೇಗವಾಗಿ ಓಡಿ ಬಂದು ಬೌಲಿಂಗ್ ಮಾಡುವುದನ್ನು ಅನುಕರಿಸಲು ಆರಂಭಿಸಿದೆ. ನನ್ನ ಹಾಗೂ ಅವರ ನಡುವೆ ಕೊಂಚ ವ್ಯತ್ಯಾಸವಿದೆ. ಅವರು ಎಡಗೈ ಬೌಲರ್ ಮತ್ತು ನಾನು ಬಲಗೈ ಬ್ಯಾಟರ್ ಎಂದು ಉತ್ಕರ್ಷ ಪವಾರ್ ಹೇಳಿದ್ದಾರೆ. ಆರಂಭದಲ್ಲಿ ಕಥಕ್ ಕಲಿಯುತ್ತಿದ್ದ ಉತ್ಕರ್ಷ ಪವಾರ್, ತಮ್ಮ ಗುರುವಿನ ಸಲಹೆಯ ಮೇರೆಗೆ ಕಥಕ್ ಬಿಟ್ಟು ಕ್ರಿಕೆಟ್ ನತ್ತ ಗಮನ ಹರಿಸಿದರು.