ಮೈಸೂರಿನಲ್ಲಿ 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ ಆರಂಭವಾಗಲಿದೆ. 6 ತಂಡಗಳು ಭಾಗವಹಿಸಲಿದ್ದು, ಒಟ್ಟು 34 ಪಂದ್ಯಗಳು ನಡೆಯಲಿವೆ.  

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುವ 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ಗೆ ಸೋಮವಾರ ಚಾಲನೆ ಸಿಗಲಿದೆ. ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು, ಆ.28ರ ವರೆಗೆ ಒಟ್ಟು 34 ಪಂದ್ಯಗಳು ನಡೆಯಲಿವೆ. ಸೋಮವಾರ ಉದ್ಘಾಟನಾ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್ ಮುಖಾಮುಖಿಯಾಗಲಿವೆ. 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮೈಸೂರು ವಾರಿಯರ್ಸ್‌ಗೆ ಬೆಂಗಳೂರು ಬ್ಲಾಸ್ಟರ್ಸ್‌ ಸವಾಲು ಎದುರಾಗಲಿದೆ. ಲೀಗ್‌ ಹಂತ ಆ.25ಕ್ಕೆ ಕೊನೆಗೊಳ್ಳಲಿದ್ದು, ಅಗ್ರ-4 ತಂಡ ಸೆಮಿಫೈನಲ್‌ಗೇರಲಿವೆ. ಪ್ರತಿದಿನ ಮೊದಲ ಪಂದ್ಯ ಮಧ್ಯಾಹ್ನ 3.15ಕ್ಕೆ, 2ನೇ ಪಂದ್ಯ 7.15ಕ್ಕೆ ಆರಂಭವಾಗಲಿದೆ.

ಪಂದ್ಯಗಳ ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಫ್ಯಾನ್‌ಕೋಡ್‌

ಹುಬ್ಬಳ್ಳಿಗೆ ಮಹಾರಾಣಿಯ ಪಟ್ಟ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿದ ಚೊಚ್ಚಲ ಆವೃತ್ತಿಯ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಟಿ20 ಲೀಗ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ಚಾಂಪಿಯನ್‌ ಆಗಿದೆ. ನಗರದ ಹೊರವಲಯದ ಆಲೂರಿನಲ್ಲಿ ನಡೆದ ಫೈನಲ್‌ನಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಹುಬ್ಬಳ್ಳಿ 11 ರನ್‌ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 19.5 ಓವರ್‌ಗಳಲ್ಲಿ 107 ರನ್‌ಗೆ ಆಲೌಟಾಯಿತು. ಮೊನಿಕಾ 23, ತೇಜಸ್ವಿನಿ 22 ರನ್‌ ಗಳಿಸಿದರು. ಪೂಜಾ ಕುಮಾರಿ 4 ವಿಕೆಟ್‌ ಕಿತ್ತರು. ಸುಲಭ ಗುರಿ ಸಿಕ್ಕರೂ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾದ ಮೈಸೂರು 7 ವಿಕೆಟ್‌ಗೆ 96 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಶಿಶಿರಾ ಗೌಡ 41 ರನ್‌ ಗಳಿಸಿದರು. ಪ್ರಿಯಾ 4 ಓವರಲ್ಲಿ 10 ರನ್‌ಗೆ 3 ವಿಕೆಟ್‌ ಕಿತ್ತರು.

ಲಖನೌ ಫೋಟೋ ಅಲ್ಬಂನಲ್ಲಿ ಕೆ.ಎಲ್‌.ರಾಹುಲ್‌ ಇಲ್ಲ: ಟೀಕೆ

ನವದೆಹಲಿ: ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಭಾರತ 2-2 ಡ್ರಾ ಸಾಧಿಸಿದ ಹಿನ್ನೆಲೆಯಲ್ಲಿ ಐಪಿಎಲ್‌ನ ಲಖನೌ ಫ್ರಾಂಚೈಸಿಯು ಟೀಂ ಇಂಡಿಯಾ ಆಟಗಾರರ ಫೋಟೋ ಅಲ್ಬಂ ರಚಿಸಿದೆ. ಸರಣಿಯ 13 ಅತ್ಯುತ್ತಮ ಕ್ಷಣಗಳ ಚಿತ್ರಗಳು ಈ ಅಲ್ಬಮ್‌ನಲ್ಲಿದ್ದು, ಇದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ. 

ಆದರೆ ಸರಣಿಯಲ್ಲಿ 3ನೇ ಗರಿಷ್ಠ ರನ್‌ ಸರದಾರರಾಗಿರುವ ಕೆ.ಎಲ್‌.ರಾಹುಲ್‌ರ ಚಿತ್ರ ಅಲ್ಬಮ್‌ನಲ್ಲಿಲ್ಲ. ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಲಖನೌ ತಂಡದಲ್ಲಿದ್ದಾಗ ಮಾಲೀಕ ಸಂಜೀವ್‌ ಗೋಯೆಂಕಾ ಮೈದಾನದಲ್ಲೇ ಬಹಿರಂಗವಾಗಿ ಟೀಕಿಸಿದ್ದರು. ಕಳೆದ ವರ್ಷ ರಾಹುಲ್‌ ಲಖನೌ ತೊರೆದಿದ್ದರು. ಇದೇ ಕಾರಣಕ್ಕೆ ರಾಹುಲ್‌ರ ಚಿತ್ರವನ್ನು ಅಲ್ಬಮ್‌ನಲ್ಲಿ ಹಾಕಿಲ್ಲ ಎಂದು ಹಲವರು ಟೀಕಿಸಿದ್ದಾರೆ.

ವಯೋವಂಚನೆ ತಡೆವ ಸಂಹಿತೆಗೆ ಶೀಘ್ರವೇ ಸಂಪುಟ ಅನುಮೋದನೆ

ನವದೆಹಲಿ: ಕ್ರೀಡೆಗಳಲ್ಲಿ ವಯಸ್ಸಿನ ವಂಚನೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೂ ಕ್ರೀಡಾಪಟುವಿನ ವಯಸ್ಸನ್ನು ನಿಖರವಾಗಿ ನಿರ್ಧರಿಸಲು ಎಐ ಆಧಾರಿತ ಮೂಳೆ ಮೌಲ್ಯಮಾಪನ ನಡೆಸುವ ‘ಕ್ರೀಡೆಗಳಲ್ಲಿ ವಯೋವಂಚನೆ ವಿರುದ್ಧ ರಾಷ್ಟ್ರೀಯ ಸಂಹಿತೆ’(ಎನ್‌ಸಿಎಎಎಫ್‌ಎಸ್‌) ಕರಡು ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಸಂಪುಟದಲ್ಲಿ ಅನುಮೋದನೆ ಸಿಗಲಿದೆ. ಸಂಹಿತೆ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಆನ್‌ಲೈನ್‌ ಮೂಲಕ ಮಾಹಿತಿ ನೀಡಲಾಗಿತ್ತು. 

ಕ್ರೀಡಾ ಸಚಿವಾಲಯದ ಪ್ರಕಾರ, ಸದ್ಯ ಕರಡು ಪ್ರಕ್ರಿಯೆ ಪೂರ್ಣಗೊಂಡಿದೆ. ‘15 ವರ್ಷಗಳ ಬಳಿಕ ಪರಿಷ್ಕರಣೆಗೊಂಡಿರುವ ಕರಡು ನೀತಿಯನ್ನು ಮುಂದಿನ ವಾರ ಸಂಪುಟಕ್ಕೆ ಕಳುಹಿಸಲಾಗಿತ್ತದೆ. ಇದು ಸಂಹಿತೆ ಆಗಿರುವುದರಿಂದ ಕ್ಯಾಬಿನೆಟ್‌ನಲ್ಲಿ ಅನಮೋದನೆ ಲಭಿಸಿದರೆ ಸಾಕಾಗುತ್ತದೆ’ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.