ಮಹಾರಾಜ ಟ್ರೋಫಿ ಫೈನಲ್ ಪ್ರವೇಶಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ಮೈಸೂರು ವಾರಿಯರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಗುಲ್ಬರ್ಗಾಸ್ಪೋಟಕ 96 ರನ್ ಬಾರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ದೇವದತ್ ಪಡಿಕ್ಕಲ್

ಬೆಂಗಳೂರು(ಆ.26): ದೇವದತ್‌ ಪಡಿಕ್ಕಲ್‌ ಅಬ್ಬರದ ನೆರವಿನಿಂದ ಮೈಸೂರು ವಾರಿಯ​ರ್ಸ್‌ ವಿರುದ್ಧದ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ 6 ವಿಕೆಟ್‌ ಗೆಲುವು ಸಾಧಿಸಿದ್ದು, ಚೊಚ್ಚಲ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್‌ ಪ್ರವೇಶಿಸಿದೆ. ಶುಕ್ರವಾರ ಫೈನಲ್‌ನಲ್ಲಿ ಬೆಂಗಳೂರು ಬ್ಲಾಸ್ಟ​ರ್ಸ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಮಂಗಳವಾರ ನಡೆದಿದ್ದ ಕ್ವಾಲಿಫೈಯರ್‌-1ರಲ್ಲಿ ಗುಲ್ಬರ್ಗಾ ವಿರುದ್ಧವೇ ಗೆದ್ದಿದ್ದ ಬೆಂಗಳೂರು ಬ್ಲಾಸ್ಟರ್ಸ್‌ ನೇರವಾಗಿ ಫೈನಲ್‌ಗೇರಿತ್ತು.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮೈಸೂರು 20 ಓವರಲ್ಲಿ 5 ವಿಕೆಟ್‌ಗೆ 157 ರನ್‌ ಕಲೆ ಹಾಕಿತು. ನಾಯಕ ಕರುಣ್‌ ನಾಯರ್‌ 42, ಪವನ್‌ ದೇಶಪಾಂಡೆ 38 ರನ್‌ ಗಳಿಸಿದರೆ, ನಾಗ ಭರತ್‌ ಕೊನೆಯಲ್ಲಿ 12 ಎಸೆತಗಳಲ್ಲಿ ಔಟಾಗದೆ 27 ರನ್‌ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ವಿದ್ವತ್‌ ಕಾವೇರಪ್ಪ, ಕುಶಾಲ್‌ ವಧ್ವಾಣಿ ತಲಾ 2 ವಿಕೆಟ್‌ ಕಿತ್ತರು.

ಸಾಧಾರಣ ಗುರಿ ಬೆನ್ನತ್ತಿದ ಗುಲ್ಬರ್ಗಾ 19.4 ಓವರ್‌ಗಳಲ್ಲಿ ಗುರಿ ತಲುಪಿತು. 11.3 ಓವರಲ್ಲಿ 78ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಸೋಲಿನತ್ತ ಮುಖಮಾಡಿತ್ತು. ಆದರೆ ದೇವದತ್‌ ಪಡಿಕ್ಕಲ್‌(64 ಎಸೆತಗಳಲ್ಲಿ ಔಟಾಗದೆ 96) ಹಾಗೂ ಮನೋಜ್‌ ಭಂಡಾಜೆ(35) ಭರ್ಜರಿ ಆಟದ ಮೂಲಕ ತಂಡವನ್ನು ಫೈನಲ್‌ಗೇರಿಸಿದರು. ಪವನ್‌ ದೇಶಪಾಂಡೆ 16 ರನ್‌ಗೆ 2 ವಿಕೆಟ್‌ ಕಿತ್ತರು.

Asia Cup 2022 ಟೂರ್ನಿಗೂ ಮುನ್ನ ಬಾಬರ್ ಅಜಂ ಕೈ ಕುಲುಕಿದ ವಿರಾಟ್ ಕೊಹ್ಲಿ..! ವಿಡಿಯೋ ವೈರಲ್

ಸ್ಕೋರ್‌:

ಮೈಸೂರು 20 ಓವರಲ್ಲಿ 157/5 (ಕರುಣ್‌ 42, ದೇಶಪಾಂಡೆ 38, ಕುಶಾಲ್‌ 2-17) 
ಗುಲ್ಬರ್ಗಾ 19.4 ಓವರಲ್ಲಿ 158/4 (ಪಡಿಕ್ಕಲ್‌ 96*, ಮನೋಜ್‌ 35, ದೇಶಪಾಂಡೆ 2-26)

ಪಂದ್ಯಶ್ರೇಷ್ಠ: ಪವನ್‌ ದೇಶಪಾಂಡೆ

2ನೇ ಟೆಸ್ಟ್‌: ದಕ್ಷಿಣ ಆಫ್ರಿಕಾ 151 ರನ್‌ಗೆ ಆಲೌಟ್‌

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್‌್ಸನಲ್ಲಿ ಕೇವಲ 151 ರನ್‌ಗೆ ಆಲೌಟಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಇಂಗ್ಲೆಂಡ್‌ ವೇಗಿಗಳ ದಾಳಿಗೆ ತತ್ತರಿಸಿತು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕಗಿಸೊ ರಬಾಡ(36) ತಂಡದ ಪರ ಗರಿಷ್ಠ ರನ್‌ ಬಾರಿಸಿದರೆ, ಕೀಗನ್‌ ಪೀಟರ್ಸನ್‌ 21, ಕೈಲ್‌ ವೆರೈನ್‌ 21 ರನ್‌ ಕೊಡುಗೆ ನೀಡಿದರು. ಹಿರಿಯ ವೇಗಿಗಳಾದ ಜೇಮ್ಸ್‌ ಆ್ಯಂಡರ್‌ಸನ್‌ ಹಾಗೂ ಸ್ಟುವರ್ಚ್‌ ಬ್ರಾಡ್‌ ತಲಾ 3, ನಾಯಕ ಬೆನ್‌ ಸ್ಟೋಕ್ಸ್‌ 2 ವಿಕೆಟ್‌ ಪಡೆದರು.

ಒಂದೇ ದೇಶದಲ್ಲಿ 100 ಟೆಸ್ಟ್‌ ಆಡಿದ ಮೊದಲಿಗ ಜೇಮ್ಸ್‌ ಆ್ಯಂಡರ್‌ಸನ್‌!

ಮ್ಯಾಂಚೆಸ್ಟರ್‌: ಒಂದು ದೇಶದಲ್ಲಿ 100 ಟೆಸ್ಟ್‌ ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ಇಂಗ್ಲೆಂಡ್‌ ದಿಗ್ಗಜ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ಬರೆದಿದ್ದಾರೆ. ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ ಅವರು ಇಂಗ್ಲೆಂಡ್‌ ನೆಲದಲ್ಲಿ 100ನೇ ಪಂದ್ಯ ಆಡಿದ ಮೈಲಿಗಲ್ಲು ಸಾಧಿಸಿದರು. 

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ ಪಾದಾರ್ಪಣೆ ಮಾಡಿದ್ದ ಅವರಿಗೆ ಇದು ಒಟ್ಟಾರೆ 174ನೇ ಟೆಸ್ಟ್‌. ಇನ್ನು, ಭಾರತದಲ್ಲಿ 94 ಟೆಸ್ಟ್‌ ಆಡಿದ್ದ ಸಚಿನ್‌ ತೆಂಡುಲ್ಕರ್‌ ಹಾಗೂ ಆಸ್ಪ್ರೇಲಿಯಾದಲ್ಲಿ 92 ಟೆಸ್ಟ್‌ ಆಡಿರುವ ರಿಕಿ ಪಾಂಟಿಂಗ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.