ಕೊನೆಯ ಕ್ಷಣದಲ್ಲಿ ಗೇಮ್ ಚೇಂಜರ್ ಆಟಗಾರನನ್ನು ಕರೆ ತಂದ ಆಸೀಸ್, 6ನೇ ವಿಶ್ವಕಪ್ ಗೆಲ್ಲಲು ಕಾಂಗರೂ ಪಡೆ ರೆಡಿ..!
ಆಸ್ಟ್ರೇಲಿಯಾ ತಂಡದಲ್ಲಿ ತಾರಾ ಆಟಗಾರರ ದಂಡೇ ಇದ್ದು, ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಅವರಂತಹ ಆಟಗಾರರಿದ್ದಾರೆ. ವಿಕೆಟ್ ಕೀಪರ್ ರೂಪದಲ್ಲಿ ಅಲೆಕ್ಸ್ ಕ್ಯಾರಿ ಹಾಗೂ ಜೋಶ್ ಇಂಗ್ಲಿಶ್ ಸ್ಥಾನ ಪಡೆದಿದ್ದಾರೆ.
ಮೆಲ್ಬರ್ನ್(ಸೆ.29):ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವು 15 ಆಟಗಾರರನ್ನೊಳಗೊಂಡ ಬಲಿಷ್ಠ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಗೇಮ್ ಚೇಂಜರ್ ಮಾರ್ನಸ್ ಲಬುಶೇನ್ ತಂಡಕ್ಕೆ ಎಂಟ್ರಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು ವಿಶ್ವಕಪ್ ಟೂರ್ನಿಗೆ ಪ್ರಕಟಿಸಿದ 15 ಆಟಗಾರರ ಆಸ್ಟ್ರೇಲಿಯಾ ತಂಡದಲ್ಲಿ ಮಾರ್ನಸ್ ಲಬುಶೇನ್‌ಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಹಾಗೂ ಭಾರತ ಎದುರಿನ ಸರಣಿಯಲ್ಲಿ ಮಾರ್ನಸ್ ಲಬುಶೇನ್ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದರು. ಇನ್ನು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಆಸ್ಟನ್ ಏಗಾರ್, ಗಾಯಗೊಂಡು ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟ್ರಾವಿಸ್ ಹೆಡ್, ವಿಶ್ವಕಪ್ ಟೂರ್ನಿಗೆ ಕಾಂಗರೂ ಪಡೆಯಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿನಿಂದ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯಗಳು; ಮೊದಲ ದಿನವೇ 3 ಪ್ರಾಕ್ಟೀಸ್ ಮ್ಯಾಚ್
ಆಸ್ಟನ್ ಏಗಾರ್, ಇದೀಗ ಆಸೀಸ್ ತಂಡದಿಂದ ಹೊರಬಿದ್ದಿರುವುದರಿಂದ, ಇದೀಗ ಆಡಂ ಜಂಪಾ ವಿಶ್ವಕಪ್ ಟೂರ್ನಿಗೆ ಕಾಂಗರೂ ಪಡೆಯಲ್ಲಿ ಸ್ಥಾನ ಪಡೆದ ಏಕೈಕ ತಜ್ಞ ಸ್ಪಿನ್ನರ್ ಎನಿಸಿದ್ದಾರೆ. ಇನ್ನು ಭಾರತ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 40 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಸ್ಪಿನ್ ವಿಭಾಗದಲ್ಲಿ ಜಂಪಾಗೆ ಮ್ಯಾಕ್ಸ್‌ವೆಲ್ ಸಾಥ್ ನೀಡುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ತಂಡದಲ್ಲಿ ತಾರಾ ಆಟಗಾರರ ದಂಡೇ ಇದ್ದು, ಬ್ಯಾಟಿಂಗ್ ವಿಭಾಗದಲ್ಲಿ ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಅವರಂತಹ ಆಟಗಾರರಿದ್ದಾರೆ. ವಿಕೆಟ್ ಕೀಪರ್ ರೂಪದಲ್ಲಿ ಅಲೆಕ್ಸ್ ಕ್ಯಾರಿ ಹಾಗೂ ಜೋಶ್ ಇಂಗ್ಲಿಶ್ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್, ಕ್ಯಾಮರೋನ್ ಗ್ರೀನ್ ಹಾಗೂ ಮಾರ್ಕಸ್ ಸ್ಟೋನಿಸ್ ಸ್ಥಾನ ಪಡೆದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ಶಾನ್ ಅಬೋಟ್, ನಾಯಕ ಪ್ಯಾಟ್ ಕಮಿನ್ಸ್ ಮಿಂಚಲು ಸಜ್ಜಾಗಿದ್ದಾರೆ. ಬಲಾಢ್ಯ ಆಸ್ಟ್ರೇಲಿಯಾ ತಂಡವು ಅಕ್ಟೋಬರ್ 08ರಂದು ಆತಿಥೇಯ ಭಾರತ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಅಶ್ವಿನ್ ಇನ್, ಅಕ್ಸರ್ ಪಟೇಲ್ ಔಟ್, ವಿಶ್ವಕಪ್ ಟೂರ್ನಿಗೆ ಅಂತಿಮ ತಂಡ ಪ್ರಕಟ!
ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಪ್ಯಾಟ್ ಕಮಿನ್ಸ್(ನಾಯಕ), ಶಾನ್ ಅಬೋಟ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಶ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆಡಂ ಜಂಪಾ.