ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಸತತ 2ನೇ ಜಯ ಸಾಧಿಸಿದೆ. ಸೋಮವಾರ ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಜಯಿಸಿತು.

ಬೆಂಗಳೂರು(ಆ.15): ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ ಸತತ 2ನೇ ಜಯ ಸಾಧಿಸಿದೆ. ಸೋಮವಾರ ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್‌ ಮಾಡಿದ ಗುಲ್ಬರ್ಗ 19.3 ಓವರಲ್ಲಿ 138 ರನ್‌ಗೆ ಆಲೌಟ್‌ ಆಯಿತು. ಮ್ಯಾಕ್‌ನೀಲ್‌ 23 ರನ್‌ ಗಳಿಸಿ ತಂಡದ ಪರ ಗರಿಷ್ಠ ರನ್‌ ಸರದಾರ ಎನಿಸಿದರು. ಮನ್ವಂತ್‌ 3, ವಿದ್ವತ್‌ ಹಾಗೂ ಲವೀಶ್‌ ತಲಾ 2 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿಗೆ ಲುವ್ನಿತ್‌(61) ಹಾಗೂ ಕೃಷ್ಣನ್‌(47) ನಡುವೆ 2ನೇ ವಿಕೆಟ್‌ಗೆ ಮೂಡಿಬಂದ 116 ರನ್‌ ಜೊತೆಯಾಟ ನೆರವಾಯಿತು. 15.2 ಓವರಲ್ಲಿ ತಂಡ 3 ವಿಕೆಟ್‌ಗೆ 141 ರನ್‌ ಗಳಿಸಿತು.

ಶಿವಮೊಗ್ಗಕ್ಕೆ ಜಯ

ಸೋಮವಾರದ ಮೊದಲ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಶಿವಮೊಗ್ಗ ಲಯನ್ಸ್‌ 9 ರನ್‌ ಜಯ ಸಾಧಿಸಿ ಶುಭಾರಂಭ ಮಾಡಿತು. ಅಭಿನವ್‌ ಮನೋಹರ್‌(26 ಎಸೆತದಲ್ಲಿ 50), ಶ್ರೇಯಸ್‌ ಗೋಪಾಲ್‌(46)ರ ಆಕರ್ಷಕ ಆಟದ ನೆರವಿನಿಂದ ಶಿವಮೊಗ್ಗ 5 ವಿಕೆಟ್‌ಗೆ 176 ರನ್‌ ಗಳಿಸಿತು. ಗ್ಲೀಶ್ವರ್‌ 4 ವಿಕೆಟ್‌ ಕಿತ್ತರು. ಅನಿರುದ್ಧ ಜೋಶಿ(50) ಹಾಗೂ ಕೆ.ವಿ.ಸಿದ್ಧಾರ್ಥ್‌(46) ಹೋರಾಟದ ಹೊರತಾಗಿಯೂ ಮಂಗಳೂರು 7 ವಿಕೆಟ್‌ಗೆ 167 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಇವರೇ ನೋಡಿ ಕ್ರಿಕೆಟಿಗ ಧೋನಿ ಸಹೋದರಿ, ವೃತ್ತಿಯಲ್ಲಿ ಟೀಚರ್‌, ಮದುವೆಯಾಗಿದ್ದು ಮಹಿ ಸ್ನೇಹಿತನನ್ನೇ!

ಕ್ರಿಕೆಟ್‌ಗೆ ಇಂಗ್ಲೆಂಡ್‌ ವೇಗಿ ಫಿನ್‌ ಗುಡ್‌ಬೈ

ಲಂಡನ್‌: ಇಂಗ್ಲೆಂಡ್‌ನ ವೇಗಿ ಸ್ಟೀವನ್‌ ಫಿನ್‌ ಸೋಮವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಬಹಳ ಸಮಯದಿಂದ ಮಂಡಿ ನೋವಿನಿಂದ ಬಳಲುತ್ತಿರುವ ಫಿನ್‌, ತಮ್ಮ 18 ವರ್ಷಗಳ ಕ್ರಿಕೆಟ್‌ ಬದುಕಿಗೆ ತೆರೆ ಎಳೆಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಫಿನ್‌ ಇಂಗ್ಲೆಂಡ್‌ ಪರ 36 ಟೆಸ್ಟ್‌, 69 ಏಕದಿನ, 21 ಟಿ20 ಪಂದ್ಯಗಳನ್ನಾಡಿ 200ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದಾರೆ.

ಪೊಲೀಸ್‌ ಬೊಂಬಾಟ್‌ ಬೌಲಿಂಗ್‌: ವಿಡಿಯೋ ವೈರಲ್‌

ಜೈಪುರ: ಪೊಲೀಸ್‌ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲಿಯೇ ನೆಟ್ಸ್‌ನಲ್ಲಿ ಮಾರಕ ಬೌಲ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ದುರ್ಜನ್‌ ಹರ್ಸಾನಿ ಎಂಬವರು ಜೈಪುರದ ನೆಟ್ಸ್‌ನಲ್ಲಿ ಹಲವರನ್ನು ಬೌಲ್ಡ್‌ ಮಾಡುತ್ತಿರುವ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಪೈಕಿ ಒಂದನ್ನು ಮುಂಬೈ ಇಂಡಿಯನ್ಸ್‌ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಆ ವಿಡಿಯೋ ವೈರಲ್‌ ಆಗಿದ್ದು, ಸುಮಾರು 40 ಲಕ್ಷ ವೀಕ್ಷಣೆ ಕಂಡಿದೆ.

ODI World Cup 2023: ಭಾರತಕ್ಕೆ ಬರುವ ಪಾಕಿಸ್ತಾನಕ್ಕೆ ವಿಶೇಷ ಸವಲತ್ತೇನೂ ಇಲ್ಲ..! ಪಾಕ್‌ಗೆ ಮುಖಭಂಗ?

ಮೈದಾನದಲ್ಲೇ ಹಾವು ಪ್ರತ್ಯಕ್ಷ: ತಪ್ಪಿದ ಅಪಾಯ

ಕೊಲಂಬೊ: ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಮತ್ತೊಮ್ಮೆ ಮೈದಾನದಲ್ಲೇ ಹಾವು ಪ್ರತ್ಯಕ್ಷಗೊಂಡಿದ್ದು, ಈ ಬಾರಿ ಆಟಗಾರ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶನಿವಾರ ಬಿ ಲವ್‌ ಕ್ಯಾಂಡಿ ಹಾಗೂ ಜಾಫ್‌ನಾ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆಯಿತು. ಕಿಂಗ್ಸ್‌ನ ಇನ್ನಿಂಗ್ಸ್‌ ವೇಳೆ ಫೀಲ್ಡಿಂಗ್‌ ನಿರತರಾಗಿದ್ದ ಬಿಎಲ್‌ಕೆ ತಂಡದ ಇಸುರು ಉದಾನ ಅವರ ಸಮೀಪವೇ ಹಾವು ಕಂಡುಬಂದಿದೆ. ಹಾವು ತನ್ನತ್ತ ಬರುತ್ತಿರುವುದನ್ನು ಆರಂಭದಲ್ಲಿ ಗಮನಿಸದ ಉದಾನ, ತನ್ನ ಹತ್ತಿರಕ್ಕೆ ಬಂದಾಗ ನೋಡಿ ಬೆಚ್ಚಿ ಬಿದ್ದಿದ್ದಾರೆ. ಇದರ ಫೋಟೋ, ವಿಡಿಯೋ ವೈರಲ್‌ ಆಗಿದೆ.