ನಿರ್ಣಾಯಕ ಘಟ್ಟದತ್ತ ಮಹಾರಾಜ ಟಿ20 ಟ್ರೋಫಿಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿಂದು ಮೈಸೂರು-ಗುಲ್ಬರ್ಗಾ ಫೈಟ್ಈಗಾಗಲೇ ಫೈನಲ್‌ಗೆ ಲಗ್ಗೆಯಿಟ್ಟಿರುವ ಬೆಂಗಳೂರು ಬ್ಲಾಸ್ಟರ್ಸ್

ಬೆಂಗಳೂರು(ಆ.25): ಚೊಚ್ಚಲ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಕ್ವಾಲಿಫೈಯರ್‌-2 ಗುರುವಾರ ನಡೆಯಲಿದ್ದು, ಮೈಸೂರು ವಾರಿಯ​ರ್ಸ್‌ ಹಾಗೂ ಗುಲ್ಬರ್ಗಾ ಮೈಸ್ಟಿಕ್ಸ್‌ ಸೆಣಸಾಡಲಿದೆ. ಗೆಲ್ಲುವ ತಂಡ ಶುಕ್ರವಾರ ಬೆಂಗಳೂರು ಬ್ಲಾಸ್ಟ​ರ್ಸ್‌ ವಿರುದ್ಧ ಫೈನಲ್‌ನಲ್ಲಿ ಚೊಚ್ಚಲ ಪ್ರಶಸ್ತಿಗಾಗಿ ಕಾದಾಡಲಿದೆ.

ಮನೀಶ್‌ ಪಾಂಡೆ ನಾಯಕತ್ವದ ಗುಲ್ಬರ್ಗಾ ಲೀಗ್‌ ಹಂತದಲ್ಲಿ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿತ್ತು. ಬಳಿಕ ಕ್ವಾಲಿಫೈಯರ್‌ 1ರಲ್ಲಿ ಬೆಂಗಳೂರು ವಿರುದ್ಧ ಸೋತಿದ್ದ ತಂಡಕ್ಕೆ ಫೈನಲ್‌ಗೇರಲು ಮತ್ತೊಂದು ಅವಕಾಶ ಲಭಿಸಿದೆ. ಮತ್ತೊಂದೆಡೆ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 3ನೇ ಸ್ಥಾನಿಯಾಗಿದ್ದ ಕರುಣ್‌ ನಾಯರ್‌ ನಾಯಕತ್ವದ ಮೈಸೂರು ಎಲಿಮಿನೇಟರ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗ​ರ್ಸ್‌ ವಿರುದ್ಧ 5 ವಿಕೆಟ್‌ ಗೆಲುವು ಸಾಧಿಸಿ ಕ್ವಾಲಿಫೈಯರ್‌ 2ಗೇರಿತ್ತು.

ಬೆಂಗಳೂರು ಫೈನಲ್‌ಗೆ

ಮಂಗಳವಾರ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಬೆಂಗಳೂರು ತಂಡ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡದ ವಿರುದ್ಧ 44 ರನ್‌ಗಳ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತು. ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 20 ಓವರಲ್ಲಿ 3 ವಿಕೆಟ್‌ಗೆ 227 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ನಾಯಕ ಮಯಾಂಕ್‌ 61 ಎಸೆತಗಳಲ್ಲಿ 112 ರನ್‌ ಸಿಡಿಸಿದರೆ, ಎಲ್‌.ಆರ್‌.ಚೇತನ್‌ 80 ರನ್‌ ಚಚ್ಚಿದರು. ದೊಡ್ಡ ಮೊತ್ತ ಬೆನ್ನತ್ತಿದ ಗುಲ್ಬರ್ಗಾ ರೋಹನ್‌ ಪಾಟೀಲ್‌ರ ಸ್ಫೋಟಕ ಶತಕ(49 ಎಸೆತಗಳಲ್ಲಿ 108 ರನ್‌)ದ ಹೊರತಾಗಿಯೂ 18.2 ಓವರಲ್ಲಿ 183 ರನ್‌ಗೆ ಆಲೌಟ್‌ ಆಯಿತು.

ನ್ಯೂಜಿಲೆಂಡ್‌ ‘ಎ’ ಸರಣಿಗೆ ಪ್ರಿಯಾಂಕ್‌ ಭಾರತದ ನಾಯಕ

ನವದೆಹಲಿ: ಸೆ.1ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್‌ ‘ಎ’ ವಿರುದ್ಧದ 4 ದಿನಗಳ 3 ಪಂದ್ಯಗಳ ಸರಣಿಗೆ ಭಾರತ ‘ಎ’ ತಂಡಕ್ಕೆ ಪ್ರಿಯಾಂಕ್‌ ಪಾಂಚಾಲ್‌ ನಾಯಕನಾಗಿ ನೇಮಕಗೊಂಡಿದ್ದಾರೆ. ತಂಡದಲ್ಲಿ ಋುತುರಾಜ್‌, ಕುಲ್ದೀಪ್‌, ಪ್ರಸಿದ್‌್ಧ ಕೃಷ್ಣ, ಉಮ್ರಾನ್‌ ಮಲಿಕ್‌, ರಜತ್‌ ಪತಿದಾರ್‌, ಸರ್ಫರಾಜ್‌ ಖಾನ್‌, ಅಭಿಮನ್ಯು ಮಿಥುನ್‌, ತಿಲಕ್‌ ವರ್ಮಾ, ಯಶ್‌ ಧಯಾಳ್‌ ಸೇರಿದಂತೆ 16 ಮಂದಿ ಇದ್ದಾರೆ. ಮೊದಲ ಮತ್ತು 3ನೇ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದರೆ, 2ನೇ ಪಂದ್ಯ ಹುಬ್ಬಳ್ಳಿ ಆತಿಥ್ಯ ವಹಿಸಲಿದೆ.

ಏಕದಿನ ರ‍್ಯಾಂಕಿಂಗ್‌‌: 45 ಸ್ಥಾನ ಜಿಗಿದ ಗಿಲ್‌ ನಂ.38

ದುಬೈ: ಅಭೂತಪೂರ್ವ ಲಯದಲ್ಲಿರುವ ಭಾರತದ ಯುವ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ 45 ಸ್ಥಾನ ಜಿಗಿತ ಕಂಡಿದ್ದಾರೆ. ಜಿಂಬಾಬ್ವೆ ಏಕದಿನ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅವರು ಬುಧವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌‌ನಲ್ಲಿ 38ನೇ ಸ್ಥಾನ ತಲುಪಿದ್ದಾರೆ. 

ಸರಣಿಗೆ ವಿಶ್ರಾಂತಿ ಪಡೆದಿದ್ದ ಮಾಜಿ ನಾಯಕ ವಿರಾಟ್‌ ಕೊಹ್ಲಿ 5ನೇ ಹಾಗೂ ಖಾಯಂ ನಾಯಕ ರೋಹಿತ್‌ ಶರ್ಮಾ 6ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಶಿಖರ್‌ ಧವನ್‌ 12ನೇ ಸ್ಥಾನಕ್ಕೆ ಕುಸಿದಿದ್ದು, ಪಾಕಿಸ್ತಾನದ ಬಾಬರ್‌ ಆಜಂನ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್‌ ರ‍್ಯಾಂಕಿಂಗ್‌‌ನಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ಹಾಗೂ ಆಲ್ರೌಂಡರ್‌ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.