ಮಹಾರಾಜ ಟ್ರೋಫಿ ಟಿ20 ಲೀಗ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಆಲೂರು ಅಥವಾ ಮೈಸೂರಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಕೆಎಸ್‌ಸಿಎ 2-3 ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುವ ಭೀತಿಯಿದೆ. ಈ ಬಗ್ಗೆ 2-3 ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಟೂರ್ನಿ ಆ.11ರಿಂದ 27ರವರೆಗೆ ನಡೆಯಬೇಕಿದೆ. ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಲೀಗ್ ಆಯೋಜಿಸಲು ಕೆಎಸ್‌ಸಿಎ ನಿರ್ಧರಿಸಿತ್ತು. ಆದರೆ ಪೊಲೀಸ್ ಇಲಾಖೆ ಇನ್ನೂ ಟೂರ್ನಿಗೆ ಅನುಮತಿ ನೀಡಿಲ್ಲ. ಹೀಗಾಗಿ ಟೂರ್ನಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಬದಲು ಬೆಂಗಳೂರು ಹೊರವಲಯದ ಆಲೂರು ಅಥವಾ ಮೈಸೂರಿನ ಕ್ರೀಡಾಂಗಣದಲ್ಲಿ ಆಯೋಜಿಸಲು ಕೆಎಸ್‌ಸಿಎ ಚಿಂತನೆ ನಡೆಸುತ್ತಿದೆ.
ಜೂನ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕ್ರೀಡಾಂಗಣ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಇತ್ತೀಚೆಗೆ ಇದರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗ, ಕ್ರೀಡಾಂಗಣವು ದೊಡ್ಡ ಪಂದ್ಯಗಳನ್ನು ಆಯೋಜಿಸಲು ಸೂಕ್ತವಲ್ಲ ಎಂದಿತ್ತು. ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಲೀಗ್ ಆಯೋಜನೆಗೆ ಅಗತ್ಯವಿರುವ ಅನುಮತಿಯನ್ನು ಪೊಲೀಸ್ ಇಲಾಖೆ ಇನ್ನೂ ನೀಡಿಲ್ಲ. 2-3 ದಿನಗಳಲ್ಲಿ ಇಲಾಖೆಯು ಅಧಿಕೃತ ಮಾಹಿತಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಲೀಗ್‌ಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಹೀಗಾಗಿ ಬೆಂಗಳೂರು ಬದಲು ಮೈಸೂರು ಅಥವಾ ಆಲೂರಿನಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಚರ್ಚೆಯಾಗುತ್ತಿದೆ. ಶನಿವಾರ ಕೆಎಸ್‌ಸಿಎ ಸಭೆ ಕರೆದಿದೆ. 2-3 ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬಹುದು.
- ಫ್ರಾಂಚೈಸಿಯೊಂದರ ಮಾಲೀಕರು
ಬೆಂಗಳೂರಿನಲ್ಲಿ ದೇಶದ 7 ಯುವ ವೇಗಿಗಳಿಗೆ ಶಿಬಿರ: ಕನ್ನಡಿಗ ವೈಶಾಖ್ ಭಾಗಿ
ಬೆಂಗಳೂರು: ಭಾರತ ತಂಡದಲ್ಲಿರುವ ವೇಗದ ಬೌಲರ್‌ಗಳ ಫಿಟ್ನೆಸ್ ಸಮಸ್ಯೆ ಹಾಗೂ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲಿ ಆಯ್ಕೆ ಸಮಿತಿಯು ಹೊಸ ಹೆಜ್ಜೆ ಇಟ್ಟಿದ್ದು, ದೇಶದ ಪ್ರತಿಭಾವಂತ ಬೌಲರ್‌ಗಳನ್ನು ಸಿದ್ಧಪಡಿಸುವ ಕೆಲಸ ಆರಂಭಿಸಿದೆ. ಇದಕ್ಕಾಗಿ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್ನೆಸ್ ಹಾಗೂ ಬೌಲಿಂಗ್ ಶಿಬಿರ ಆರಂಭಿಸಿದೆ. 2 ವಾರಗಳ ಕಾಲ ನಡೆಯಲಿರುವ ಶಿಬಿರ ಬುಧವಾರ ಆರಂಭಗೊಂಡಿದ್ದು, ಕರ್ನಾಟಕದ ವಿಜಯ್‌ಕುಮಾರ್ ವೈಶಾಖ್ ಕೂಡಾ ಭಾಗಿಯಾಗಿದ್ದಾರೆ.
ಉಳಿದಂತೆ ಖಲೀಲ್ ಅಹ್ಮದ್, ತುಷಾರ್ ದೇಶಪಾಂಡೆ, ಯಶ್ ಠಾಕೂರ್, ರಾಜ್ ಅಂಗಡ್ ಬಾವಾ, ಯುಧ್‌ವೀರ್ ಸಿಂಗ್ ಕೂಡಾ ಇದ್ದಾರೆ. ಸದ್ಯ ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿರುವ ಅನ್ಶುಲ್ ಕಂಬೋಜ್‌ಗೂ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದ್ದು, ಸರಣಿ ಕೊನೆಗೊಂಡ ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ ರಾಹುಲ್‌ಗೆ ಕೆಕೆಆರ್ ಗಾಳ?
ಮುಂಬೈ: 18ನೇ ಆವೃತ್ತಿಯ ಐಪಿಎಲ್ ಮುಕ್ತಾಯ ಬೆನ್ನಲ್ಲೇ ತಂಡಗಳು ಮುಂದಿನ ಆವೃತ್ತಿಯತ್ತ ಚಿತ್ತ ಹರಿಸಿದ್ದು, ಕಳೆದ ವರ್ಷ ಹೀನಾಯ ಸೋಲು ಕಂಡಿದ್ದ ಕೋಲ್ಕತಾ ಈ ಬಾರಿ ಕನ್ನಡಿಗ ಕೆ.ಎಲ್.ರಾಹುಲ್‌ರನ್ನು ತಂಡಕ್ಕೆ ಕರೆತಂದು, ನಾಯಕತ್ವದ ಹೊಣೆ ನೀಡಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ರಾಹುಲ್ ಉತ್ತಮ ಆಟ ಪ್ರದರ್ಶಿಸಿದ್ದರು. ಹೀಗಾಗಿ ರಾಹುಲ್‌ಗೆ ಗಾಳ ಹಾಕಲು ಕೆಕೆಆರ್ ಮುಂದಾಗಿದೆ. ಆದರೆ ರಾಹುಲ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾದರೆ ಅದು ಹರಾಜಿಗೆ ಮುನ್ನವೇ ಆಗಬೇಕು. ಹೀಗೆ ಮಾಡಬೇಕಾದರೆ ಕೋಲ್ಕತಾ ತಂಡ ಡೆಲ್ಲಿಗೆ ರಾಹುಲ್ ಪ್ರತಿಯಾಗಿ ಇನ್ನೊಬ್ಬ ಆಟಗಾರನನ್ನು ನೀಡಬೇಕು. ಆದರೆ ವಿನಿಮಯಕ್ಕೆ ಸೂಕ್ತ ಆಟಗಾರರು ಲಭ್ಯವಿಲ್ಲದ ಕಾರಣ ಕೆಕೆಆರ್ ಚಿಂತನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.
