India vs Ireland T20: ಇಂದಿನಿಂದ ಬುಮ್ರಾ ನೇತೃತ್ವದ ಭಾರತಕ್ಕೆ ಐರ್ಲೆಂಡ್ ಟಿ20 ಚಾಲೆಂಜ್..!
3 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭ
11 ತಿಂಗಳ ಬಳಿಕ ಕ್ರಿಕೆಟ್‌ಗೆ ವಾಪಾಸ್ಸಾಗಲಿರುವ ಜಸ್ಪ್ರೀತ್ ಬುಮ್ರಾ
ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್-ಜಿತೇಶ್ ಶರ್ಮಾ ನಡುವೆ ಫೈಟ್
ಡಬ್ಲಿನ್(ಆ.18): ಭಾರತ ತಂಡದ ಗಮನ ಏಷ್ಯಾಕಪ್, ವಿಶ್ವಕಪ್ ಮೇಲಿದ್ದರೂ, ಶುಕ್ರವಾರದಿಂದ ಆರಂಭಗೊಳ್ಳಲಿರುವ ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ 11 ತಿಂಗಳುಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗುತ್ತಿದ್ದು, ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯು ಹಲವು ಯುವ ಆಟಗಾರರಿಗೆ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಆಯ್ಕೆಗಾರರ ಗಮನ ಸೆಳೆಯಲು ಅವಕಾಶ ನೀಡಲಿದೆ.
ವಿಂಡೀಸ್ ಸರಣಿಯಲ್ಲಿ ಎದುರಾದ ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೂ ಈ ಸರಣಿ ಸಹಕಾರಿಯಾಗಬಹುದು. ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಹೇಳಿದಂತೆ ತಂಡವು ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಆಳ ಕಂಡುಕೊಳ್ಳಬೇಕಿದ್ದು, ಈ ಸರಣಿಯಲ್ಲಿ 8ನೇ ಕ್ರಮಾಂಕಕ್ಕೆ ಬೇಕಿರುವ ಬ್ಯಾಟರ್‌ನನ್ನು ಗುರುತಿಸಲು ತಂಡದ ಆಡಳಿತಕ್ಕೆ ಸಾಧ್ಯವಾಗಲಿದೆಯೇ ಎನ್ನುವ ಕುತೂಹಲವಿದೆ.
ಏಕದಿನ ವಿಶ್ವಕಪ್ ಮಹಾಸಮರ ಗೆಲ್ಲಲು ಇಂಗ್ಲೆಂಡ್ ಮಾಸ್ಟರ್ ಪ್ಲಾನ್..!
ಬುಮ್ರಾ ಜೊತೆ ಮತ್ತೊಬ್ಬ ವೇಗಿ ಪ್ರಸಿದ್ಧ್ ಕೃಷ್ಣ ಸಹ ಹಲವು ತಿಂಗಳುಗಳ ಬಳಿಕ ಕ್ರಿಕೆಟ್‌ಗೆ ವಾಪಸಾಗಲು ಕಾತರಿಸುತ್ತಿದ್ದು, ಏಷ್ಯಾಕಪ್ ಹಾಗೂ ವಿಶ್ವಕಪ್ ತಂಡಕ್ಕೆ ಆಯ್ಕೆ ನಿರೀಕ್ಷೆಯಲ್ಲಿರುವ ಈ ಇಬ್ಬರು, ಫಿಟ್ನೆಸ್ ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ.
ಐಪಿಎಲ್ ತಾರೆಯರಾದ ಜಿತೇಶ್ ಶರ್ಮಾ, ರಿಂಕು ಸಿಂಗ್, ಋತುರಾಜ್ ಗಾಯಕ್ವಾಡ್ ಜೊತೆ ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಕಾಲಿಟ್ಟಿರುವ ಯಶಸ್ವಿ ಜೈಸ್ವಾಲ್ ಮೇಲೂ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೇಶ್ ಜೊತೆ ಸಂಜು ಸ್ಯಾಮ್ಸನ್ ಸ್ಪರ್ಧಿಸಲಿದ್ದಾರೆ.
ಭಾರತ-ಪಾಕಿಸ್ತಾನ ಏಷ್ಯಾಕಪ್ ಟಿಕೆಟ್ ಖರೀದಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಇನ್ನು ಪ್ರಧಾನ ತಂಡದಲ್ಲಿ ಆಲ್ರೌಂಡರ್ ಸ್ಥಾನ ಪಡೆಯಲು ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್ ಹಾಗೂ ಶಿವಂ ದುಬೆ ನಡುವೆಯೂ ಪ್ರಬಲ ಪೈಪೋಟಿ ಏರ್ಪಡಬಹುದು. ಮತ್ತೊಂದೆಡೆ 2024ರ ವಿಶ್ವಕಪ್‌ಗೆ ಅರ್ಹತೆ ಪಡೆದ ಖುಷಿಯಲ್ಲಿರುವ ಆತಿಥೇಯ ಐರ್ಲೆಂಡ್, ಭಾರತವನ್ನು ಬಗ್ಗುಬಡಿದು ವಿಶ್ವ ಕ್ರಿಕೆಟ್‌ನ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ.
ಒಟ್ಟು ಮುಖಾಮುಖಿ: 05
ಭಾರತ: 05
ಐರ್ಲೆಂಡ್: 00
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮಾ, ಶಿವಂ ದುಬೆ, ವಾಷಿಂಗ್ಟನ್ ಸುಂದರ್/ಶಾಬಾಜ್ ಅಹಮ್ಮದ್, ಅರ್ಶ್‌ದೀಪ್ ಸಿಂಗ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ(ನಾಯಕ), ಪ್ರಸಿದ್ಧ್ ಕೃಷ್ಣ.
ಐರ್ಲೆಂಡ್: ಪೌಲ್ ಸ್ಟರ್ಲಿಂಗ್(ನಾಯಕ), ಬಾಲ್ಬರ್ನಿ, ಟಕರ್, ಟೆಕ್ಟರ್, ಕ್ಯಾಂಫರ್, ಫಿಯೋನ್ ಹ್ಯಾಂಡ್, ಡಾಕ್ರೆಲ್, ಮಾರ್ಕ್ ಅಡೈರ್, ಮೆಕ್ಕಾರ್ಥಿ, ಜೋಶ್ ಲಿಟ್ಲ್, ಬೆನ್ ವೈಟ್.
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್ 18
ಪಂದ್ಯಕ್ಕೆ ಮಳೆ ಭೀತಿ
ಶುಕ್ರವಾರ ಸ್ಥಳೀಯ ಕಾಲಮಾನ ಸಂಜೆ 4ರಿಂದ ಡಬ್ಲಿನ್‌ನಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಡಬ್ಲಿನ್‌ನ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 167 ರನ್ ಇದ್ದು, ಮಳೆ ಮುನ್ಸೂಚನೆ ಇರುವ ಕಾರಣ ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡುವ ಸಾಧ್ಯತೆ ಹೆಚ್ಚು.