Asianet Suvarna News Asianet Suvarna News

T20 World Cup ಗೆಲ್ಲದ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ; ಹಿರಿಯರಿಗೆ ಗೇಟ್‌ಪಾಸ್?

ಟಿ20 ವಿಶ್ವಕಪ್ ಫೈನಲ್‌ಗೇರಲು ಭಾರತ ಕ್ರಿಕೆಟ್ ತಂಡ ವಿಫಲ
ಸೆಮೀಸ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಹೀನಾಯ ಸೋಲು
ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಹಲವು ಹಿರಿಯ ಕ್ರಿಕೆಟಿಗರಿಗೆ ಗೇಟ್‌ಪಾಸ್

Many Indian senior players will not play T20I format new year Says source kvn
Author
First Published Nov 11, 2022, 4:21 PM IST

ಬೆಂಗಳೂರು(ನ.11): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಇದರ ಬೆನ್ನಲ್ಲೇ  ಮುಂಬರುವ 24 ತಿಂಗಳುಗಳಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಮೇಜರ್‌ ಸರ್ಜರಿಯಾಗಲಿದ್ದು, ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ ಅವರನ್ನು ಹಂತ ಹಂತವಾಗಿ ಟಿ20 ತಂಡದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಹುತೇಕ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಪಾಲಿಗೆ ಇದು ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ ಎನಿಸಿಕೊಂಡರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರಿಗೆ ಈ ಕುರಿತಂತೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿದೆ. ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಕಂಡ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಕಣ್ಣೀರಿಟ್ಟಿದ್ದರು. ಆಗ ತಂಡದ ಹೆಡ್‌ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಅವರನ್ನು ಸಮಾಧಾನ ಪಡೆಸಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಎರಡು ವರ್ಷಗಳ ಸಮಯಾವಕಾಶವಿದೆ. ಹೀಗಾಗಿ ಬಿಸಿಸಿಐ ಹೊಸದಾಗಿ ತಂಡ ಕಟ್ಟುವ ಆಲೋಚನೆಯಲ್ಲಿದ್ದು, ಟಿ20 ತಂಡಕ್ಕೆ ನಾಯಕನಾಗಿ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಮಣೆಹಾಕುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ''ಬಿಸಿಸಿಐ ಯಾವೊಬ್ಬ ಆಟಗಾರನಿಗೂ ನಿವೃತ್ತಿ ನೀಡಿ ಹೊರಡಿ ಎಂದು ಹೇಳುವುದಿಲ್ಲ. ಇದು ಅವರ ವೈಯುಕ್ತಿಕ ನಿರ್ಧಾರಕ್ಕೆ ಸಂಬಂಧಿಸಿದ್ದು. ಆದರೆ 2023ರಲ್ಲಿ ಭಾರತ ತಂಡವು ಕೆಲವೇ ಕೆಲವು ಟಿ20 ಪಂದ್ಯಗಳನ್ನು ಆಡಲಿದೆ. ಬಹುತೇಕ ಹಿರಿಯ ಆಟಗಾರರು ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನಷ್ಟೇ ಆಡಲಿದ್ದಾರೆ" ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ ಎಂದು ವರದಿಯಾಗಿದೆ.

ಸೋಲಿನ ಆಘಾತಕ್ಕೆ ಕಣ್ಣೀರಿಟ್ಟ ನಾಯಕ ರೋಹಿತ್, ಸಮಾಧಾನ ಪಡಿಸಿದ ದ್ರಾವಿಡ್!

ನಿಮಗೆ ಇಷ್ಟವಿಲ್ಲ ಎಂದಾದರೇ ನೀವು ಯಾರೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವ ಅಗತ್ಯವಿಲ್ಲ. ಆದರೆ ಮುಂದಿನ ವರ್ಷ ಬಹುತೇಕ ಹಿರಿಯ ಆಟಗಾರರು ಟಿ20 ಪಂದ್ಯಗಳನ್ನು ಆಡುವುದನ್ನು ನೋಡಲು ನಿಮಗೆ ಸಿಗುವುದಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಇನ್ನು ಇಂಗ್ಲೆಂಡ್ ಎದುರಿನ ಸೆಮಿಫೈನಲ್ ಸೋಲಿನ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ತಂಡದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಈಗಲೇ ಮಾತನಾಡುವುದು ಅಷ್ಟು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

2023ರ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲೇ ನಡೆಯುವುದರಿಂದ ಟೀಂ ಇಂಡಿಯಾ ಹೆಚ್ಚಿನ ಸಂಖ್ಯೆಯ ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ಈಗಿರುವ ವೇಳಾಪಟ್ಟಿಯಂತೆ 2023ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಕ್ರಿಕೆಟ್ ತಂಡವು ಕೇವಲ 12 ಟಿ20 ಪಂದ್ಯಗಳನ್ನಷ್ಟೇ ಆಡಲಿದೆ.
 

Follow Us:
Download App:
  • android
  • ios