ಆ.10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟಿ20ಯ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಕೆಎಸ್‌ಸಿಎ ಆಯೋಜಿಸಿತ್ತು. ಈ ಕಾರ್ಯಕ್ರಮದ ವೇಳೆ ಪರದೆಯಲ್ಲಿ ಸಂಪೂರ್ಣ ಇಂಗ್ಲಿಷ್‌ ಪದ ಬಳಕೆ ಮಾಡಲಾಗಿತ್ತು. ಇಂಗ್ಲಿಷ್‌ ಅಕ್ಷರ್‌ಗಳಲ್ಲಿ ‘ಮಹಾರಾಜ ಟಿ20 ಟ್ರೋಫಿ’ ಬರೆದಿರುವ ಟ್ರೋಫಿಯನ್ನು ಅನಾವರಣಗೊಳಿಸಿ, ಸುದ್ದಿಗೋಷ್ಠಿಯನ್ನೂ ಇಂಗ್ಲಿಷ್‌ನಲ್ಲೇ ನಡೆಸಲಾಗಿತ್ತು.

ಬೆಂಗಳೂರು(ಆ.18): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಡೆಸುತ್ತಿರುವ ಮಹಾರಾಜ ಟಿ20 ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ಬಳಸದ ಕುರಿತು ಸ್ಪಷ್ಟನೆ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಂಸ್ಥೆಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ ಸೋದರ ಸಂಸ್ಥೆ ‘ಕನ್ನಡಪ್ರಭ’ದಲ್ಲಿ ಆ.11ರಂದು ಪ್ರಕಟವಾದ ‘ ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡ ಕಗ್ಗೊಲೆ’ ಎಂಬ ವರದಿ ಹಾಗೂ ಮರಿಲಿಂಗೇಗೌಡ ಮಾಲಿ ಪಾಟೀಲ್ ಎಂಬುವವರು ನೀಡಿರುವ ದೂರು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ನೋಟಿಸ್ ಜಾರಿ ಮಾಡಿದ್ದು, ‘ ಮಹಾರಾಜ ಟಿ೨೦ ಟ್ರೋಫಿ ಅನಾವರಣ ಕಾರ್ಯಕ್ರಮ ಹಾಗೂ ಸುದ್ದಿಗೋಷ್ಠಿ ಸಂಪೂರ್ಣ ಆಂಗ್ಲಮಯವಾಗಿರುವುದು ವಿಷಾದನೀಯ. ನೆಲದ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿಯೇ ಹುಟ್ಟಿ, ವ್ಯವಹಾರಿಕವಾಗಿ ಬೆಳೆದು ಕರ್ನಾಟಕದಲ್ಲಿ ಅಸ್ತಿತ್ವ ಪಡೆದುಕೊಂಡಿರುವ ತಮ್ಮ ಸಂಸ್ಥೆಯಲ್ಲಿ ಈ ರೀತಿ ಕನ್ನಡವನ್ನು ಕಡೆಗಣಿಸುತ್ತಿರುವುದು ಅಕ್ಷಮ್ಯ. ಹೀಗಾಗಿ ಪತ್ರ ತಲುಪಿದ 7 ದಿನಗಳ ಒಳಗಾಗಿ ಈ ಕುರಿತು ಸ್ಪಷ್ಟೀಕರಣ ನೀಡಿ’ ಎಂದು ಕೆಎಸ್‌ಸಿಎಗೆ ಸೂಚಿಸಿದ್ದಾರೆ.

ಭಾರತ-ಪಾಕಿಸ್ತಾನ ಏಷ್ಯಾಕಪ್ ಟಿಕೆಟ್ ಖರೀದಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಏನಾಗಿತ್ತು?

ಆ.10ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟಿ20ಯ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಕೆಎಸ್‌ಸಿಎ ಆಯೋಜಿಸಿತ್ತು. ಈ ಕಾರ್ಯಕ್ರಮದ ವೇಳೆ ಪರದೆಯಲ್ಲಿ ಸಂಪೂರ್ಣ ಇಂಗ್ಲಿಷ್‌ ಪದ ಬಳಕೆ ಮಾಡಲಾಗಿತ್ತು. ಇಂಗ್ಲಿಷ್‌ ಅಕ್ಷರ್‌ಗಳಲ್ಲಿ ‘ಮಹಾರಾಜ ಟಿ20 ಟ್ರೋಫಿ’ ಬರೆದಿರುವ ಟ್ರೋಫಿಯನ್ನು ಅನಾವರಣಗೊಳಿಸಿ, ಸುದ್ದಿಗೋಷ್ಠಿಯನ್ನೂ ಇಂಗ್ಲಿಷ್‌ನಲ್ಲೇ ನಡೆಸಲಾಗಿತ್ತು.

India vs Ireland T20: ಇಂದಿನಿಂದ ಬುಮ್ರಾ ನೇತೃತ್ವದ ಭಾರತಕ್ಕೆ ಐರ್ಲೆಂಡ್‌ ಟಿ20 ಚಾಲೆಂಜ್‌..!

ಈ ವೇಳೆ ಕನ್ನಡ ದಿನಪತ್ರಿಕೆಗಳ ಸುದ್ದಿಗಾರರು ಪ್ರಶ್ನಿಸಿದಾಗ, ಕೆಎಸ್‌ಸಿಎ ಉಪಾಧ್ಯಕ್ಷ ಹಾಗೂ ಮಹಾರಾಜ ಟ್ರೋಫಿ ಮುಖ್ಯಸ್ಥ ಬಿ.ಕೆ.ಸಂಪತ್‌ ಕುಮಾರ್‌, ‘ಇದು ಬೆಂಗಳೂರು, ಇಲ್ಲಿ ಎಲ್ಲಾ ಭಾಷೆಗಳೂ ಅಗತ್ಯ’ ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದರು. ಕೆಎಸ್‌ಸಿಎ ಕನ್ನಡ ಧೋರಣೆಯ ಬಗ್ಗೆ ‘ಕನ್ನಡಪ್ರಭ’ ಆ.11ರಂದು ‘ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡ ಕಗ್ಗೊಲೆ’ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು.

ಹುಬ್ಬಳ್ಳಿಗೆ ಸತತ 4ನೇ, ಶಿವಮೊಗ್ಗಕ್ಕೆ 3ನೇ ಜಯ!

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಸತತ 4ನೇ ಗೆಲುವು ದಾಖಲಿಸಿದೆ. ಗುರುವಾರ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ 63 ರನ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 5 ವಿಕೆಟ್‌ಗೆ 215 ರನ್‌ ಕಲೆಹಾಕಿತು. ಮನೀಶ್‌ ಪಾಂಡೆ 69, ಮೊಹಮದ್‌ ತಾಹ 52, ಶ್ರೀಜಿತ್‌ 52 ರನ್‌ ಗಳಿಸಿದರು.

ಬೃಹತ್‌ ಗುರಿ ಬೆನ್ನತ್ತಿದ ಮಂಗಳೂರು 8 ವಿಕೆಟ್‌ಗೆ 152 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ದಿನದ ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ ಶಿವಮೊಗ್ಗ 3 ವಿಕೆಟ್‌ ಜಯಗಳಿಸಿತು. ಗುಲ್ಬರ್ಗಕ್ಕಿದು ಹ್ಯಾಟ್ರಿಕ್‌ ಸೋಲು. ಗುಲ್ಬರ್ಗ ಮೊದಲು ಬ್ಯಾಟ್‌ ಮಾಡಿ 6 ವಿಕೆಟ್‌ಗೆ 175 ರನ್‌ ಗಳಿಸಿದರೆ, ದೊಡ್ಡ ಗುರಿ ಬೆನ್ನತ್ತಿದ ಶಿವಮೊಗ್ಗ 19.5 ಓವರ್‌ಗಳಲ್ಲಿ ಜಯಗಳಿಸಿತು. 39ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ ಚೇತರಿಸಿಕೊಂಡು ಪಂದ್ಯ ತನ್ನದಾಗಿಸಿಕೊಂಡಿತು.